ಬೆಂಗಳೂರು: ಬೆಂಗಳೂರು ಮತ್ತು ನೆರೆಯ ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ 160 ಬಾಂಗ್ಲಾದೇಶಿ ಪ್ರಜೆಗಳನ್ನು ಕಾನೂನು ಪ್ರಕ್ರಿಯೆಗಳ ನಂತರ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ನಿನ್ನೆ ಗಡೀಪಾರು ಪ್ರಕ್ರಿಯೆ ನಡೆಯಿತು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರು ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿದ್ದವು. ಭಾರತೀಯ ವಾಯುಪಡೆಯೊಂದಿಗೆ ಸಮನ್ವಯ ಸಾಧಿಸಿದ ನಂತರ, ಈ ಅಕ್ರಮ ವಲಸಿಗರನ್ನು ವಿಶೇಷ ವಿಮಾನದ ಮೂಲಕ ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲಾಯಿತು. FRRO ಗಡಿ ಭದ್ರತಾ ಪಡೆಯೊಂದಿಗೆ (BSF) ಸಮನ್ವಯ ಸಾಧಿಸಿತು ಎಂದು ಅಧಿಕಾರಿ ತಿಳಿಸಿದರು.
ಬೆಳ್ಳಂದೂರು, ಬೇಗೂರು, ವರ್ತೂರು, ಬಂಡೆಪಾಳ್ಯ ಮತ್ತು ಮಾರತಹಳ್ಳಿಯಿಂದ ಇವರನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಚಿಕ್ಕಮಗಳೂರು ಮತ್ತು ಗದಗ ಜಿಲ್ಲೆಗಳಿಂದ ಇತರ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ಹೇಳಿದರು. ಇವರನ್ನು ಬೆಂಗಳೂರಿನಿಂದ ವಿಮಾನದ ಮೂಲಕ ರಾಷ್ಟ್ರೀಯ ಗಡಿಗೆ ಕರೆದೊಯ್ಯಲಾಯಿತು. ಅಲ್ಲಿ ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಬಾಂಗ್ಲಾದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಬಗ್ಗೆ ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ, ಪೊಲೀಸರು ಶೆಡ್‌ಗಳು ಮತ್ತು ಶಿಬಿರಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪರಿಶೀಲನಾ ಕಾರ್ಯಾಚರಣೆಗಳನ್ನು ನಡೆಸಿದರು. ಮಾನ್ಯ ದಾಖಲೆಗಳಿಲ್ಲದ ವಿದೇಶಿ ಪ್ರಜೆಗಳೆಂದು ಕಂಡುಬಂದವರನ್ನು ಮೊದಲು ಬಂಧನ ಕೇಂದ್ರಗಳಿಗೆ ಕಳುಹಿಸಲಾಯಿತು. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅವರನ್ನು ವಾಪಸ್ ಕಳುಹಿಸಲಾಯಿತು ಎಂದು ಅಧಿಕಾರಿ ಹೇಳಿದರು.
ವಾಪಸ್ ಕಳುಹಿಸಲಾದವರು ದೇಶಕ್ಕೆ ಮತ್ತೆ ಅಕ್ರಮವಾಗಿ ಮರಳದಂತೆ ಖಚಿತಪಡಿಸಿಕೊಳ್ಳುವುದೂ ಈ ಕಾರ್ಯಾಚರಣೆಯ ಭಾಗವಾಗಿದೆ ಎಂದು ಪೊಲೀಸರು ತಿಳಿಸಿದರು. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು ಇತ್ತೀಚೆಗಷ್ಟೇ 31 ಬಾಂಗ್ಲಾದೇಶಿ ಪ್ರಜೆಗಳನ್ನು ಕೋಲ್ಕತ್ತಾ ಮೂಲಕ ವಾಪಸ್ ಕಳುಹಿಸಿದ್ದರು ಎಂದು ಅವರು ಹೇಳಿದರು.