ಕೊಪ್ಪಳ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಅವರು ಗುರುವಾರ ಒತ್ತಾಯಿಸಿದ್ದಾರೆ.
ಇಂದು ಕೊಪ್ಪಳದ ಶಾದಿ ಮಹಲ್‌ನಲ್ಲಿ ಎಸ್‌ಐಆರ್ ಪರಿಶೋಧನಾ ಪ್ರವಾಸ ಕಾರ್ಯಕ್ರಮದ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಬಿಜೆಪಿ ಮತ್ತು ಚುನಾವಣಾ ಆಯೋಗವು ಎಸ್‌ಐಆರ್ ಅನ್ನು ಬೇಕಂತಲೇ ಮಾಡಿದ್ದು ಎಸ್‌ಐಆರ್ ಪ್ರಕ್ರಿಯೆ ಕುರಿತು ಹಲವು ಸತ್ಯಗಳು ಹೊರಬರುತ್ತಿವೆ ಎಂದರು.
ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡುವುದಷ್ಟೇ ಅಲ್ಲ, ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟಬೇಕು. ಇದಾದ ನಂತರ ಜ್ಞಾನೇಶ್ ಕುಮಾರ್ ಹಿಂದೆ ಇರುವ ಮಹಾ ಪ್ರಭುಗಳನ್ನು ಜೈಲಿಗಟ್ಟುವ ಕೆಲಸ ಮಾಡಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದರು.
400 ಪಾರ್ ಎಂದು ಹೇಳಿದವರನ್ನು 240ಕ್ಕೆ ತಂದಿದ್ದೇವೆ. ಈಗ ಎಸ್‌ಐಆರ್ ಮೂಲಕ ಅರ್ಹ ಮತದಾರರನ್ನು ತೆಗೆದುಹಾಕಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಬಿಜೆಪಿ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ದೇಶಾದ್ಯಂತ ಜಾರಿಯಲ್ಲಿರುವ ವಿಶೇಷ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ(SIR), ಕೇಂದ್ರೀಕೃತ ಐಟಿ ನಿಯಂತ್ರಣ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತ ಚುನಾವಣಾ ಆಯೋಗದ(ECI) ಮುಖ್ಯಸ್ಥರು ಹಾಗೂ ಸದಸ್ಯರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಮತ್ತು ಅಸಮಾಧಾನ ಇದೆ ಎಂಬ ವರದಿಗಳ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.