ತುಂಬಾ ಎಳೆಯ ವಯಸ್ಸಿನಲ್ಲೇ ನನಗೆ ಮದ್ಯದ ರುಚಿ ಹತ್ತಿತ್ತು. ನನ್ನ ಅಪ್ಪ ಚಾಂದ್‌ಭಾಷಾ ಶ್ರಮಜೀವಿ. ಮನೆಯಲ್ಲಿ ನೆಮ್ಮದಿಯಾಗಿ ಕುಳಿತು ಬೀರು ಹೀರುತ್ತಿದ್ದರು. ಅಪ್ಪ ಕುಡಿಯುವಾಗ ನಾನು ಅವರ ಬಳಿ ಹೋಗಿ ನಿಂತುಕೊಳ್ಳುತ್ತಿದ್ದೆ. ನನಗೂ ಬೀರು ಕೊಡುವಂತೆ ದುಂಬಾಲು ಬೀಳುತ್ತಿದ್ದೆ. ಮೊದಮೊದಲು ಅಪ್ಪ ನನ್ನ ಬೇಡಿಕೆಯನ್ನು ನಿರಾಕರಿಸುತ್ತಿದ್ದರು. ಆಗ ನಾನು ಗಟ್ಟಿಯಾಗಿ ಅತ್ತು ಬಿಡುತ್ತಿದ್ದೆ. ನನ್ನ ಕಾಟ ಸಹಿಸಲಾಗದೆ ಅಪ್ಪ ಕೊಂಚವೇ ಕೊಂಚ ಬೀರನ್ನು ಒಂದು ಗ್ಲಾಸಿಗೆ ಸುರುವಿ ಕೊಡುತ್ತಿದ್ದರು. ನಾನು ಅದನ್ನು ಒಂದೇ ಉಸಿರಿಗೆ ಒಳ ಸೇರುಸುತ್ತಿದ್ದೆ. ಅದರ ನಂತರ ನಾಲಗೆಯಿಂದ ತುಟಿಗಳನ್ನು ಸವರಿ ತಾಳಾತ್ಮಕವಾಗಿ ಚಪ್ಪರಿಸುತ್ತಿದ್ದೆ. ಆಗ ಆಪ್ಪ ಕುಡಿಯುವುದನ್ನು ನಿಲ್ಲಿಸಿ ನನ್ನ ಮುಖವನ್ನೇ ದಿಟ್ಟಿಸುತ್ತಿದ್ದರು. ನನ್ನ ಮುಗ್ಧತೆಗೆ ಅಪ್ಪ ಕುಲು ಕುಲು ನಕ್ಕು ಬಿಡುತ್ತಿದ್ದರು. ಅದಾದ ಬಳಿಕ ಅಪ್ಪ ಬೀರು ಕುಡಿಯುವಾಗಲೆಲ್ಲ ನನ್ನನ್ನೂ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಿದ್ದರು. ಅರ್ಧ ಲೋಟ ಮಾತ್ರ ಕೊಡುತ್ತಿದ್ದ ಅಪ್ಪ ಕ್ರಮೇಣ ಅದನ್ನು ಒಂದು ಭರ್ತಿ ಲೋಟಕ್ಕೆ ಏರಿಸಿದರು. ಇದು ನನ್ನ ಮದ್ಯಪಾನದ ಆರಂಭ.
ನಾನು ತಮಿಳು ಧಾರಾವಾಹಿಯೊಂದರಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದೆ. ಅದರ ನಿರ್ದೇಶಕರು ಮೋಹನ್‌ರಾಜ್‌ರವರು. ಅವರು ನನ್ನ ಅಪ್ಪನ ವಯಸ್ಸಿನವರು. ಚಿತ್ರೀಕರಣದ ನಡುವೆ ಒಂದಿನ ನಾನು ಅವರನ್ನು ಬೀರ್ ತರಿಸಿಕೊಡುವಂತೆ ಕೇಳಿಕೊಂಡೆ. ಅವರು ನನ್ನನ್ನು ಕರೆಯುತ್ತಿದ್ದುದೇ 'ಮಗಳೇ' ಎಂದು. ನನ್ನ ಬೇಡಿಕೆಯನ್ನು ಅವರು ನಿರಾಕರಿಸಲಿಲ್ಲ. ಒಮ್ಮೆ ನನ್ನನ್ನು ದುರುಗುಟ್ಟಿಕೊಂಡು ನೋಡಿ ತಣ್ಣಗಾದರು. ಅಂದಿನಿಂದ ದಿನವೂ ನನಗೆ ಶೂಟಿಂಗ್ ಮುಗಿದ ಕೂಡಲೇ ಬೀರು ತರಿಸಿಕೊಡುತ್ತಿದ್ದರು. ಬೀರು ಕುಡಿದರೆ ನನಗೆ ತೂಕಡಿಕೆ ಬಂದು ಬಿಡುತ್ತದೆ. ಕ್ರಮೇಣ ಅದರ ಸೇವನೆ ಕಡಿಮೆಯಾಗಿ ಮದ್ಯದ ಭಿನ್ನ ಬ್ರಾಂಡ್‌ಗಳ ರುಚಿಯನ್ನು ಸವಿಯತೊಡಗಿದೆ.
ಈಗ ನಾನು ಗಂಡು- ಹೆಣ್ಣುಗಳೆಂದು ಭೇದವಿಲ್ಲದೆ ಎಲ್ಲರೊಂದಿಗೂ ಕುಡಿಯುತ್ತೇನೆ. ರಾತ್ರಿಯ ನೀರವತೆಯಲ್ಲಿ ಕುಡಿಯುವುದೆಂದರೆ ತುಂಬಾ ಆಪ್ಯಾಯಮಾನ. ಗಂಡಸರಿಗಿಂತಲೂ ಕುಡಿಯಲು ಒಳ್ಳೆಯ 'ಕಂಪನಿ' ಹೆಂಗಸರು. ಗಂಡಸರೊಂದಿಗಿನ ಕುಡಿತ ಕೆಲವೊಮ್ಮೆ ಕೆಟ್ಟ ಅನುಭವ ತರಿಸುತ್ತದೆ. ಮೊದಲ ಪೆಗ್ ಒಳಗೆ ಹೋದ ಕೂಡಲೇ ಅವರು ಉಪದೇಶಕನ ಪಾತ್ರದಲ್ಲಿ ಅಭಿನಯಿಸುತ್ತಾರೆ. ಮೂರನೇ ಪೆಗ್‌ಗೆ ಅವರು ನನ್ನ ನಟನೆಯ ಬಗ್ಗೆ ಹೊಗಳುತ್ತಾರೆ. ಮಾತು ಕ್ರಮೇಣ ನನ್ನ ಅಂಗಾಂಗ ಸೌಂದರ್ಯದ ವರ್ಣನೆಯತ್ತ ಜಾರುತ್ತದೆ. ಆಗ ಅವರ ಕಾಮದ ಕಣ್ಣುಗಳು ನನ್ನ ಅಂಗಾಂಗಗಳನ್ನು ಕುಕ್ಕಿ ಕುಕ್ಕಿ ತಿನ್ನತೊಡಗುತ್ತವೆ. ನಾಲ್ಕನೇ ಪೆಗ್ ಒಳಸೇರಿದ ಕೂಡಲೇ ಅವರು ಎದ್ದು ನಿಂತು, ಟಾಯ್ಲೆಟ್ಟಿಗೆ ಹೋಗಿ ಬರುತ್ತೇನೆ ಎನ್ನುತ್ತಾರೆ. ಮೂತ್ರ ಶಂಕೆ ತೀರಿಸಿ ಬಂದವರು ನೇರವಾಗಿ ಬಂದು ನನ್ನ ಮೈ ಸೋಕುವಂತೆ ಕುಳಿತುಕೊಳ್ಳುತ್ತಾರೆ. ಟಾಯ್ಲೆಟ್ಟಿಗೆ ಹೋಗುವ ಮೊದಲು ಅವರು ಎದ್ದು ನಿಲ್ಲುವುದು ತುಂಬಾ ಸ್ವಾರಸ್ಯಕರ. ನೆಟ್ಟಗೆ ನಿಂತು ನನ್ನನ್ನು ದಿಟ್ಟಿಸುತ್ತಾರೆ. ಕಾಮ ಮಿಶ್ರಿತ ಅಪರೂಪದ ನಗು ನನ್ನತ್ತ ಬೀರುತ್ತಾರೆ. ತಾನು ಒಳ್ಳೆಯ ಆರೋಗ್ಯವಂತನೆಂದೂ, ಗಟ್ಟಿಗನೆಂದೂ ಸಾಬೀತು ಪಡಿಸಲು ಕೆಲವು ಚೇಷ್ಟೆಗಳನ್ನು ತೋರಿಸುತ್ತಾರೆ. ಸೊಂಟದಿಂದ ಜಾರುತ್ತಿರುವ ಪ್ಯಾಂಟನ್ನು ಜೋರಾಗಿ ಮೆಲಕ್ಕೆಳೆದು ಈಗಲೇ ಬಂದು ಬಿಡುತ್ತೇನೆಂದು ಹೋಗುತ್ತಾರೆ. ನನ್ನ ಪಕ್ಕದಲ್ಲಿ ಕೂರುವ ಸಲುವಾಗಿಯೇ ಈ ವ್ಯಕ್ತಿ ಬಾತ್‌ರೂಮಿಗೆ ಹೋಗುವುದೆಂದು ನನಗೆ ಗೊತ್ತು. ಮೊದಲೆಲ್ಲ ನನಗೆ ತಿಳಿಯುತ್ತಿರಲಿಲ್ಲ. ಮೂತ್ರಶಂಕೆ ಮುಗಿಸಿ ಬಂದ ನಂತರ ಗಂಡಸಿನ ನಿಜವಾದ ಬಣ್ಣ ಬಯಲಾಗುತ್ತದೆ. ಅವನೊಳಗಿನ ಮೃಗೀಯ ಭಾವನೆ ಹೊರಬರಲು ತವಕಿಸುತ್ತದೆ. ನನ್ನ ಕೊಬ್ಬಿದ ಭಾಗಗಳನ್ನು ತಡವಲು ತಹತಹಿಸುತ್ತಿರುತ್ತಾನೆ. ಕಾಮೋದ್ರೇಕ ನಡವಳಿಕೆಗಳು ಪ್ರಕಟಗೊಳ್ಳುತ್ತವೆ. ಕೆಲವರು ನಿದ್ರೆ ಬಂದವರಂತೆ ನಟಿಸುತ್ತಾರೆ. ಆ ಅಭಿನಯ ಶಯ್ಯಾಗೃಹಕ್ಕೆ ನನಗಿರುವ ಆಹ್ವಾನವೆಂಬುದು ಸ್ಪಷ್ಟ. ಕಾಮದ ಅಮಲು ತಲೆಗೆ ಹತ್ತಿಸಿಕೊಂಡಲ್ಲ, ನಾನು ನನ್ನ ಪುರುಷ ಸ್ನೇಹಿತರನ್ನು ಮದ್ಯಪಾನದ ಪಾರ್ಟಿಗೆ ಆಹ್ವಾನಿಸುವುದು. ಅದು ಕೇವಲ ಸೌಹಾರ್ದ ಸಂಬಂಧದ ಸಂಕೇತ. ಆದರೆ ಅದನ್ನು ಅವರು ತಪ್ಪಾಗಿ ತಿಳಿಯುತ್ತಾರೆ. 'ಶಕೀಲ ಕರೆದಿದ್ದು ಅವಳು ನನ್ನನ್ನು ಇಷ್ಟಪಟ್ಟು, ಅವಳನ್ನು ತೃಪ್ತಿಪಡಿಸಬೇಕಂತೆ' ಎಂದು ಬೂಸಿ ಬಿಟ್ಟ ಅನೇಕರ ಬಗ್ಗೆ ಆಮೇಲೆ ಗೊತ್ತಾಗಿದೆ. ನನ್ನ ಗೆಳೆತನವನ್ನು, ಸೌಹಾರ್ದಯುಕ್ತ ಆಹ್ವಾನವನ್ನು ಕಾಮತೃಷೆಗೆಂದು ಅಪಾರ್ಥ ಮಾಡಿಕೊಂಡಿದ್ದಕ್ಕೆ ನನಗೆ ಅತ್ಯಂತ ದುಃಖವಿದೆ. ನಾನು ಯಾರನ್ನು ಗಣ್ಯರೆಂದು ತಿಳಿದಿರುತ್ತೇನೆಯೋ ಅವರಲ್ಲೆಲ್ಲ ಇಂಥದೊಂದು ಮೃಗೀಯ ಬಯಕೆ ಇತ್ತೆಂಬುದು ನಾನರಿತ ಸತ್ಯ.
ಬಹುತೇಕ ಎಲ್ಲ ಗಂಡಸರೊಂದಿಗಿನ ಮದ್ಯದ ಪಾರ್ಟಿಯಲ್ಲಿ ಇದೇ ಅನುಭವ. ನಾಲ್ಕನೇ ಪೆಗ್ಗು ಒಳ ಸೇರಿದೊಡನೆ ಬಾತ್‌ರೂಮಿಗೆ ಹೋಗುತ್ತಾರೆ. ಹಿಂತಿರುಗಿ ಬಂದವರು ನನ್ನ ಸಮೀಪದಲ್ಲಿ ಕೂರುತ್ತಾರೆ. ಮೂತ್ರಶಂಕೆ ತೀರಿಸುವ ಆಸಕ್ತಿ ಅವರು ತೋರಿಸಿದ ಕೂಡಲೇ ಅಂದಿನ ಪಾನಗೋಷ್ಠಿಗೆ ಮಂಗಳ ಹಾಡುತ್ತೇನೆ. ಒಬ್ಬ ಗಂಡಸಿಗೆ ನನ್ನ ಮೇಲೆ ಇಷ್ಟವಿರಬಹುದು ಅಥವಾ ನನ್ನ ದೇಹದ ಮೇಲೆ ಆಸಕ್ತಿ ಇರಬಹುದು. ಅದನ್ನು ನೇರವಾಗಿ ಕೇಳುವುದಕ್ಕಿಂತಲೂ ಹೆಚ್ಚು ಅಶ್ಲೀಲ ಇಂಥ ನಡವಳಿಕೆಗಳು, ಅದಕ್ಕಿಂತಲೂ ದುಃಖದ ಸಂಗತಿಯೆಂದರೆ ಹೆಣ್ಣು ಕುಡಿದ ಕೂಡಲೇ ತನ್ನವಳಾಗಿ ಬಿಡುತ್ತಾಳೆಂಬ ಗಂಡಸರ ಭ್ರಮೆ. ಮಾತಿನಿಂದ ಸುಖ ನೀಡಿ, ದೊಡ್ಡ ದೊಡ್ಡ 'ಆಫರ್'ಗಳನ್ನು ಘೋಷಿಸಿ ಅವರು ನನ್ನನ್ನು ಮಲಗುವ ಕೋಣೆಗೆ ಆಹ್ವಾನಿಸುತ್ತಾರೆ. ಅದಲ್ಲವಾದರೆ ಅದಕ್ಕಾಗಿ ಅವರು ನನ್ನ ದೇಹದ ಕೆಲವು ಸ್ಥಳಗಳನ್ನು ಸ್ಪರ್ಶಿಸಲೆತ್ನಿಸುತ್ತಾರೆ. ಅದರೊಂದಿಗೆ ನನ್ನ ಮತ್ತು ಆತನ ನಡುವಿನ ಗೆಳೆತನ ಸೌಹಾರ್ದ ಸಂಬಂಧಗಳು ಕೊನೆಯಾಗುತ್ತವೆ. ಒಳ್ಳೆಯ ಮನುಷ್ಯನೊಂದಿಗೂ ಈಗ ಕುಡಿಯುತ್ತಿಲ್ಲ. ಏಕೆ ಸುಮ್ಮನೆ ವೈರಿಗಳನ್ನು ಸೃಷ್ಟಿಸುವುದು?
ಮಹಿಳೆಯರೊಂದಿಗಿನ ಮದ್ಯಪಾನ ನನಗೆ ತುಂಬಾ ಇಷ್ಟದ ವಿಷಯ. ಅದೊಂದು ಆನಂದದ ಕ್ಷಣಗಳು. ಒಂದು ಫ್ಯಾಂಟಸಿಯ ಲೋಕಕ್ಕೆ ತೇಲಿ ಹೋದಂತಾಗುತ್ತದೆ. ಗೆಳತಿಯರೊಂದಿಗಿನ ಮದ್ಯಪಾನ ಆರಂಭಿಸಿದರೆ ನಾವು ಕಾಮೆಡಿ ಮತ್ತು ಸಂಗೀತದಂಥ ವಿಷಯಗಳತ್ತ ಸಾಗುತ್ತೇವೆ. ಹೊಟೇಲಿನ ಗೋಡೆಗಳ ನಡುವೆ ಕುಡಿಯುವುದಕ್ಕಿಂತಲೂ ನನಗೆ ಪ್ರಕೃತಿಯ ರಮಣೀಯವಾದ ಸ್ಥಳಗಳಲ್ಲಿ ಕುಡಿಯುವುದು ಇಷ್ಟವಾಗುತ್ತದೆ. ಯಾವುದೇ ನಿಯಂತ್ರಣವಿಲ್ಲದೆ ಗಟ್ಟಿಯಾಗಿ ನಕ್ಕು, ಹಾಡು ಹೇಳುತ್ತಾ ತೆರೆದ ಮನಸ್ಸಿನ ಪಾನಗೋಷ್ಠಿ! ಆ ಸಮಯದಲ್ಲಿ ಗೆಳತಿಯರನ್ನು ಅಪ್ಪಿಕೊಳ್ಳಬಹುದು. ನೃತ್ಯವಾಡಬಹುದು. ಯಾವುದೇ ರೀತಿಯ ಅಡೆತಡೆಯಿಲ್ಲ. ಸಂತೋಷಭರಿತಳಾಗಿ ಗಂಡಸರನ್ನು ತಬ್ಬಿಕೊಂಡರೆ ಅವರ ಕೈಗಳ ಚಲನವಲನ ನನ್ನ ಉತ್ಸಾಹವನ್ನು ಕೆಡಿಸುತ್ತದೆ. ಏಕೆಂದರೆ ಅದು ಸಂಪೂರ್ಣ ಸಂತೋಷದ ಆಲಿಂಗನ ಮಾತ್ರ. ಆದರೆ ತಲೆಯಲ್ಲಿ ಕಾಮಾಗ್ನಿ ಹರಡಿದ ಮೇಲೆ ಅವರ ಕೈ ಬೆರಳುಗಳು ನನ್ನ ದೇಹದ ಉಬ್ಬುತಗ್ಗುಗಳಲ್ಲಿ ಹಾದಿತಪ್ಪಿ ಸಂಚರಿಸುತ್ತವೆ. ಅನುಕೂಲವಾದರೆ ನನ್ನ ಕುಚಕಂಭಗಳನ್ನು ಸವರಲು ಹಿಂಜರಿಯಲಾರವು.
ಕೆಲವರು ನನ್ನನ್ನು ಕೇಳುವುದುಂಟು, 'ಶಕೀಲ ನಿನಗೆ ಯಾವ ಮದ್ಯ ಇಷ್ಟ?' ಎಂದು. ನನ್ನ ಇಷ್ಟವಾದ ಡ್ರಿಂಕ್ಸ್ ಬಗ್ಗೆ ನಾನು ಹೇಳುವುದಿಲ್ಲ. ಸೇವಿಸುವ ವಿಧಾನ ಬಗ್ಗೆ ಹೇಳಲಾರೆ. ಅವೆಲ್ಲಾ ಏಕೆ ಬೇರೆಯವರು ತಿಳಿದುಕೊಳ್ಳಬೇಕು? ಹೋಗಲಿ, ಅದನ್ನು ಅವರು ತಿಳಿದು ಏನುಪಯೋಗ? ಕೆಲವರಿಗೆ ತಿಳಿಯಬೇಕಾಗಿದ್ದುದು ನಾನು ಎಷ್ಟು ಪೆಗ್ಗು ಕುಡಿಯುತ್ತೇನೆಂಬುದು. ನಾನು ಎಷ್ಟು ಪೆಗ್ಗು ಕುಡಿದರೂ ನಿನಗೇನು ಎಂದು ಕೇಳಲು ನಾಲಗೆ ಹಾತೊರೆಯುತ್ತದೆ. ಆದರೆ ಸಭಾಮರ್ಯಾದೆಯನ್ನು ಗಮನದಲ್ಲಿಟ್ಟು ಕೇಳುವುದಿಲ್ಲ ಅಷ್ಟೆ. ಒಂದು ಹಾಫ್ ಬಾಟಲಿನಲ್ಲಿ ಒಂದು ಪೆಗ್ಗು ಬಿಟ್ಟು ಕುಡಿದರೆ ನನಗೆ ಪರವಾಗಿಲ್ಲವೆನಿಸುತ್ತದೆ. ಅಷ್ಟಕ್ಕೆ ನಾನು ಟೈಟಾಗುತ್ತೇನೆ. ಕಣ್ಣುಗಳಿಗೆ ಜೊಂಪು ಅಡರುತ್ತದೆ. ನಾಲಗೆ ತೊದಲುತ್ತದೆ. ಆದ್ದರಿಂದಲೇ ಅರ್ಧ ಬಾಟಲಿಯಲ್ಲಿ ಒಂದು ಪೆಗ್ಗು ಉಳಿದಿದೆ ಎಂದಾಕ್ಷಣ ನಾನು ಕುಡಿಯುವುದನ್ನು ನಿಲ್ಲಿಸುತ್ತೇನೆ. ಕೆಲವೊಮ್ಮೆ ಇಂಥ ಲೆಕ್ಕಾಚಾರಗಳೆಲ್ಲ ಬುಡಮೇಲಾಗುವುದುಂಟು. ಅಂಥ ಸಂದರ್ಭಗಳಲ್ಲಿ ಆದಷ್ಟು ಬೇಗನೆ ನಿದ್ರೆಗೆ ಜಾರುತ್ತೇನೆ. ಹೀಗೆಲ್ಲ ಆದರೂ ನಾನು ನಂಬುವುದು ಗಂಡಸರನ್ನು. ಮಹಿಳೆಯರು ನಂಬಿಕೆಗೆ ಯೋಗ್ಯರಲ್ಲ. ಅವರ ಅಸೂಯೆಯನ್ನು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ. ಗಂಡಸರಿಗಿಂತಲೂ ನಾನು ಮೋಸಕ್ಕೊಳಗಾಗಿದ್ದು ಹೆಂಗಸರಿಂದ. ಕುಡಿಯುವಾಗ ಗಂಡಸು ತೋರಿಸುವ ಜಾಣತನ ನನಗೆ ಮಾರಕ ನೋವೇನೂ ಕೊಡಲಿಲ್ಲ. ಅಶ್ಲೀಲ ಛಾಯೆಯಿರುವ, ದ್ವಂದ್ವಾರ್ಥ ಬೆರೆತ ಮಾತುಗಳಿಂದ ಶೃಂಗಾರ ಚೇಷ್ಟೆಗಳಿಂದ ಅವರು ತೃಪ್ತರಾಗುತ್ತಾರೆ. ಕುಡಿತದ ನಶೆ ಏರಿದಾಗ ಗಂಡಸು 'ಸೆಕ್ಸ್' ಅನ್ನು ತಲಪಲು ಪ್ರಯತ್ನಿಸುತ್ತಾರೆ. ಆದರೆ ರೇಪ್ ಮಾಡುವಷ್ಟರ ಮಟ್ಟಿಗೆ ಬೆಳೆಯಲಾರರು. ಹೆಂಗಸರು ಎಲ್ಲದಕ್ಕೂ ನನ್ನ ಜೊತೆಗಿರುತ್ತಾರೆ. ಕೊನೆಗೆ ಎಲ್ಲ ತಪ್ಪುಗಳನ್ನು ನನ್ನ ತಲೆಗೆ ಕಟ್ಟಿ ಒಳ್ಳೆಯವರಾಗುತ್ತಾರೆ.
ಕುಡಿತ ಒಲಿದಂತೆ ಸಿಗರೇಟೂ ನನ್ನನ್ನು ಅಪ್ಪಿಕೊಂಡಿತು. ಹಿಂದಿ ನಟಿ ಪೂಜಾಬೇಡಿ ಶೂಟಿಂಗ್‌ಗೆ ಬಂದಾಗ ನಾನು ಅವರನ್ನು ಭೇಟಿಯಾಗಿದ್ದೆ. ನನಗೆ ಅವರ ಸೌಂದರ್ಯ ತುಂಬಾ ಹಿಡಿಸಿತು. ನಾನು ಭೇಟಿಯಾದ ದಿನ ಅವರು ಖುರ್ಚಿಯಲ್ಲಿ ಕುಳಿತು ಗಂಭೀರವಾಗಿ ಸಿಗರೇಟು ಸೇದುತ್ತಿದ್ದರು. ಆಕೆ ಸಿಗರೇಟು ಸೇದುವ ಶೈಲಿಯನ್ನು ಕಂಡರೆ ಯಾರೇ ಆದರೂ ಒಂದು ಸಿಗರೇಟು ಸೇದಿ ಬಿಡುತ್ತಾರೆ. ನಾನು ಪೂಜಾಬೇಡಿಯನ್ನು ಅನುಕರಿಸತೊಡಗಿದೆ. ಕೊನೆಗೆ ಅದೇ ರೂಢಿಯಾಯಿತು. ಈಗ ನಾನು ಪೂಜಾಬೇಡಿಗಿಂತಲೂ ಹೆಚ್ಚಿಗೆ ಸಿಗರೇಟು ಸೇದುತ್ತಿರಬಹುದು. ಕುಡಿದಾಗ ನನ್ನ ಸಿಗರೇಟಿನ ಸಂಖ್ಯೆ ಹೆಚ್ಚಾಗುತ್ತದೆ. ಆದರೆ ಒಂದನ್ನು ಹೇಳುತ್ತೇನೆ, ಅದೇನೆಂದರೆ ಈಗ ನನಗೆ ನೆಮ್ಮದಿಯಿಲ್ಲ. ಈಗಿನ ನನ್ನ ಪರಿಸ್ಥಿತಿಯಿಂದ ಕುಡಿತ ಮತ್ತು ಸಿಗರೇಟು ಹೆಚ್ಚಾಗಿದೆ. ಕುಡಿತ ಸಮಾಧಾನ ಕೊಡುತ್ತದೆಂದು ಕೆಲವು ಸಲ ಅನಿಸಿದ್ದುಂಟು. ಇದು ನನ್ನ ಅಭಿಪ್ರಾಯವಷ್ಟೆ. ನಮಗೆ ನೆಮ್ಮದಿ ನೀಡುವುದು ಯಾವುದೇ ಆದರೂ ಆ ಕ್ಷಣದಲ್ಲಿ ಅದಕ್ಕೊಂದು ಪ್ರಾಮುಖ್ಯತೆ ಇದೆಯಲ್ಲವೆ? ಹೀಗೆಲ್ಲ ನಾನು ಹೇಳುವಾಗ ಒಂದು ವಿಷಯವನ್ನು ಸ್ಪಷ್ಟಗೊಳಿಸಲೇಬೇಕು. ನಟಿಸುವಾಗ ಅಂದರೆ ಮೇಕಪ್ ಹಚ್ಚಿದ ಮೇಲೆ ನಾನು ಕುಡಿಯುವುದಿಲ್ಲ. ಕುಡಿದು ನಾನು ಕ್ಯಾಮೆರಾ ಮುಂದೆ ನಿಂತೇ ಇಲ್ಲ. ಆದರೆ ರಾತ್ರೆಗಳಲ್ಲಿ ಮದ್ಯ ನನ್ನ ಜೊತೆಗಿರುತ್ತದೆ. ಬದುಕು ಹೀಗೆ ಮುಂದುವರಿಯುತ್ತಿದೆ.
ಕನ್ನಡಕ್ಕೆ: ಕೆ.ಕೆ. ಗಂಗಾಧರನ್