ಸೀಗೆಕಾಯಿ ಪ್ರಕೃತಿಯ ವರದಾನವಾಗಿದ್ದು, ಕೂಡಲಿನ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಕೂದಲು ಉದುರುವುದು, ಬಿಳಿ ಕೂದಲು ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ. ಸೀಗೆಕಾಯಿ ನಿಸರ್ಗದ ಸೋಪಾಗಿದ್ದು, ಇದು ಕೂದಲಿನ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವೇ ಅಲ್ಲದೆ, ಕೂದಲನ್ನು ದಟ್ಟ, ನಯ ಹಾಗೂ ಕಾಂತಿಯುಕ್ತವಾಗುವಂತೆ ಮಾಡುತ್ತದೆ.
ಈ ಹಿಂದೆ ನಮ್ಮ ಹಿರಿಯರು ಕೂದಲನ್ನು ಸೀಗೆಕಾಯಿ ಬಳಕೆ ಮಾಡುವ ಮೂಲಕ ಆರೈಕೆ ಮಾಡುತ್ತಿದ್ದರು. ಮನೆಯ ಬಳಿ ಬೆಳೆಯುತ್ತಿದ್ದ ಸೀಗೆ ಬೇಲಿ ಅಥವಾ ಮರದ ಬಳಿ ರೋಗಿ ಸೀಗೆಕಾಯಿಗಳನ್ನು ತೆಗೆದುಕೊಂಡು ಬಂದು, ಅದನ್ನು ಒಣಗಿಸಿ ಪುಡಿ ಮಾಡಿಕೊಂಡು ಸ್ನಾನ ಮಾಡುವಾಗ ಬಳಕೆ ಮಾಡುತ್ತಿದ್ದರು.
ಸೀಗೆಕಾಯಿಯಲ್ಲಿ ಪಿಹೆಚ್ ಪ್ರಮಾಣ ಕಡಿಮೆಯಿದ್ದು, ಹೊಳೆಯುವ ಹಾಗೂ ಸುಂದರ ಕೂದಲನ್ನು ಬಯಸುವವರಿಗೆ ಹೇಳಿ ಮಾಡಿಸಿದ ಮನೆ ಮದ್ದಾಗಿದೆ. ಕೂದಲಿಗೆ ಹೆಚ್ಚು ನೀರಿನಂಶ ನೀಡುವ ಈ ಸೀಗೆಕಾಯಿ ಕೂದಲು ಮತ್ತಷ್ಟು ಸೊಂಪಾಗಿ ಬೆಳೆಯುವಂತೆ ಹಾಗೂ ಹೊಳೆಯುವಂತೆ ಮಾಡುತ್ತದೆ.
ಸೀಗೆಕಾಯಿಯನ್ನು ಪ್ರತೀನಿತ್ಯ ಸ್ನಾನದಲ್ಲಿ ಬಳಕೆ ಮಾಡುವುದರಿಂದ ಕೂದಲಿನ ಬುಡ ಹಾಗೂ ಕಾಂಡ ಎಲ್ಲವೂ ಸದೃಢವಾಗುವುದರ ಜೊತೆಗೆ, ತಲೆ ಹೊಟ್ಟು ಸಹ ನಿವಾರಣೆಯಾಗುತ್ತದೆ.
ಹಾಗಾದರೆ, ಸೀಗೆಕಾಯಿ ಬಳಕೆ ಮಾಡುವುದಾದರೂ ಹೇಗೆ? ವಿವಿಧ ರೀತಿಯ ಕೂದಲಿನ ಸಮಸ್ಯೆಗೆ ಸೀಗೇಕಾಯಿ ಬಳಕೆ ಹೇಗೆ? ಅದಕ್ಕೆ ಇಲ್ಲಿದೆ ಕೆಲವು ಟಿಪ್ಸ್'ಗಳು...
ಸೀಗೆಕಾಯಿ, ನೆಲ್ಲಿಕಾಯಿ ಪೌಡರ್
ಸಾಮಾನ್ಯವಾಗಿ ಮಹಿಳೆಯರಿಗೆ ಕಾಡುವ ಸಮಸ್ಯೆ ಎಂದರೆ, ಕೂದಲು ಒಡೆಯುವುದು. ಹೊರಗೆ ದುಡಿಯುವ ಮಹಿಳೆಯರಿಗಂತೂ ಈ ಸಮಸ್ಯೆ ಕಾಡದೇ ಇರದು. ಒಡೆಯುವ ಕೂದಲು ಮಹಿಳೆಯರು ಕೂದಲಿನ ಅಂದವನ್ನು ಹಾಳು ಮಾಡುತ್ತದೆ. ಒಡೆದ ಕೂದಲು ಸಮಸ್ಯೆ ನಿವಾರಿಸಿಕೊಳ್ಳಲು ಸೀಗೆಕಾಯಿ, ನೆಲ್ಲಿಕಾಯಿ ಪೌಡರ್ ಬಳಕೆ ಮಾಡಬಹುದು. ಸೀಗೆಕಾಯಿ ಹಾಗೂ ನೆಲ್ಲಿಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳಿರುತ್ತವೆ. ಇದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಸೀಗೆಕಾಯಿ ಹಾಗೂ ನೆಲ್ಲಿಕಾಯಿ ಪುಡಿಯನ್ನು ಅರ್ಧ ಬಟ್ಟಲು ತೆಗೆದುಕೊಂಡು ಅದಕ್ಕೆ ಬೆಚ್ಚಗಿನ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಕೂದಲಿಗೆ ಹಚ್ಚಿಕೊಂಡು 30 ನಿಮಿಷ ಬಿಟ್ಟು ತಣ್ಣಗಿನ ನೀರಿನಲ್ಲಿ ತೊಳೆಯಬೇಕು. ಒಂದು ದಿನ ಬಿಟ್ಟು ಒಂದು ದಿನ ಈ ರೀತಿ ಮಾಡುವುದರಿಂದ ಒಣಗಿದ ಕೂದಲಿನ ಆರೋಗ್ಯ ವೃದ್ಧಿಯಾಗುತ್ತದೆ.
ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮೊಸರು ಸಹಕಾರಿಯಾಗಿದೆ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಸೊಂಪಾಗಿ ಬೆಳೆಯಲು ಮೊಸರು ಅತ್ಯುತ್ತಮ ವಸ್ತು. ಕೂದಲಿನ ಬುಡ ತಂಪಾಗಿರಲು, ಬುಡ ಗಟ್ಟಿಯಾಗಲು ಮೊಸರು ಸಹಕಾರಿಯಾಗಿದೆ. ಅಲ್ಲದೆ, ತಲೆಹೊಟ್ಟು, ನವೆಯಂತಹ ಸಮಸ್ಯೆಗಳಿಗೆ ಮೊಸರು ರಾಮಬಾಣವೆಂದೇ ಹೇಳಬಹುದು.
ಸೀಗೆಕಾಯಿಯನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿಕೊಂಡು ತಲೆಗೆ ಹಚ್ಚಿ 20-30 ನಿಮಿಷಗಳ ಬಳಿಕ ಸ್ನಾನ ಮಾಡುವುದರಿಂದ ಕೂದಲು ಅತ್ಯುತ್ತಮವಾಗಿರುತ್ತದೆ.
ತಲೆಹೊಟ್ಟು ನಿವಾರಣೆಗೆ ಸೀಗೆಕಾಯಿ
ಬಹುತೇಕ ಮಂದಿಯಲ್ಲಿ ತಲೆಹೊಟ್ಟು ಸಾಮಾನ್ಯವಾಗಿರುತ್ತದೆ. ಕಲುಷಿತ ವಾತಾವರಣ ಕೂದಲು ಬಹುಬೇಗ ಹಾಳಾಗುವಂತೆ ಮಾಡುತ್ತದೆ. ತಲೆಹೊಟ್ಟು ನಿವಾರಣೆಗೆ 1 ಚಮಚ ಸೀಗೆಕಾಯಿ, 1 ಚಮಚ ನೆಲ್ಲಿಕಾಯಿ, 1 ಚಮಚ ಆಲಿವ್ ಆಯಿಲ್, 1 ಚಿಕ್ಕ ಕಪ್ ಮೊಸರು ಎಲ್ಲವನ್ನು ಮಿಶ್ರಣ ಮಾಡಿ 2-3 ಗಂಟೆಗಳ ಕಾಲ ನೆನೆಯಲು ಬಿಡಬೇಕು. ಬಳಿಕ ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷಗಳ ಬಳಿ ಸ್ನಾನ ಮಾಡಬೇಕು. ಇದನ್ನು ವಾರಕ್ಕೆ 1 ಬಾರಿ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.
ಸೀಗೆಕಾಯಿ, ಕೊಬ್ಬರಿ ಎಣ್ಣೆ ಪೇಸ್ಟ್
ಬಹುತೇಕ ಮಂದಿ ಆಯಿಲ್ ಮಸಾಜ್ ಇಷ್ಟ ಪಡುತ್ತಾರೆ. ಆದರೆ, ಸಮಯದ ಅಭಾವದಿಂದ ತಲೆಗೆ ಎಣ್ಣೆ ಹಚ್ಚುವವರ ಸಂಖ್ಯೆಯೇ ಕಡಿಮೆಯಾಗಿ ಹೋಗಿದೆ. ಇದರಿಂದ ಕೂದಲಿನ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ.
ಸೀಗೆಕಾಯಿ ಪುಡಿ 1 ಚಮಚ, ನೆಲ್ಲಿಕಾಯಿ ಪುಡಿ 1 ಚಮಚ ಹಾಗೂ ಕಾಯಿಸಿದ ಕೊಬ್ಬರಿ ಎಣ್ಣೆ 2 ಚಮಚ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ 3 ಗಂಟೆಗಳ ಕಾಲ ಬಿಟ್ಟು ನಂತರ ಇದನ್ನು ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಂಡು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆಯಬೇಕು. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಕೂದಲು ಸಮೃದ್ಧವಾಗಿ ಬೆಳೆಯುತ್ತದೆ.
ಸೀಗೆಕಾಯಿ ಅರ್ಧ ಚಮಚ, ಬೇವಿನ ಸೊಪ್ಪಿನ ಪುಡಿ ಅರ್ಧ ಚಮಚ, ತುಳಸಿ ಪುಡಿ ಅರ್ಧ, ರೋಸ್ ಪೆಟಲ್ ಪುಡಿ ಅರ್ಧ ಚಮಚ, ಆಲಿವ್ ಆಯಿಲ್ 1 ಚಮಚ, 1 ಬಟ್ಟಲು ಮೊಸರು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ 30 ನಿಮಿಷ ನೆನೆಯಲು ಬಿಡಿ. ನಂತರ ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷಗಳ ಬಳಿಕ ಕೂದಲನ್ನು ತೊಳೆಯುವುದರಿಂದ ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos