ನೀವು ತುಸು ಎಚ್ಚರವಹಿಸಿದರೆ ಯಾವುದೇ ಹ್ಯಾಕರ್ಸ್‌ಗಳು ನಿಮ್ಮ ಅಕೌಂಟ್‌ನತ್ತ ಕಣ್ಣಾಡಿಸಲು ಸಾಧ್ಯವಾಗದಂತೆ ಮಾಡಬಹುದು.
ದಿನ ಬೆಳಗಾದರೆ ಸಾಮಾಜಿಕ ತಾಣ ಹಾಗೂ ಮಿಂಚಂಚೆ ಹ್ಯಾಕ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿರುತ್ತವೆ. ಕೆಲವೊಮ್ಮೆ ಪಾಸ್‌ವರ್ಡ್ ತಿಳಿದ ಕೆಲ ಸ್ನೇಹಿತರೆ ದುರ್ಬಳಕೆ ಮಾಡುವ ಸಾಧ್ಯತೆಯಿರುತ್ತದೆ. ನಿಮಗೆ ಗೊತ್ತಿಲ್ಲದೆಯೇ ನಿಮ್ಮ ಸ್ನೇಹಿತೆಗೆ ಅಸಭ್ಯ ಸಂದೇಶಗಳು ಹೋಗಿರಬಹುದು. ಇಂಥ ಸಾಕಷ್ಟು ಅವಾಂತರಗಳು ಇಂದಿನ ಡಿಜಿಟಲ್ ಯುಗದಲ್ಲಿ ನಡೆಯುತ್ತಲೇ ಇದೆ. ಆದರೆ ನಿಮ್ಮ ಕೈನಲ್ಲಿರುವ ಸಣ್ಣದೊಂದು ಮೊಬೈಲ್ ಹಾಗೂ ನಿಮ್ಮದೇ ಮಿಂಚಂಚೆ ಮೂಲಕ ಇವನ್ನೆಲ್ಲ ಗಮನಿಸಬಹುದು ಹಾಗೂ ಸೆಕ್ಯೂರ್ ಮಾಡಬಹುದು.
ನಾವಿಂದು ಹೆಚ್ಚಾಗಿ ಬಳಸುವುದು ಗೂಗಲ್ ಹಾಗೂ ಫೇಸ್‌ಬುಕ್. ಅದರಲ್ಲೂ ಗೂಗಲ್ ಅಕೌಂಟ್‌ನ ಬಗ್ಗೆ ಎಷ್ಟು ಎಚ್ಚರವಹಿಸಿದರೂ ಕಡಿಮೆ ಎನಿಸುತ್ತದೆ. ಏಕೆಂದರೆ ನಿಮ್ಮ ಜೀವನ ಚರಿತ್ರೆಯೇ ಗೂಗಲ್‌ನಲ್ಲಿ ಅಡಕವಾಗಿದೆ. ನಿಮ್ಮ ಪ್ರತಿಯೊಂದು ರಹಸ್ಯ ಮಾಹಿತಿ ಸೇರಿದಂತೆ ಅತ್ಯಗತ್ಯ ಫೈಲ್‌ಗಳು ಜಿ-ಮೇಲ್ ಅಥವಾ ಗೂಗಲ್ ಡ್ರೈವ್‌ನಲ್ಲಿರುತ್ತವೆ. ಇಲ್ಲವಾದಲ್ಲಿ ಗೂಗಲ್ ಅಕೌಂಟ್ ಗೇಟ್‌ವೇ ಮೂಲಕ ಇತರೆ ಕ್ಲೌಡ್‌ಗಳಲ್ಲಿರುತ್ತವೆ. ಏನಾದರೂ ಎಚ್ಚರ ತಪ್ಪಿ ಪಾಸ್‌ವರ್ಡ್ ಖದೀಮರಿಗೆ ಇದು ಸಿಕ್ಕಿತೆಂದರೆ ಕಷ್ಟವಾದೀತು.
ಗೂಗಲ್‌ನಲ್ಲಿ ಸೈನ್-ಇನ್ ಆದ ಬಳಿಕ ಬಲ ತುದಿಯಲ್ಲಿ ನಿಮ್ಮ ಐಡಿ ಫೋಟೋ ಮೇಲೆ ಕ್ಲಿಕ್ ಮಾಡಿದಾಗ ಅಕೌಂಟ್ ಎಂದು ಇರುತ್ತದೆ. ಇದರ ಮೇಲೆ ಕ್ಲಿಕ್ಕಿಸಿದಾಗ ಪರ್ಸನಲ್ ಇನ್ಫೋ, ಸೆಕ್ಯುರಿಟಿ, ಲಾಂಗ್ವೇಜ್, ಡಾಟಾ ಟೂಲ್, ಅಕೌಂಟ್ ಹಿಸ್ಟರಿ ಹಾಗೂ ಹೆಲ್ಪ್ ಎಂಬ ಆಪ್ಶನ್ ಇರುತ್ತದೆ. ಸೆಕ್ಯುರಿಟಿ ಮೇಲೆ ಮೌಸ್ ಬಟನ್ ಒತ್ತಿದಾಗ 4 ಪೋರ್ಟಲ್ ಕಾಣುತ್ತದೆ. ಅದರಲ್ಲಿ ಪಾಸ್‌ವರ್ಡ್, ರೀಸೆಂಟ್ ಆ್ಯಕ್ಟಿವಿಟಿ, ಅಕೌಂಟ್ ಇನ್‌ಫಾರ್ಮೇಷನ್ ಹಾಗೂ ರಿಕವರಿ ಆ್ಯಂಡ್ ಅಲರ್ಟ್ ಎಂಬುದು ಕಾಣುತ್ತದೆ. ಇದರಲ್ಲಿ ಪ್ರತಿಯೊಂದು ಅಂಶವು ನಿಮ್ಮ ಅಕೌಂಟ್ ಗೌಪ್ಯತೆ ಹಾಗೂ ರಕ್ಷಣೆಗೆ ಮುಖ್ಯವಾದದ್ದು.
ಪಾಸ್‌ವರ್ಡ್ ಎಂಬಲ್ಲಿ 2 ಸ್ಟೆಪ್ ವೆರಿಫಿಕೇಷನ್ ಎಂದು ಸಿಗುತ್ತದೆ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ಇದಾದ ಬಳಿಕ ನೀವು ಪ್ರತಿ ಬಾರಿ ಗೂಗಲ್ ಅಕೌಂಟ್‌ಗೆ ಸೈನ್-ಇನ್ ಆಗುವಾಗ ಮೊಬೈಲ್‌ಗೆ 6 ಸಂಖ್ಯೆಯ ವೆರಿಫಿಕೇಷನ್ ಕೋಡ್ ಬರುತ್ತದೆ. ಅದನ್ನು ಹಾಕುವವರೆಗೂ ಗೂಗಲ್ ಸೈನ್-ಇನ್ ಆಗುವುದೇ ಇಲ್ಲ. ಭವಿಷ್ಯದ ದೃಷ್ಟಿಯಿಂದ ಬ್ಯಾಕಪ್ ಮೊಬೈಲ್ ಸಂಖ್ಯೆ ನಮೂದಿಸುವುದು ಒಳ್ಳೆಯದು. ಆಗ ಮೊದಲ ಸಂಖ್ಯೆ ಕಳೆದರೂ ಮತ್ತೊಂದರ ಮೂಲಕ ವೆರಿಫಿಕೇಷನ್ ಕೋಡ್ ಸ್ವೀಕರಿಸಬಹುದು. ಒಂದೊಮ್ಮೆ ತಾಂತ್ರಿಕ ಕಾರಣದಿಂದ ಮೊಬೈಲ್‌ಗೆ ಕೋರ್ಡ್ ಬರದಿದ್ದಾಗ 10 ಅನ್‌ಯೂಸ್ಡ್ ಕೋಡ್ ಎಂದು ಪ್ರತಿಯೊಬ್ಬರ ಅಕೌಂಟ್‌ನಲ್ಲಿರುತ್ತದೆ. ಅದನ್ನು ಮೊದಲೇ ಸೇವ್ ಮಾಡಿಟ್ಟುಕೊಂಡು ಒಂದು ಕೋಡ್ ಅನ್ನು ಒಮ್ಮೆ ಮಾತ್ರ ಬಳಸಬಹುದು. ಇದರರ್ಥ ಅಲ್ಲಿರುವ 10 ಕೋಡ್ ಖಾಲಿಯಾದ ಬಳಿಕ ಈ ಆಪ್ಶನ್ ಇಲ್ಲದಂತಾಗುತ್ತದೆ.
ಇನ್ನು ಅಕೌಂಟ್ ಪರ್ಮಿಷನ್ ಎಂಬಲ್ಲಿ ನಿಮ್ಮ ಗೂಗಲ್ ಅಕೌಂಟ್ ಯಾವೆಲ್ಲ ಅಪ್ಲಿಕೇಷನ್‌ಗಳಿಗೆ ಬಳಕೆಯಾಗುತ್ತಿದೆ ಎನ್ನುವುದನ್ನು ಪರಿಶೀಲಿಸಿ ಅನಗತ್ಯವಾಗಿ ಬಳಕೆಯಾಗುತ್ತಿದ್ದರೆ ರದ್ದುಗೊಳಿಸಬಹುದು. ಇನ್ನು ರಿಸೆಂಟ್ ಆ್ಯಕ್ಟಿವಿಟಿ ಮೂಲಕ ಇತ್ತೀಚೆಗೆ ನೀವು ಗೂಗಲ್ ಅಕೌಂಟ್ ಅನ್ನು ಯಾವ್ಯಾವ ಐಪಿ ಅಡ್ರೆಸ್ ಹಾಗೂ ಪ್ರದೇಶದಿಂದ ಲಾಗ್-ಇನ್ ಮಾಡಿದ್ದೀರಿ ಎಂಬ ಮಾಹಿತಿ ಸಿಗುತ್ತದೆ. ಇದರಿಂದ ಯಾವುದಾದರೂ ಖದೀಮರು ಸೈನ್-ಇನ್ ಮಾಡಿದ್ದರೆ ಮಾಹಿತಿ ಪಡೆಯಹುದು. ಈ ಮಾಹಿತಿಯು ಜಿ-ಮೇಲ್ ಪುಟದಲ್ಲಿ ಬಲ ಕೆಳ ತುದಿಯಲ್ಲೂ ಸಿಗುತ್ತದೆ. ಅಲ್ಲಿ ಡಿಟೇಲ್ಸ್ ಎಂಬಲ್ಲಿ ಕ್ಲಿಕ್ ಮಾಡಿದಾಗ ಕಳೆದ 10 ಸೈನ್-ಇನ್‌ನ ವಿವರ ಸಿಗುತ್ತದೆ. ರಿಕವರಿ ಹಾಗೂ ಅಲರ್ಟ್ ಮೂಲಕ ಅಕೌಂಟ್‌ನ ಪಾಸ್‌ರ್ವಡ್ ಬದಲಾವಣೆಯಾದಾಗ ಹಾಗೂ ಯಾವುದಾದರು ಸಂದೇಹ ಬರುವ ರೀತಿಯಲ್ಲಿ ಸೈನ್-ಇನ್ ಆಗಲು ಪ್ರಯತ್ನ ನಡೆಯುತ್ತಿದ್ದರೆ ಕೂಡಲೇ ಸಂದೇಶ ಬರುತ್ತದೆ.
ಫೇಸ್‌ಬುಕ್ ಅಕೌಂಟ್ ಇಷ್ಟೊಂದು ಸುರಕ್ಷಿತವಾಗಿರದಿದ್ದರೂ ಅಲ್ಲಿ ಕೂಡ ಪಾಸ್‌ವರ್ಡ್ ಕದಿಯುವ ಘಟನೆ ನಡೆದರೆ ತಿಳಿದುಕೊಳ್ಳಬಹುದು. ಫೇಸ್‌ಬುಕ್ ಸೆಟ್ಟಿಂಗ್‌ಗೆ ಹೋಗಿ ಸೆಕ್ಯುರಿಟಿ ಎಂಬಲ್ಲಿ ಕ್ಲಿಕ್ಕಿಸಿದಾಗ ಅರ್ಧ ಡಜನ್ ಆಪ್ಶನ್‌ಗಳಿರುವ ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ಮೊದಲನೆಯದಾಗಿ ಬೇರೆಡೆಯಿಂದ ನಿಮ್ಮ ಅಕೌಂಟ್ ಸೈನ್ ಆಗುತ್ತಿದ್ದರೆ ಮೊಬೈಲ್ ಹಾಗೂ ಫೇಸ್‌ಬುಕ್‌ಗೆ ಬಳಸಿರುವ ಇ-ಮೇಲ್‌ಗೆ ಸಂದೇಶ ಬರುತ್ತದೆ. ಇನ್ನು ಹೊಸ ಡಿವೈಸ್ ಮೂಲಕ ಸೈನ್-ಇನ್ ಆಗುವಾಗ ಅದಕ್ಕೆ ನಿಮ್ಮದೇ ಆದ ಕೋಡ್ ಸಂಖ್ಯೆ ಹಾಗೂ ಪಾಸ್‌ವರ್ಡ್ ಇಲ್ಲದೆ ಪ್ರವೇಶಿಸಲೇ ಆಗದಂತೆ ವ್ಯವಸ್ಥೆ ಮಾಡಬಹುದು. ಆದರೆ ಇದನ್ನು ಕೇವಲ 10 ಡಿವೈಸ್‌ಗಳಲ್ಲಿ ಮಾತ್ರ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ 10ಕ್ಕಿಂತ ಹೆಚ್ಚಾದಾಗ ಬಳಕೆಯಲ್ಲಿರದ ಇತರ ಡಿವೈಸ್‌ಗಳನ್ನು ಪಟ್ಟಿಯಿಂದ ಆಗಾಗ ತೆಗೆಯುತ್ತಿರುವುದು ಒಳ್ಳೆಯದು. ಅಲ್ಲಿಯೇ ಈಗಾಗಲೇ ಸೈನ್ಡ್ ಇನ್ ಆಗಿರುವ ಡಿವೈಸ್‌ಗಳ ಪಟ್ಟಿಯೂ ಸಿಗುತ್ತದೆ. ನಿಮ್ಮ ಸ್ಮಾರ್ಟಿ ಹಾಗೂ ಕಂಪ್ಯೂಟರ್ ಅಥಲಾ ಲ್ಯಾಪ್‌ಟಾಪ್ ಹೊರತುಪಡಿಸಿ ಮತ್ಯಾವುದರಲ್ಲಾದರೂ ಸೈನ್-ಇನ್ ಆಗಿರುವುದು ಕಂಡುಬಂದರೆ ಕೂಡಲೇ ಎಲ್ಲವನ್ನೂ ಸೈನ್-ಔಟ್ ಮಾಡಬಹುದು.
ಇದನ್ನು ಸಮರ್ಪಕವಾಗಿ ಆ್ಯಕ್ಟಿವೇಟ್ ಮಾಡಿಕೊಂಡರೆ ನಿಮ್ಮ ಗೂಗಲ್ ಹಾಗೂ ಫೇಸ್‌ಬುಕ್ ಜಗತ್ತಿಗೆ ಯಾರೊಬ್ಬರೂ ನುಸುಳಲು ಸಾಧ್ಯವಿಲ್ಲ.
-ರಾಜೀವ ಹೆಗಡೆ