ಖುಷಿ

ಮೈಸೂರು ಅರಸ ಯಾರು?

ಸರಿ ಸುಮಾರು ಆರುನೂರು ವರುಷಗಳಿಗೂ ಹಿರಿದಾದ ಇತಿಹಾಸ ಹೊಂದಿರುವ ಮೈಸೂರು ರಾಜ ಮನೆತನದಲ್ಲೀಗ ಆತಂಕದ ವಾತಾವರಣ. ಅರಮನೆ- ಗುರುಮನೆಗಳಲ್ಲಿ ಚಿಂತೆಯ ಕಾರ್ಮೋಡ. ಜನಸಾಮಾನ್ಯರ ಎದೆಗಳಲ್ಲಿಯೂ ಕುತೂಹಲ.

ಮುಂದಿನ ಅರಸನಾರು?
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ನಂತರ ಉದ್ಭವಿಸಿರುವ ಬೃಹತ್ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ದಸರೆ ಹತ್ತಿರವಾಗುತ್ತಿದೆ. ನವರಾತ್ರಿಯ ಅಚರಣೆಗಳಿಗೆ ಅರಮನೆ ಸನ್ನದ್ಧವಾಗಬೇಕಿದೆ. ಅರಮನೆಯ ಖಾಸಾ ವಿಧಿ-ವಿಧಾನಗಳು ನಡೆಯಲೇಬೇಕಿದೆ. ಆದರೆ ಅದಕ್ಕೆಲ್ಲ ಉತ್ತರದಾಯಿ ಯಾರೆಂಬ ಸಂಗತಿ ಈ ಕ್ಷಣದವರೆಗೂ ಸಮಸ್ಯೆಯಾಗಿಯೇ ಉಳಿದಿದೆ.
ದಸರೆಗೆ ಮುನ್ನವೇ ಹೊಸ ರಾಜನ ಘೋಷಣೆಯಾಗಬೇಕು. ಅಂತಿಮ ನಿರ್ಧಾರ ಹೇಳಬೇಕಾದ ಪ್ರಮೋದಾದೇವಿ ಒಡೆಯರ್ ತುಟಿ ಬಿಚ್ಚುತ್ತಿಲ್ಲ. ಅರಮನೆಯ ಖಾಸಾ ಸಿಬ್ಬಂದಿಯೂ ಗಾಢ ಮೌನ. ಹತ್ತು-ಹಲವು ಊಹಾಪೋಹಗಳು ಹರಿದಾಡುತ್ತಿವೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯಕ್ರಿಯೆಗಳನ್ನು ನೆರವೇರಿಸಿದ ಚದುರಂಗ ಕಾಂತರಾಜ ಅರಸರಿಗೇ ಪಟ್ಟಾಭಿಷೇಕವಾಗುತ್ತದೆಂಬುದು ಮೇಲ್ಕಾಣಿಕೆಯ ಮಾತಾದರೂ, ಒಳಗಿನ ತಹತಹಗಳು ಬೇರೆಯೇ ಇವೆ.

ಮೈಸೂರು ಸಂಸ್ಥಾನದ ಕೊನೆಯ ದೊರೆ ಜಯಚಾಮರಾಜ ಒಡೆಯರ ಆರು ಮಂದಿ ಮಕ್ಕಳಲ್ಲಿ ಶ್ರೀಕಂಠದತ್ತರೊಬ್ಬರೇ ಗಂಡು. ಹಿರಿಯವರಾದ ಗಾಯತ್ರೀ ದೇವಿ ಅಸುನೀಗಿ ನಾಲ್ಕು ದಶಕ. ಅವರ ಪುತ್ರ ಚದುರಂಗ ಕಾಂತರಾಜ ಅರಸರಿಗೇ ಪಟ್ಟ ಕಟ್ಟಬೇಕೆಂಬ ಇರಾದೆ ಇದೆಯಾದರೂ ಇದಕ್ಕೆ ಧರ್ಮಶಾಸ್ತ್ರದ ಕೆಲ ತೊಡಕುಗಳಿವೆ ಎಂಬುದು ರಾಜಪುರೋಹಿತರ ಅಭಿಪ್ರಾಯ. ರಾಜ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗುವ ವ್ಯಕ್ತಿ ಉಪನೀತನೇ ಆಗಿರಬಾರದು. ಆದರೆ ಚದುರಂಗ ಕಾಂತರಾಜ ಅರಸರಿಗೆ ವಿವಾಹವೇ ಆಗಿಹೋಗಿದೆ. ಹಾಗಾಗಿ ಅವರನ್ನು ಪಟ್ಟಕ್ಕೇರಿಸುವುದು ಆಗದ ಮಾತು ಎಂಬುದು ಬಹುತೇಕರ ಆಂಬೋಣ.
ಜಯಚಾಮರಾಜ ಅರಸರ ಮೊದಲ ಮಗಳು ಗಾಯತ್ರೀ ದೇವಿ. ಮೈಸೂರು ಸಂಸ್ಥಾನಕ್ಕೆ ತೀರಾ ಹತ್ತಿರದಲ್ಲಿದ್ದ ಸರ್ದಾರ್ ಕಾಂತರಾಜೇ ಅರಸರ ಮಡದಿ. ಇವರು ಕ್ಯಾನ್ಸರ್‌ಗೆ ಬಲಿಯಾದದ್ದು 1974ರಲ್ಲಿ. ಇವರ ಪುತ್ರನೇ ಚದುರಂಗ.

ಎರಡನೆಯವರು ಮೀನಾಕ್ಷಿದೇವಿ. ಇವರ ಪತಿ ಎಂ.ಆರ್.ಲಕ್ಷ್ಮೀಕಾಂತರಾಜೇ ಅರಸ್. ಈ ದಂಪತಿಗಳ ಪುತ್ರ ವರ್ಚಸ್ವೀ ಅರಸ್. ಇವರೀಗ ರಾಜ್ಯ ಹೈಕೋರ್ಟ್‌ನಲ್ಲಿ ವಕೀಲಿಕೆ ನಡೆಸುತ್ತಿದ್ದಾರಲ್ಲದೆ ಮಳವಳ್ಳಿಯ ರಾಚಪ್ಪಾಜಿ ಗದ್ದುಗೆ ಹಾಗೂ ಕೃಷ್ಣರಾಜ ನಗರ ಸಮೀಪದ ಕಪ್ಪಡಿಯ ಸಿದ್ದಪ್ಪಾಜಿ ಗದ್ದುಗೆಗಳ ಪೀಠಾಧಿಪತಿಯೂ ಆಗಿದ್ದಾರೆ. ಮಠಾಧಿಪತಿಯ ಸ್ಥಾನ ಗೌರವ ಒಮ್ಮೆ ಇವರಲ್ಲಿ ಮತ್ತೊಮ್ಮೆ ಬೊಪ್ಪೇಗೌಡನಪುರದ ಮಠದವರಲ್ಲಿ ಬದಲಾಗುತ್ತಿರುತ್ತದೆ.
ಮೂರನೆಯವರೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್. ಇವರಿಗೆ ಮಕ್ಕಳಿಲ್ಲ. ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂಬ ಶಾಪವನ್ನಿತ್ತು ಸುಳಿಗೆ ಹಾರಿ ಪ್ರಾಣತ್ಯಾಗ ಮಾಡಿದ ಅಲಮೇಲಮ್ಮನಿಂದಾಗಿ ಒಡೆಯರ ಸಂತತಿಯಲ್ಲಿ ಒಬ್ಬರಾದ ನಂತರ ಒಬ್ಬರಿಗೆ ಮಕ್ಕಳಾಗುತ್ತಿಲ್ಲ ಎಂಬುದು ಈ ಸಂಸ್ಥಾನದ ನಂಬಿಕೆ. 1610ರ ನಂತರ ಹುಟ್ಟಿರುವ ಈ ಕಥೆಗೆ ಪೂರಕ ದಾಖಲೆಗಳೂ ಇವೆ.
ನಾಲ್ಕನೆಯ ಮಗಳು ಕಾಮಾಕ್ಷಿದೇವಿ. ಇವರು ವಾದ್ವಾನ್ ಮಹಾರಾಜರ ಮಗ ಆತ್ಮನ್ಯದೇವ ಅವರನ್ನು ವಿವಾಹವಾಗಿದ್ದಾರೆ. ಇವರ ಮಗನ ಹೆಸರು ಉಪಮನ್ಯುದೇವ ಜಾಲಾ.
ಐದನೆಯ ಪುತ್ರಿ ಇಂದ್ರಾಕ್ಷಿದೇವಿ. ಮೈಸೂರಿನವರೇ ಆದ ಅರಸು ಮನೆತನದ ರಾಜಾಚಂದ್ರ ಇವರ ಪತಿ. ಇವರ ಮಗ ಆದಿತ್ಯ ಗುರುದೇವ್. ಕೊನೆಯ ಮತ್ತು ಆರನೆಯ ಹೆಣ್ಣು ಮಗಳು ವಿಶಾಲಾಕ್ಷಿದೇವಿ. ರಾಜಾಸ್ಥಾನದ ರಾಜ ಪರಂಪರೆಗೆ ಸೇರಿದ ಗಜೇಂದ್ರಸಿಂಗ್‌ರನ್ನು ವಿವಾಹವಾಗಿದ್ದಾರೆ. ಇವರ ಪುತ್ರನ ಹೆಸರು ರುದ್ರಪ್ರತಾಪ ಸಿಂಗ್.
ಈ ಪೈಕಿ ಇಂದ್ರಾಕ್ಷಿ ದೇವಿ-ರಾಜಾಚಂದ್ರ ಅವರ ಪುತ್ರ ಆದಿತ್ಯ ಗುರುದೇವರನ್ನು ಹೊರತುಪಡಿಸಿದರೆ ಉಳಿದೆಲ್ಲ ಗಂಡು ಮಕ್ಕಳಿಗೂ ಮದುವೆಯಾಗಿದೆ. ಮಕ್ಕಳೂ ಇದ್ದಾರೆ. ಜಯಚಾಮರಾಜ ಒಡೆಯರ ನೇರ ರಕ್ತ ಸಂಬಂಧಿ ಆದಿತ್ಯ ಗುರುದೇವರನ್ನು ಪಟ್ಟಕ್ಕೆ ತರಲು ಅವಕಾಶವಿದೆ. ಆದರೆ ಅಂತಿಮ ತೀರ್ಮಾನದ ಹಕ್ಕು ಪ್ರಮೋದಾದೇವಿಯವರದ್ದೇ.

ಪ್ರಮೋದಾದೇವಿ ಆಯ್ಕೆ ಏನು?
ಅರಮನೆಯೊಳಗಿದ್ದರೂ ನೂರೆಂಟು ವಾದ-ವಿವಾದಗಳಲ್ಲಿ ಕಂಗೆಟ್ಟಂತಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅತ್ತಲೇ ಎಲ್ಲರ ಕಣ್ಣೂ ನೆಟ್ಟಿದೆ. ಶ್ರೀಕಂಠದತ್ತರ ಅನುಪಸ್ಥಿತಿಯಲ್ಲಿ ಎಲ್ಲವನ್ನೂ ಹಳಿತಪ್ಪದ ಹಾಗೆ ಕೊಂಡೊಯ್ಯಬೇಕಾದ ಗುರುತರ ಹೊಣೆಗಾರಿಕೆಯೂ ಅವರ ಮೇಲಿದೆ. ಶ್ರೀಕಂಠದತ್ತರ ಮನೆತನಕ್ಕೆ ಸೇರದ, ಅರಸು ಪರಿವಾರಕ್ಕೆ ಸೇರಿದ ಹೊಸ ತಲೆಮಾರೊಂದನ್ನು ಸಂಸ್ಥಾನದ ವಾರಸುದಾರನನ್ನಾಗಿ ಮಾಡಬೇಕೆಂಬ ಇರಾದೆ ಪ್ರಮೋದಾದೇವಿಯವರದ್ದು ಎಂಬ ಮಾತುಗಳಿಗೆ ರೆಕ್ಕೆ ಪುಕ್ಕ ಕಟ್ಟಲಾಗಿದೆ.
ಪ್ರಮೋದಾದೇವಿಯವರ ವೃದ್ಧ ತಾಯಿಯ ಯೋಗಕ್ಷೇವು ನೋಡಿಕೊಳ್ಳಲೆಂದು ನಿಯೋಜಿಸಲಾಗಿರುವ ಹತ್ತಿರದ ಸಂಬಂಧಿಯ ಪುತ್ರ ಶ್ರವಣಕುಮಾರ್ ಎಂಬವರನ್ನು ಪಟ್ಟಕ್ಕೆ ತರಲು ತೆರೆಯ ಮರೆಯಲ್ಲಿ ಕಸರತ್ತು ನಡೆಸಲಾಗುತ್ತಿದೆ ಎಂಬುದು ಈಗಿನ ಹೊಸ ಸುದ್ದಿ. ಮಹಾರಾಜರ ಖಾಸಗಿ ಆಸ್ತಿಯಾದ ಲೋಕರಂಜನ ಮಹಲ್‌ನಲ್ಲಿದ್ದ ಪ್ರಮೋದಾದೇವಿಯವರ ತಾಯಿ, ಶ್ರೀಕಂಠದತ್ತರು ನಿಧನರಾಗುವ ಕೆಲಕಾಲ ಮೊದಲು ವೈಯಕ್ತಿಕ ಕಾರಣಗಳಿಂದಾಗಿ ಅರವಿಂದ ನಗರದ ಮನೆಗೆ ಸ್ಥಳಾಂತರಗೊಂಡಿದ್ದು, ಶ್ರವಣಕುಮಾರ್ ಕೂಡಾ ಜತೆಗೇ ಇದ್ದಾರೆ. ಶ್ರವಣ್ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರ್‌ರ ಧರ್ಮಪತ್ನಿ ತ್ರಿಪುರಸುಂದರಮ್ಮಣ್ಣಿಯವರ ದೂರದ ಸಂಬಂಧಿ ಎಂದೂ ಹೇಳಲಾಗುತ್ತಿದೆ.  ಅರಮನೆಯ ಕಂಪ್ಯೂಟರ್ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರವಣ್, ಯಾರೊಂದಿಗೂ ಬೆರೆಯದ, ಏನನ್ನೂ ಮಾತಾಡದ, ತನ್ನ ಪಾಡಿಗೆ ತಾನಿರುವ ಯುವಕ. ತನ್ನನ್ನೇ ಮುಂದಿನ ರಾಜನನ್ನಾಗಿ ಮಾಡುತ್ತಾರೆ ಎಂಬ ಕನಸೂ ಸಹ ಅವರೊಳಗೆ ಇದ್ದಂತಿಲ್ಲ. ಪ್ರಮೋದಾದೇವಿಯವರಿಗೆ ಅವರು ನಿಕಟ ಎಂಬ ಕಾರಣಕ್ಕಾಗಿಯೇ ಈ ಗಾಳಿಮಾತಿಗೆ ಪುಷ್ಟಿ ದೊರಕಿದೆ ಎಂಬ ಮಾತೂ ಇದೆ.

ಮೊಮ್ಮಕ್ಕಳ ಮಕ್ಕಳಿಗೂ ಪರಮಾಧಿಕಾರ
ಒಂದು ವೇಳೆ ನೇರ ವಾರಸುದಾರರ ಆಯ್ಕೆ ನಡೆಯದಿದ್ದಲ್ಲಿ ಜಯಚಾಮರಾಜ ಒಡೆಯರ ಯಾವುದೇ ಮೊಮ್ಮಕ್ಕಳ ಗಂಡು ಮಗುವೊಂದನ್ನು ನೇರಾನೇರ ಪಟ್ಟಕ್ಕೆ ತರಬಹುದಾದ ಅವಕಾಶ ಮತ್ತು ಅಧಿಕಾರವನ್ನು ಧರ್ಮಶಾಸ್ತ್ರ ಒದಗಿಸಿಕೊಟ್ಟಿದೆ. ಕೊನೆಯ ಮಹಾರಾಜರ ಮೊದಲ ಮೊಮ್ಮಗ ಚದುರಂಗ ಕಾಂತರಾಜೇ ಆರಸ್, ಎರಡನೆಯ ಮೊಮ್ಮಗ ವರ್ಚಸ್ವೀ ಅರಸ್, (ಮೂರನೆಯವರು ಶ್ರೀಕಂಠದತ್ತ ನರಸಿಂಹರಾಜ), ನಾಲ್ಕನೆಯ ಮೊಮ್ಮಗ ಉಪಮನ್ಯುದೇವ ಜಾಲಾ, ಐದನೆಯ ಮೊಮ್ಮಗ ಆದಿತ್ಯ ಗುರುದೇವ ಅವಿವಾಹಿತರು. ಆರನೆಯ ಮೊಮ್ಮಗ ರುದ್ರಪ್ರತಾಪ ಸಿಂಗ್. ನೇರ ಮೊಮ್ಮಗನಿಗೇ ಪಟ್ಟವಾದರೆ ಇವರ ಪೈಕಿ ಯಾರು? ಇಲ್ಲವೇ ಮೊಮ್ಮಕ್ಕಳ ಮಕ್ಕಳಿಗೆ ಪಟ್ಟ ಕಟ್ಟುವುದಾದರೆ, ಈ ಐವರೂ ರಾಜಕುವರರ ಪೈಕಿ ಯಾರ ಮಕ್ಕಳಿಗೆ?

ನವರಾತ್ರಿಗೆ ಸೂತಕವಿಲ್ಲ
ರಾಜ ಮತ್ತು ಯತಿಗೆ ಸೂತಕವಿಲ್ಲ. ಹಾಗಾಗಿ ನವರಾತ್ರಿ ಆಚರಣೆಗಳಿಗೆ ಯಾವುದೇ ಸೂತಕಗಳ ಸೋಂಕಿಲ್ಲ. ಪ್ರಮೋದಾದೇವಿಯವರು ರಾಜಮಾತೆಯ ಸ್ಥಾನದಲ್ಲಿ ನಿಂತು ಎಲ್ಲ ಆಚರಣೆಗಳಲ್ಲಿಯೂ ಪಾಲ್ಗೊಳ್ಳಬಹುದಾದರೂ, ಶೃಂಗೇರಿ ಶ್ರೀಗಳ ಸೂಚನೆಯಂತೆ ನಡೆಯಲಿದ್ದಾರೆ. 1610ರಲ್ಲಿ ಅಲಮೇಲಮ್ಮ ಪ್ರಕರಣದ ಹೊಸತರಲ್ಲಿಯೇ ಸಂಸ್ಥಾನದಲ್ಲೊಂದು ವಿಪತ್ತು ನಡೆದುಹೋಯಿತು. ದಸರಾ ಉತ್ಸವಕ್ಕೆ ಒಂದೇ ದಿನ ಬಾಕಿ ಇದೆ ಎಂದೆನ್ನುವಾಗ ರಾಜ ಒಡೆಯರ ಒಬ್ಬನೇ ಮಗ ನರಸರಾಜ ಒಡೆಯರ್ ಇದ್ದಕ್ಕಿದ್ದಂತೆಯೇ ಅಸು ನೀಗಿದ. ರಾಜ ಪುರೋಹಿತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರಾಜ ಒಡೆಯರು ದಸರೆ ನಿಲ್ಲಿಸಲಿಲ್ಲ. ಹಾಗಾಗಿ 1610ರಲ್ಲಿ ದಸರೆಗೆ ಯಾವುದೇ ಚ್ಯುತಿ ಬರಲಿಲ್ಲ. ಮೊದಲ ದಸರೆಯ ಕಥೆ ಇದಾದರೆ, 2014ರಲ್ಲಿ ನಡೆಯಲಿರುವ 404ನೇ ವರುಷದ ದಸರೆ ಏನಾಗಬಹುದು?

ಪಟ್ಟದ ಕತ್ತಿಯೇ ರಾಜ
ರಾಜನಿಲ್ಲದ ದಸರಾ ನಡೆಯಬಹುದೇ?
ರಾಜನಿಲ್ಲದೆ ದಸರಾ ನಡೆಯುವುದು ಅಸಾಧ್ಯವಲ್ಲ. ಆದರೆ ಅದು ಸಾಧುವಲ್ಲ ಎಂಬುದು ಪ್ರಾಜ್ಞರ ಮಾತು. ರಾಜಪ್ರಭುತ್ವವನ್ನು ಪ್ರಜಾಪ್ರಭುತ್ವದಲ್ಲಿ ವಿಲೀನಗೊಳಿಸಿದ ಸಂದರ್ಭ ರಾಜಧನವನ್ನು ರದ್ದುಪಡಿಸಲಾಯಿತು. 1969ರಲ್ಲಿ ರಾಜಧನ ರದ್ದಾದಾಗ, ಶ್ರೀಸಾಮಾನ್ಯನಂತೆಯೇ ಉಳಿಯಲು ನಿರ್ಧರಿಸಿದ ದೊರೆ ಜಯಚಾಮರಾಜ ಒಡೆಯರು, ದಸರೆಯ ಖಾಸಗಿ ದರ್ಬಾರಿನಲ್ಲಿ ಭಾಗವಹಿಸದಿರಲು ತೀರ್ಮಾನಿಸಿದರು. ಹಾಗಾಗಿ ನಂತರದ ಮೂರು ವರ್ಷ ದಸರೆಯಲ್ಲಿ ಮಯೂರ ಸಿಂಹಾಸನದ ಮೇಲೆ ರಾಜರ ಪಟ್ಟದ ಕತ್ತಿಯನ್ನಿಟ್ಟು ಆಚರಿಸಲಾಯಿತು.
ಪ್ರತಿಕೂಲ ಪರಿಸ್ಥಿತಿ ನಿರ್ಮಾಣಗೊಂಡು ಹೊಸ ರಾಜನ ಆಯ್ಕೆ ಕಗ್ಗಂಟಾದಲ್ಲಿ ಈ ಬಾರಿಯೂ ಸಿಂಹಾಸನದ ಮೇಲೆ ಪಟ್ಟದ ಕತ್ತಿಯೇ ಗ್ಯಾರೆಂಟಿ ಎಂಬ ಮಾತುಗಳೂ ಕೇಳಿಬರುತ್ತಿವೆ. ನವರಾತ್ರಿಯ ಆಚರಣೆ, ವಿಧಿ-ವಿಧಾನಗಳಿಗೆ ಯಾವುದೇ ತೊಡಕು, ತೊಂದರೆಯುಂಟಾಗದ ಹಾಗೆ ದಸರೆ ನಡೆಸುವುದು ನನ್ನ ಕರ್ತವ್ಯ ಎಂಬ ಪ್ರಮೋದಾದೇವಿ ಮಾತುಗಳು ಮೇಲ್ನೋಟಕ್ಕೆ ತಿಳಿಯಾಗಿವೆ. ಒಟ್ಟಾರೆ, ಹೊಸ ರಾಜನ ಆಯ್ಕೆ ಆಗದಿದ್ದರೂ ದಸರೆಯ ಆಚರಣೆಗಳಿಗೆ ಕುಂದಿಲ್ಲ ಎಂಬುದಂತೂ ಸ್ಪಷ್ಟ. ಚ

ದಸರೆ ಮತ್ತು ಸಂಕ್ಷಿಪ್ತ ಇತಿಹಾಸ
ಈ ವರ್ಷ ಸೆಪ್ಟೆಂಬರ್ 25ರ ಗುರುವಾರದಿಂದಲೇ ನವರಾತ್ರಿ ಆರಂಭ. ಅಕ್ಟೋಬರ್ 3ರ ಶುಕ್ರವಾರ ಆಯುಧಪೂಜೆ, ಮರುದಿನ ವಿಜಯದಶಮಿ. ಇಷ್ಟರೊಳಗೆ ಎಲ್ಲವೂ ಅಂದುಕೊಂಡಂತಾದರೆ ಈ ಬಾರಿಯ ದಸರೆಗೊಂದು ಹೊಸ ಆಕರ್ಷಣೆ ದೊರಕಿದಂತಾಗುತ್ತದೆ.
ಮಥುರೆಯಿಂದ ಬಂದ ಯಾದವ ಸಹೋದರರಿಬ್ಬರಿಂದ ಸ್ಥಾಪಿತಗೊಂಡ ಮೈಸೂರು ಸಂಸ್ಥಾನಕ್ಕೀಗ ಆರುನೂರಾ ಹದಿನೈದು ವರುಷಗಳ ಇತಿಹಾಸ. 1399ರಲ್ಲಿ ಹದಿನಾಡೆಂಬ ಪುಟ್ಟ ಗ್ರಾಮದಿಂದ ಪುಟಿದೆದ್ದ ಮೈಸೂರು ಯದುರಾಯ-ಕೃಷ್ಣರಾಯರಿಂದ ಆರಂಭಗೊಂಡು ಜಯಚಾಮರಾಜ ಒಡೆಯರವರೆಗೆ ಇಪ್ಪತ್ತೈದು ರಾಜ-ಮಹಾರಾಜರ ಆಳ್ವಿಕೆಗೆ ಸಾಕ್ಷಿಯಾಗಿದೆ.
1399ರಿಂದ1732ರವರೆಗೆ ಯದುರಾಯರ ವಂಶಜರೇ ಆಳ್ವಿಕೆ ನಡೆಸಿದರಾದರೂ, ರಾಜ ಒಡೆಯರ ಅಧಿಕಾರಾವಧಿಯ ನಂತರ ಅಲಮೇಲಮ್ಮನ ಶಾಪಕ್ಕೀಡಾದ ಮೈಸೂರು, ದತ್ತು ಪರಂಪರೆಗೆ ಮುಂದಾಗಬೇಕಾಯಿತು. ಹದಿನಾರನೆ ದೊರೆ ದೊಡ್ಡ ಕೃಷ್ಣರಾಜ ಒಡೆಯರ ದತ್ತುಪುತ್ರನಾಗಿ ಅಧಿಕಾರಕ್ಕೆ ಬಂದ ಆರನೆ ಚಾಮರಾಜ ಒಡೆಯರ ನಂತರದ ದತ್ತಕ ಪರಂಪರೆ ಇಮ್ಮಡಿ ಕೃಷ್ಣರಾಜ ಒಡೆಯರು, ಖಾಸಾ ಚಾಮರಾಜ ಒಡೆಯರು, ಹತ್ತನೇ ಚಾಮರಾಜ ಒಡೆಯರ ಜ್ಯೇಷ್ಠಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಸಹೋದರ ಕಂಠೀರವ ನರಸಿಂಹರಾಜ ಒಡೆಯರರ ಮೊದಲ ಮಗ ಜಯಚಾಮರಾಜ ಒಡೆಯರನ್ನು ದತ್ತು ಪಡೆಯುವಲ್ಲಿಗೆ ಬಂದು ನಿಂತಿತು.
1974ರ ಸೆಪ್ಟೆಂಬರ್ 23ರಂದು ಜಯಚಾಮರಾಜ ಒಡೆಯರು ಕಾಲವಶರಾದ ನಂತರ ಅವರ ಪುತ್ರ ಮೈಸೂರು ಸಂಸ್ಥಾನದ ಇಪ್ಪತ್ತಾರನೆಯ ದೊರೆಯಾಗಿ ಅಥವಾ ಯುವರಾಜರಾಗಿ ಸಿಂಹಾಸನಾರೋಹಣ ನಡೆಸುತ್ತಿದ್ದರು. ಪ್ರಜಾಪ್ರಭುತ್ವದ ತೆಕ್ಕೆಯಲ್ಲಿ ಹೆಸರಿಗಷ್ಟೇ ರಾಜರಾಗಿದ್ದರೂ, ಮೈಸೂರು ಜನರ ಹಾಗೂ ಪರಂಪರೆಯ ಪಾಲಿಗೆ ಮಹಾರಾಜರಾಗಿಯೇ ಉಳಿದಿದ್ದ ಶ್ರೀಕಂಠದತ್ತರೂ ಸಹ 2013ರ ಡಿಸೆಂಬರ್ 10ರಂದು ಇಲ್ಲವಾದರು.

ಧರ್ಮಶಾಸ್ತ್ರವೋ, ರಾಜನೀತಿಯೋ?
ಉತ್ತರಾಧಿಕಾರಿಯಿಲ್ಲದ ಮೈಸೂರು ಸಿಂಹಾಸನಕ್ಕೆ ಅರ್ಹ ವ್ಯಕ್ತಿಯ ಆಯ್ಕೆ ನಡೆಯುವ ತನಕವೂ ಗಾಳಿಮಾತುಗಳ ರೆಕ್ಕೆಪುಕ್ಕಗಳಿಗೆ ಕೊನೆ ಬೀಳುವುದಿಲ್ಲ. ಧರ್ಮಶಾಸ್ತ್ರದ ಪ್ರಕಾರ ಉಪನೀತನಾಗದ, ವಿವಾಹಿತನಾಗದ ವ್ಯಕ್ತಿಗೆ ಮಾತ್ರವೇ ಪಟ್ಟಾಧಿಕಾರ. ಆದರೆ ಇಲ್ಲಿ ಧರ್ಮಕ್ಕಿಂತ ರಾಜತ್ವದ ರೀತಿ-ನೀತಿಗಳೇ ಅಂತಿಮ.
ಅಲಮೇಲಮ್ಮನ ಪ್ರಕರಣ ನಡೆದದ್ದು 1610ರಲ್ಲಿ. ನಂತರದ ಅರಸೊತ್ತಿಗೆಯಲ್ಲಿ ನೇರ ಸಂತಾನವೇ ಆಗಲಿಲ್ಲ. ಒಂಬತ್ತನೆಯ ದೊರೆ ರಾಜ ಒಡೆಯರ ಮಗ ನಂಜರಾಜ ಒಡೆಯರ ಮಗ ನಾಲ್ಕನೆಯ ಚಾಮರಾಜ ಒಡೆಯರು ಹತ್ತನೆಯ ರಾಜರಾಗಿ ಸಿಂಹಾಸನಾರೂಢರಾದರು. ರಾಜ ಒಡೆಯರು ಮರಣಿಸಿದ ನಂತರ ಹುಟ್ಟಿದ ಕೂಸಿಗೂ ಮೈಸೂರು ರಾಜನಾಗುವ ಪರಮಭಾಗ್ಯ ಬಂದೊದಗಿತ್ತು.
ಚಾಮರಾಜ ಒಡೆಯರ ನಂತರ ಪಟ್ಟವೇರಿದವರು ರಾಜ ಒಡೆಯರ ಮರಣಾನಂತರದ ಪುತ್ರ ಇಮ್ಮಡಿ ರಾಜ ಒಡೆಯರು.ಇಮ್ಮಡಿ ರಾಜ ಒಡೆಯರಿಗೂ ಮಕ್ಕಳಾಗಲಿಲ್ಲ. ಅದೃಷ್ಟವಶಾತ್ ಆ ಸಂದರ್ಭ ಯದುರಾಯರ ವಂಶಜರದೇ ಸಂತಾನಗಳಿದ್ದವು. ಈ ಪರಂಪರೆಯಲ್ಲಿ ದೊರೆತ ದತ್ತು ಪುತ್ರನೇ, ಮೈಸೂರು ಅರಸೊತ್ತಿಗೆಯಲ್ಲಿ ತನ್ನ ಶೌರ್ಯವನ್ನು ಮೆರೆದ ರಣಧೀರ ಕಂಠೀರವ ನರಸರಾಜ ಒಡೆಯರು.
ಇವರ ವಿಷಯದಲ್ಲಿಯೂ ಧರ್ಮಶಾಸ್ತ್ರ ಸುಳ್ಳಾಯಿತು. ಪಟ್ಟಕ್ಕೆ ಬರುವ ವೇಳೆಗಾಗಲೇ ರಣಧೀರರಿಗೆ ವಿವಾಹವಾಗಿತ್ತು. ಇವರಿಗೂ ಮಕ್ಕಳಾಗಲಿಲ್ಲ. ಹದಿಮೂರನೆ ದೊರೆಯಾಗಿ ಪಟ್ಟವೇರಿದ ದೊಡ್ಡ ದೇವರಾಜ ಒಡೆಯರ ಉತ್ತರಾಧಿಕಾರಿಯೂ ದತ್ತುವೇ, ಚಿಕ್ಕ ದೇವರಾಜ ಒಡೆಯರು. 1610ರಿಂದ 1732ರವರೆಗೆ ಮೈಸೂರು ಸಿಂಹಾಸನವನ್ನೇರಿದ ಎಲ್ಲರೂ ದತ್ತುಪುತ್ರರು ಹಾಗೂ ಯದುರಾಯರ ನೇರ ವಂಶಜರು.  1732ರಲ್ಲಿ ಪಟ್ಟಕ್ಕೇರಿದ ಆರನೇ ಚಾಮರಾಜ ಒಡೆಯರಿಗೂ ವಿವಾಹವಾಗಿತ್ತು. ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರ್ ಅವರೂ ಸಿಂಹಾಸನಾರೋಹಣಕ್ಕೆ ಮುನ್ನವೇ ವಿವಾಹಿತರಾಗಿದ್ದರು. 1940ರಲ್ಲಿ ಅವರು ಪಟ್ಟಾಭಿಷಿಕ್ತರಾದರು.
ಅರಮನೆಗೆ ಧರ್ಮಕ್ಕಿಂತ ರಾಜತ್ವವೇ ಮುಖ್ಯ. ರಾಜ ಕುಟುಂಬದ ಆಗುಹೋಗುಗಳಿಗೆ ತಕ್ಕ ಆಡಳಿತದ ವ್ಯವಸ್ಥೆ ನಿರ್ಮಾಣ ನಡೆದುಬಂದ ಸಂಪ್ರದಾಯ. ಶ್ರೀಕಂಠದತ್ತರ ಅಂತ್ಯಕ್ರಿಯೆ ನಡೆಸಿದ ಚದುರಂಗ ಕಾಂತರಾಜೇ ಅರಸರಿಗೇ ಪಟ್ಟ ಕಟ್ಟಲಾಗುತ್ತದೆ ಎಂಬ ಮಾತಿಗೆ ಹೆಚ್ಚಿನ ತೂಕವಿದೆ. ಆದರೆ ಇತಿಹಾಸದ ಪಾಠ ಕಣ್ಣೆದುರಿನಲ್ಲಿಯೇ ಇದೆ. ಅರಸೊತ್ತಿಗೆಗೆ ಸೇರಿದ ಯಾರು ಬೇಕಾದರೂ ರಾಜರಾಗಬಹುದೆಂಬುದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ.

ಕೊನೆಯ ದೊರೆಯ ಕುಡಿಗಳು
ಜಯಚಾಮರಾಜೇಂದ್ರ ಒಡೆಯರ್ ಅವರ ಮಕ್ಕಳು- ಮೊಮ್ಮಕ್ಕಳ ಸಂಪೂರ್ಣ ವಿವರ ಇಲ್ಲಿದೆ:
ಮೊದಲ ಮಗಳು ಗಾಯತ್ರೀದೇವಿ. ಸರ್ದಾರ್ ಕಾಂತರಾಜೇ ಅರಸರ ಧರ್ಮಪತ್ನಿ. ಇವರಿಗೆ ನಾಲ್ವರು ಮಕ್ಕಳು. ಮಗ ಚದುರಂಗ ಕಾಂತರಾಜೇ ಅರಸ್. ಶ್ರೀಕಂಠದತ್ತರ ಅಂತ್ಯಕ್ರಿಯೆ ನಡೆಸಿದವರು ಇವರೇ.ಪ್ರಿಯಾಂಕಾ ಅರಸ್ ಇವರ ಪತ್ನಿ. ಇವರಿಗೆ ಇಬ್ಬರು ಮಕ್ಕಳು. ಮಗ ದೇವರಥ, ಮಗಳು ಜಯಲಕ್ಷ್ಮಮ್ಮಣ್ಣಿ.
ತ್ರಿಪುರಸುಂದರಿದೇವಿ, ದೀಪಮಾಲಿನಿದೇವಿ ಹಾಗೂ ಕೀರ್ತಿಮಾಲಿನಿದೇವಿ ಇತರೆ ಮೂವರು ಹೆಣ್ಣುಮಕ್ಕಳು. ಈ ಪೈಕಿ ತ್ರಿಪುರಸುಂದರಿದೇವಿ, ಗೋಪಾಲರಾಜೇ ಅರಸ್ ಅವರನ್ನು ವಿವಾಹವಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳು- ಯದುವೀರ ಗೋಪಾಲರಾಜೇ ಅರಸ್ ಮತ್ತು ಜಯಾತ್ಮಿಕ.
ದೀಪಮಾಲಿನಿದೇವಿ, ಜಯದೀಪಭಲೇರಾವ್ ಅವರ ಪತ್ನಿ. ರಣಜಯ ಮತ್ತು ಭಾರ್ಗವಿ ಇವರಿಬ್ಬರು ಮಕ್ಕಳು. ಕೀರ್ತಿಮಾಲಿನೀದೇವಿಯವರು ಶೈಲೇಶ್ ವಿಕ್ರಮಸಿಂಗ್ ಅವರ ಕೈ ಹಿಡಿದಿದ್ದಾರೆ. ಇವರಿಗೊಬ್ಬನೇ ಪುತ್ರ- ವರುಣ್.
ಎರಡನೆಯ ಮಗಳು ಮೀನಾಕ್ಷಿದೇವಿ. ಎಂ.ಆರ್.ಲಕ್ಷ್ಮೀಕಾಂತರಾಜೇ ಅರಸ್ ಅವರ ಪತ್ನಿ. ಇವರಿಗಿಬ್ಬರು ಮಕ್ಕಳು. ಮಗ ವರ್ಚಸ್ವೀ ಅರಸ್. ಇವರ ಮಡದಿಯ ಹೆಸರು ಸುಷ್ಮಾ ಗುಬ್ಬಿನಾಣಿ. ಈ ದಂಪತಿಗಳಿಗಿಬ್ಬರು ಮಕ್ಕಳು. ಒಬ್ಬಾಕೆಯ ಹೆಸರು ಜಯಧೃಥಿ, ರಾಜಕುಮಾರಿ ಸಮೀಕ್ಷಾ. ವರ್ಚಸ್ವೀ ಅವರ ಅಕ್ಕ ಜಯಫಲಶ್ರೀ, ಅನಿಲ್ ಅಶ್ವಥ್ ಅವರನ್ನು ವಿವಾಹವಾಗಿದ್ದಾರೆ. ವಿಶ್ವಜೀತ್ ಹಾಗೂ ದುಶ್ಯಂತ್ ಎಂಬಿಬ್ಬರು ಗಂಡು ಮಕ್ಕಳು.
ಮೂರನೆಯವರೇ ಶ್ರೀಕಂಠದತ್ತ. ಪ್ರಮೋದಾದೇವಿ ಅವರ ಪತಿ. ಶಾಪದ ಕಾರಣದಿಂದಾಗಿ ಇವರಿಗೆ ಸಂತಾನವಿಲ್ಲ ಎಂಬುದು ಪ್ರತೀತಿ.
ನಾಲ್ಕನೆಯ ಮಗಳು ಕಾಮಾಕ್ಷಿದೇವಿ. ಆತ್ಮನ್ಯದೇವ ಅವರ ಕೈ ಹಿಡಿದ ಇವರಿಗೆ ಮೂವರು ಮಕ್ಕಳಿದ್ದಾರೆ. ಗೌತಮಿ, ಜಾಹ್ನವಿ ಹಾಗೂ ಉಪಮನ್ಯುದೇವ. ಈ ಪೈಕಿ ಗೌತಮಿ ನಾಭ ರಾಜಕುಮಾರ ಕೀರ್ತಿ ಸಿಂಗ್‌ರನ್ನು ವಿವಾಹವಾಗಿದ್ದು ಇವರಿಗೆ ಸಮರ್ ಎಂಬೊಬ್ಬ ಮಗನಿದ್ದಾನೆ. ಮತ್ತೊಬ್ಬ ಮಗಳು ಜಾಹ್ನವಿ, ಯುಧಿಷ್ಠಿರರನ್ನು ವಿವಾಹವಾಗಿದ್ದು ಸಂಗ್ರಾಮ್ ಎಂಬ ಪುತ್ರನಿದ್ದಾನೆ. ಮಗ ಉಪಮನ್ಯುದೇವ ಜಾಲಾ. ಇವರು ದರ್ಶಿಕಾ ಕುಮಾರಿ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಭುವನೇಶ್ವರಿ ಮತ್ತು ವೈಷ್ಣವಿ ಎಂಬಿಬ್ಬರು ಮಕ್ಕಳಿದ್ದಾರೆ. ಐದನೆ ಪುತ್ರಿಯ ಹೆಸರು ಇಂದ್ರಾಕ್ಷಿದೇವಿ. ರಾಜಮನೆತನದ ನಡೆದಾಡುವ ವಿಶ್ವಕೋಶದಂತಿರುವ ರಾಜಾಚಂದ್ರ ಅವರನ್ನು ವಿವಾಹವಾಗಿರುವ ಇಂದ್ರಾಕ್ಷಿಗೆ ಇಬ್ಬರು ಮಕ್ಕಳು. ಮಗ ಆದಿತ್ಯ ಗುರುದೇವ. ಮಗಳು ಸಂಯುಕ್ತಾ. ಅವಿವಾಹಿತರಾಗಿರುವ ಆದಿತ್ಯ ಅವರ ಹೆಸರು ಸಿಂಹಾಸನದ ಉತ್ತರಾಧಿಕಾರತ್ವಕ್ಕೆ ಕೇಳಿ ಬರುತ್ತಿದೆ. ಧರ್ಮಶಾಸ್ತ್ರ ಪ್ರಕಾರ ನೇರಾನೇರ ಪಟ್ಟಕ್ಕೆ ಹೆಸರಿಸಬಹುದಾದ ರಾಜಕುವರ.
ಆರನೆಯ ಮಗಳು ವಿಶಾಲಾಕ್ಷಿದೇವಿ. ಗಜೇಂದ್ರಸಿಂಗ್‌ರನ್ನು ಕೈ ಹಿಡಿದಿರುವ ವಿಶಾಲಾಕ್ಷಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ರುದ್ರಪ್ರತಾಪಸಿಂಗ್. ದೇವಲ್ ಸೋದ್ಹಾ ಅವರೊಂದಿಗೆ ಸಂತೃಪ್ತ ಬದುಕು ನಡೆಸುತ್ತಿರುವ ರುದ್ರಪ್ರತಾಪರಿಗೆ ಶಿವಪ್ರತಾಪ ಸಿಂಗ್ ಎಂಬ ಮಗ ಸಿಂಹಸ್ಮಿತ ಎಂಬ ಮಗಳಿದ್ದಾರೆ.

-ಟಿ.ಗುರುರಾಜ್
hello.mysore@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT