ಬೆಂಗಳೂರು: ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಬಾಂಗ್ಲಾದೇಶಿ ರೋಗಿಯೊಬ್ಬರ ಪತ್ನಿ ಗಂಭೀರ ಆರೋಪ ಮಾಡಿದ್ದು, ಸುಮಾರು 35.8 ಲಕ್ಷ ರೂಪಾಯಿ ಬಾಕಿ ಬಿಲ್ ಪಾವತಿಸದ ಕಾರಣ ತಮ್ಮ ಪತಿಯ ಮೃತದೇಹವನ್ನು ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆ ಆಡಳಿತ ತಡೆಹಿಡಿದಿದೆ ಎಂದು ಆರೋಪಿಸಿದ್ದಾರೆ.
ಆದರೆ ಆಸ್ಪತ್ರೆ ಈ ಆರೋಪವನ್ನು ನಿರಾಕರಿಸಿದ್ದು, ಬಾಕಿ ಹಣವನ್ನು ಹೊಂದಿಸುವವರೆಗೆ ಮೃತದೇಹವನ್ನು ಶವಾಗಾರದಲ್ಲಿ ಇರಿಸುವಂತೆ ಕುಟುಂಬದವರೇ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಇದೀಗ ಅವರು ಆಸ್ಪತ್ರೆ ಆಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದೆ.
50ರ ಆಸುಪಾಸಿನ ಎಂ.ಡಿ. ಅಬ್ದುಲ್ ಹಕೀಮ್ ಶಬುಜ್ ಅವರು ತೀವ್ರ ಹೃದಯ ಸಂಬಂಧಿ ಸಮಸ್ಯೆಗಳಿಂದ ಸೆಪ್ಟೆಂಬರ್ 8ರಂದು ಹಳೆ ಏರ್ ಪೋರ್ಟ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೆಪ್ಟೆಂಬರ್ 18ರಂದು ಅವರು ಮೃತಪಟ್ಟಿದ್ದರು.
ಆಸ್ಪತ್ರೆ ನಿರ್ದೇಶಕಿ ನಯನಾ ಪೈ ಅವರಿಗೆ ಸಲ್ಲಿಸಿರುವ ಅಧಿಕೃತ ಮನವಿಯಲ್ಲಿ ಶಬುಜ್ ಅವರ ಪತ್ನಿ ಮಿಸ್ಟ್ ತಂಗೀಲಾ ಇಸ್ಲಾಂ ಆಶಾ, 35,79,354 ರೂ ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸುವವರೆಗೆ ಆಸ್ಪತ್ರೆ ಮೃತದೇಹವನ್ನು ಹಸ್ತಾಂತರಿಸಲು ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ.
ವಿದೇಶದಲ್ಲಿ ಸ್ಥಳೀಯ ನೆರವು ಅಥವಾ ಬಾಕಿ ಮೊತ್ತವನ್ನು ಪಾವತಿಸುವ ಸಾಮರ್ಥ್ಯವಿಲ್ಲದೆ ತಾನು ಅತಂತ್ರಳಾಗಿದ್ದೆ. ಆಸ್ಪತ್ರೆ ಆರಂಭದಲ್ಲೇ ಚಿಕಿತ್ಸಾ ವೆಚ್ಚದ ಅಂದಾಜು ನೀಡಿರಲಿಲ್ಲ ಹಾಗೂ ವೆಚ್ಚ ಹೆಚ್ಚಾಗುತ್ತಿದ್ದರೂ ತಮಗೆ ಮಾಹಿತಿ ನೀಡಿರಲಿಲ್ಲ ಎಂದು ತಂಗೀಲಾ ಇಸ್ಲಾಂ ಹೇಳುತ್ತಾರೆ.
ಪ್ರತಿದಿನದ ವಿಳಂಬದಿಂದ ನಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಅವರ ಅಂತ್ಯಕ್ರಿಯೆ ನೆರವೇರಿಸಲು ಹಾಗೂ ಅವರ ಮೃತದೇಹವನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯಲು ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ.
ಯಾವುದೇ ಷರತ್ತು ವಿಧಿಸದೆ ಮೃತದೇಹವನ್ನು ಬಿಡುಗಡೆ ಮಾಡುವುದರ ಜೊತೆಗೆ ಮರಣ ಪ್ರಮಾಣಪತ್ರ, ಡಿಸ್ಚಾರ್ಜ್ ಸಮ್ಮರಿ ಹಾಗೂ ಮೃತದೇಹವನ್ನು ಸಂರಕ್ಷಿಸಿ ಸ್ವದೇಶಕ್ಕೆ ಕಳುಹಿಸಲು ಅಗತ್ಯವಿರುವ ದಾಖಲೆಗಳನ್ನು ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯ್ದೆಯ ಸೆಕ್ಷನ್ 11 ಮತ್ತು ರೋಗಿಗಳ ಹಕ್ಕುಗಳ ಸನ್ನದು ಪ್ರಕಾರ, ಬಾಕಿ ಹಣದ ಕಾರಣಕ್ಕೆ ಆಸ್ಪತ್ರೆಗಳು ಮೃತದೇಹವನ್ನು ತಡೆಹಿಡಿಯುವಂತಿಲ್ಲ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಬಿಲ್ಲಿಂಗ್‌ಗೆ ಸಂಬಂಧಿಸಿದ ವಿವಾದಗಳನ್ನು ಪ್ರತ್ಯೇಕ ಕಾನೂನು ಮಾರ್ಗಗಳ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಆದರೆ ಖಾಸಗಿ ಆಸ್ಪತ್ರೆ ಆರೋಪಗಳನ್ನು ತಳ್ಳಿಹಾಕಿದೆ. ಆಸ್ಪತ್ರೆಯ ಅಂತಾರಾಷ್ಟ್ರೀಯ ರೋಗಿಗಳ ಮಾರಾಟ ವ್ಯವಸ್ಥಾಪಕ ಬಿಪಿನ್ ಥಾಮಸ್ ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ, ರೋಗಿಯನ್ನು ಜೀವಕ್ಕೆ ಅಪಾಯಕಾರಿಯಾದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಹಾಗೂ ತೀವ್ರ ಚಿಕಿತ್ಸೆಯ ಅಗತ್ಯವಿತ್ತು ಎಂದು ತಿಳಿಸಿದ್ದಾರೆ.
ಚಿಕಿತ್ಸಾ ವೆಚ್ಚದ ಬಗ್ಗೆ ನಾವು ಸ್ಪಷ್ಟವಾದ ಅಂದಾಜು ನೀಡಿದ್ದೆವು. ಅವರು ಸುಮಾರು 7 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿಸಿದ್ದರು. ರೋಗಿ ಮೃತಪಟ್ಟ ಬಳಿಕ, ಉಳಿದ ಸುಮಾರು 30 ಲಕ್ಷ ರೂಪಾಯಿ ವ್ಯವಸ್ಥೆ ಮಾಡುವವರೆಗೆ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸುವಂತೆ ಅವರ ಪತ್ನಿ ಹಾಗೂ ಕುಟುಂಬ ಸದಸ್ಯರೇ ನಿರ್ದಿಷ್ಟವಾಗಿ ಮನವಿ ಮಾಡಿದ್ದರು ಎಂದು ಥಾಮಸ್ ಹೇಳಿದ್ದಾರೆ.
“ಬಾಂಗ್ಲಾದೇಶ ಹೈಕಮಿಷನ್ ಮತ್ತು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಗತ್ಯ ಅನುಮತಿ ಹಾಗೂ ಸೂಚನೆಗಳನ್ನು ನೀಡಿದ ಬಳಿಕವಷ್ಟೇ ನಾವು ನಿರ್ಧಾರ ಕೈಗೊಳ್ಳಬಹುದು” ಎಂದು ಅವರು ಹೇಳಿದ್ದಾರೆ.