ಜೀವನಶೈಲಿ

ನಿಮ್ಮ ಮೂಡ್ ಹಾಳುಗೆಡವಲು ಬೇರಾರೂ ಬೇಕಿಲ್ಲ.. ನಿಮ್ಮ ಮೊಬೈಲೇ ಸಾಕು!

Srinivasamurthy VN
ವಾಷಿಂಗ್ಟನ್: ಮನುಷ್ಯರ ಮೂಡ್ (ಮನಃಸ್ಥಿತಿ) ಹಾಳುಗೆಡವಲು ಬೇರೊಬ್ಬರ ಅಗತ್ಯವಿಲ್ಲ.. ಅವರ ಕೈಯಲ್ಲಿರುವ ಸ್ಮಾರ್ಟ್ ಫೋನ್ ಗಳೇ ಸಾಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹೌದು...ನಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್ ಗಳೇ ನಮ್ಮ ಮನಃಸ್ಥಿತಿ ಹಾಳು ಮಾಡಬಲ್ಲ ಶತ್ರುಗಳಂತೆ.. ಇಂತಹುದೊಂದು ಅಚ್ಚರಿಯ ಅಂಶ ತಜ್ಞರ ಸಂಶೋಧನೆಯಿಂದ ಬಯಲಾಗಿದ್ದು, ಸ್ಮಾರ್ಟ್ ಫೋನ್ ಗೆ ಬರುವ 3ನೇ 1  ಭಾಗದಷ್ಟು ನೋಟಿಫಿಕೇಷನ್ ಗಳು ಮನುಷ್ಯರಲ್ಲಿ ವಿರೋಧಿ ಮನಸ್ಥಿತಿ, ಅಸಮಾಧಾನ, ಅಧೈರ್ಯಕ್ಕೆ ಕಾರಣವಾಗುತ್ತದೆ ಎಂದು ತಜ್ಞರ ಸಂಶೋಧನೆಯಿಂದ ತಿಳಿದುಬಂದಿದೆ.

ಬ್ರಿಟನ್ ನ ನಾಟಿಂಗ್ ಹ್ಯಾಮ್ ನ ಟ್ರೆಂಟ್ ವಿಶ್ವವಿದ್ಯಾಲಯದ ಸಂಶೋಧಕರು ಇಂತಹುದೊಂದು ಸಂಶೋಧನೆ ನಡೆಸಿದ್ದು, ತಮ್ಮ ಸಂಶೋಧನೆಗೆ ಸುಮಾರು 50 ಮಂದಿ ಸ್ಮಾರ್ಟ್ ಫೋನ್ ಬಳಕೆದಾರರನ್ನು ಬಳಕೆ  ಮಾಡಿಕೊಂಡಿದ್ದರು. ಸುಮಾರು 5 ವಾರಗಳ ಕಾಲ ಸ್ಮಾರ್ಟ್ ಫೋನ್ ಬಳಕೆದಾರರ ಮೇಲೆ ನಿಗಾ ಇರಿಸಿದ್ದ ವಿಜ್ಞಾನಿಗಳು, ಅವರ ಹಾವ-ಭಾವಗಳ ಮೇಲೆ ಸಂಪೂರ್ಣ ದೃಷ್ಟಿ ಕೇಂದ್ರೀಕರಿಸಿದ್ದರು.

ಸ್ಮಾರ್ಟ್ ಫೋನ್ ನಲ್ಲಿರುವ ನೂರಾರು ಆ್ಯಪ್ ಗಳಿಂದಾಗಿ ನಮ್ಮ ಫೋನ್ ಗೆ ಸಾವಿರಾರು ನೋಟಿಫಿಕೇಷನ್ ಗಳು ಬರುತ್ತಿರುತ್ತವೆ. ಈ ನೋಟಿಫಿಕೇಷನ್ ಗಳೇ ನಮ್ಮ ಮನಃಸ್ಥಿತಿ ಹಾಳಾಗಲು ಕಾರಣವಾಗುತ್ತಿವೆ ಎಂದು ವಿಜ್ಞಾನಿಗಳು  ಕಂಡುಕೊಂಡಿದ್ದಾರೆ. ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸುಮಾರು ಅರ್ಧ ಮಿಲಿಯನ್ ಗೂ ಹೆಚ್ಚು ನೋಟಿಫಿಕೇಶನ್ ಗಳು ಬಂದಿದ್ದು, ಈ ಪೈಕಿ ಶೇ.32ರಷ್ಟು ಮಂದಿಯ ಹಾವ-ಭಾವಗಳಲ್ಲಿ ನಕಾರಾತ್ಮಕ ಬದಲಾವಣೆ ಕಂಡಬಂದಿದ್ದು,  ಪ್ರಮುಖವಾಗಿ ಮಾನವೇತರ ಚಟುವಟಿಕೆಗಳ ನೋಟಿಫಿಕೇಷನ್ ಅಂದರೆ ಸಾಮಾನ್ಯ ಫೋನ್ ಅಪ್ ಡೇಟ್ ಮತ್ತು ವೈಫೈ ಲಭ್ಯತೆ ಕುರಿತಾದ ನೋಟಿಫಿಕೇಷನ್ ಗಳಿಂದಾಗಿ ಬಳಕೆದಾರ ಹಾವ-ಭಾವಗಳಲ್ಲಿಗಳಲ್ಲಿ ನಕಾರಾತ್ಮಕ  ಬದಲಾವಣೆ ಕಂಡುಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ಇದಲ್ಲದೇ ಬಳಕೆದಾರರ ವೃತ್ತಿಗೆ ಸಂಬಂಧಿಸಿದ ನೋಟಿಫಿಕೇಷನ್ ಗಳಿಂದಲೂ ಕೂಡ ನಕಾರಾತ್ಮಕ ಬದಲಾವಣೆ ಕಂಡುಬಂದಿದ್ದು, ಪ್ರಮುಖವಾಗಿ ರಜೆ ಮೇಲೆ ತೆರಳಿದ್ದ ಸಂದರ್ಭದಲ್ಲಿ ಅಥವಾ ಕುಟುಂಬಸ್ಥರೊಂದಿಗೆ ಇದ್ದ  ಸಂದರ್ಭಗಳಲ್ಲಿ ಈ ನೋಟಿಫಿಕೇಷನ್ ಗಳು ಬಂದರೆ ಅವರ ಮೂಡ್ ಹಾಳಾಗುತ್ತಿತ್ತು ಎಂದು ತಿಳಿದುಬಂದಿದೆ.

ಇದಲ್ಲದೇ ನೋಟಿಫಿಕೇಷನ್ ಗಳಿಂದಾಗಿ ಕೆಲ ಸಕಾರಾತ್ಮಕ ಬದಲಾವಣೆಗಳೂ ಕೂಡ ಕಂಡುಬಂದಿದ್ದು, ಸ್ನೇಹಿತರ, ಆಪ್ತರ ಅಥವಾ ತಮಗೆ ತೀರ ಹತ್ತಿರವಾಗಿರುವವರ ಮೆಸೇಜ್ ಗೆ ಸಂಬಂಧಿಸಿದ ನೋಟಿಫಿಕೇಷನ್ ಗಳು ಬಂದಾಗ  ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ಇನ್ನು ಈ ಪ್ರಯೋಗಕ್ಕೆ ಒಳಗಾದವರಿಗಾಗಿಯೇ ಸಂಶೋಧಕರು ಹೊಸ ಆ್ಯಪ್ ಅನ್ನು ರಚಿಸಿದ್ದು, ನೋಟಿಮೈಂಡ್ ಎಂಬ ಆ್ಯಪ್ ಬಳಕೆದಾರರ ಡಿಜಿಟಲ್ ನೋಟಿಫಿಕೇಷನ್ ಗಳನ್ನು ಸಂಗ್ರಹಿಸುತ್ತಿತ್ತು. ಅಂತೆಯೇ ಪ್ರತೀ  ನೋಟಿಫಿಕೇಷನ್ ಬಳಿಕ ಬಳಕೆದಾರರ ಮೂಡ್ ಕುರಿತ ದತ್ತಾಂಶಗಳನ್ನು ಸಂಗ್ರಹಿಸುತ್ತಿತ್ತು. ಭವಿಷ್ಯದಲ್ಲಿ ಈ ಆ್ಯಪ್ ಅನ್ನು ನವೀಕರಿಸಿ, ನೋಟಿಫಿಕೇಷನ್ ಗಳನ್ನು ಶೋಧಿಸುವ ಕಾರ್ಯಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಟ್ರೆಂಟ್  ವಿವಿಯ ಸಂಶೋಧಕರಾದ ಐಮನ್ ಕಂಜೊ ಹೇಳಿದ್ದಾರೆ.
SCROLL FOR NEXT