ಜೀವನಶೈಲಿ

ನಿಮ್ಮ ಮಕ್ಕಳು ಪರೀಕ್ಷಾ ಒತ್ತಡದಿಂದ ಬಳಲುತ್ತಿದ್ದಾರೆಯೇ? ಇಲ್ಲಿದೆ ನೆರವು..

Sumana Upadhyaya

ವರ್ಷಪೂರ್ತಿ ಓದಿ ಇನ್ನೇನು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಸಮಯ ಹತ್ತಿರ ಬಂದಿದೆ. ಪರೀಕ್ಷೆಯೆಂದರೆ ಆತಂಕ, ಒತ್ತಡ, ಭಯಪಡುವ ವಿದ್ಯಾರ್ಥಿಗಳೇ ಹೆಚ್ಚು. ಹೇಗೆ ಅಧ್ಯಯನ ಮಾಡಬೇಕೆಂದು ಗೊತ್ತಾಗುವುದಿಲ್ಲ, ಕಲಿತಿದ್ದು ನೆನಪಿನಲ್ಲಿ ಉಳಿಯುವುದಿಲ್ಲ, ಮರೆತುಹೋಗುತ್ತದೆ, ಏಕಾಗ್ರತೆಯಿಲ್ಲ ಇತ್ಯಾದಿ ಹೇಳುವುದನ್ನು ಕೇಳುತ್ತೇವೆ. ಈಗಿನ ಕಾಲದಲ್ಲಿ ಶಿಕ್ಷಕರು ಮತ್ತು ಪೋಷಕರು ಅನಗತ್ಯ ಒತ್ತಡಗಳನ್ನು ಮಕ್ಕಳ ಮೇಲೆ ಹೇರುತ್ತಾರೆ. ಇದು ಹಲವು ಸಂದರ್ಭಗಳಲ್ಲಿ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಆಗ ಗಾಬರಿಗೊಂಡ ಪೋಷಕರು ವೈದ್ಯರಲ್ಲಿಗೆ, ಮಾನಸಿಕ ತಜ್ಞರಲ್ಲಿಗೆ ಹೋಗುತ್ತಾರೆ. ಇತ್ತೀಚೆಗೆ ತಮ್ಮ ಮಕ್ಕಳಿಗೆ ತಲೆನೋವು ಮತ್ತು ಬೆನ್ನುನೋವು ಎಂದು ಹೇಳಿಕೊಂಡು ಬರುವ ಪೋಷಕರ ಸಂಖ್ಯೆ ಜಾಸ್ತಿಯಾಗಿದೆ ಎನ್ನುತ್ತಾರೆ ಮಟ್ರೊಪಾಲಿಟನ್ ಸಿಟಿಗಳಲ್ಲಿರುವ ವೈದ್ಯರು.

ಕಾಂಟಿನೆಂಟಲ್ ಆಸ್ಪತ್ರೆಯ ನರ ಮತ್ತು ಬೆನ್ನೆಲುಬು ತಜ್ಞ ಡಾ.ರಾಜಶೇಖರ ರೆಡ್ಡಿ ಕೆ, ಬಹುತೇಕ ಮಕ್ಕಳು ಒತ್ತಡ, ಆತಂಕದ ತಲೆನೋವಿನಿಂದ ಬಳಲುತ್ತಿರುತ್ತಾರೆ, ಈ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಮೂರುಪಟ್ಟು ಅಧಿಕವಾಗಿದೆ. ನೆತ್ತಿಯ ಕೆಳಗೆ ಕುತ್ತಿಗೆ ಮತ್ತು ಭುಜದ ಭಾಗದ ಸ್ನಾಯುಗಳ ಒತ್ತಡ ಮತ್ತು ಆಯಾಸದಿಂದ ಮಕ್ಕಳಲ್ಲಿ ಈ ರೀತಿಯ ತಲೆನೋವು ಬರುತ್ತದೆ. ಇದಕ್ಕೆ ಏನಾದರೊಂದು ಪರಿಹಾರ ಹೇಳಿ ಎಂದು ಪೋಷಕರು ಕೇಳಿಕೊಂಡು ಬರುತ್ತಾರೆ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ. ಮಕ್ಕಳಲ್ಲಿ ಪರೀಕ್ಷೆ ಮುಗಿದ ಬಳಿಕವೂ ಇದೇ ರೀತಿ ತಲೆನೋವು ಮುಂದುವರಿದರೆ ಆರೋಗ್ಯ ತಪಾಸಣೆ ಮಾಡಿ ತಲೆನೋವಿಗೆ ಕಾರಣವೇನೆಂದು ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ ಎನ್ನುತ್ತಾರೆ.

ಮಕ್ಕಳಲ್ಲಿ ಮೈಗ್ರೇನ್ ರೀತಿಯ ತಲೆನೋವು ಬರುತ್ತಿದೆಯಾ ಎಂದು ಪೋಷಕರು ಕಂಡುಹಿಡಿಯಬೇಕು. ಅದು ಕೂಡ ಇತ್ತೀಚೆಗೆ ಮಕ್ಕಳಲ್ಲಿ ಸಾಮಾನ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ವಯಸ್ಕರಲ್ಲಿ ಶೇಕಡಾ 30 ಮಂದಿಗೆ ಮೈಗ್ರೇನ್ ಕಾಣಿಸಿಕೊಂಡರೆ ಅವರಲ್ಲಿ ಶೇಕಡಾ 5ರಷ್ಟು ಮಂದಿಗೆ ಪ್ರತಿ ತಿಂಗಳಲ್ಲಿ ಈ ತಲೆನೋವು ಪುನರಾವರ್ತಿಸುತ್ತದೆ.

ಮೈಗ್ರೇನ್ ತಲೆನೋವು ಇನ್ನೂ ಹೆಚ್ಚಾಗಿದ್ದು ಅದು ತಲೆಯ ಒಂದು ಬದಿಯಲ್ಲಿ ಮಾತ್ರ ತೀವ್ರ ನೋವು ಉಂಟುಮಾಡುತ್ತದೆ. ಮಕ್ಕಳಲ್ಲಿ ಬರುವ ಮೈಗ್ರೇನ್ ನ್ನು ಪೋಷಕರು ಕಂಡುಹಿಡಿಯಬೇಕು. ಮಕ್ಕಳಿಗೆ ವಾಂತಿ ಆಗುತ್ತದೆಯೇ ಅಥವಾ ಅಸ್ವಸ್ಥತೆಯಾಗುತ್ತದೆಯೇ ಎಂದು ನೋಡಿಕೊಳ್ಳಿ. ಹಲವರಿಗೆ ಬೆಳಕು ಮತ್ತು ಶಬ್ದ ಕೂಡ ತೊಂದರೆ ನೀಡಬಹುದು ಎನ್ನುತ್ತಾರೆ ವೈದ್ಯರು.

ಇನ್ನು ಮಕ್ಕಳಲ್ಲಿ ಬರುವ ಬೆನ್ನು ನೋವಿಗೆ ಅವರು ಕುಳಿತುಕೊಳ್ಳುವ ಭಂಗಿ ಕೂಡ ಕಾರಣವಾಗುತ್ತದೆ. ಕಂಪ್ಯೂಟರ್ ಮುಂದೆ ಅಥವಾ ಮೊಬೈಲ್ ನ್ನು ಕೈಯಲ್ಲಿ ಹಿಡಿದುಕೊಂಡು ಗಂಟೆಗಟ್ಟಲೆ ತಲೆ ಬಗ್ಗಿಸಿ ಕುಳಿತರೆ ಕುತ್ತಿಗೆ, ಬೆನ್ನು ನೋವು ಕಾಣಿಸಿಕೊಳ್ಳುವುದಲ್ಲದೆ ಸುಸ್ತು, ತಲೆನೋವು, ಏಕಾಗ್ರತೆ ಕೊರತೆ, ನರದ ದೌರ್ಬಲ್ಯ ಕೂಡ ಕಾಣಿಸಿಕೊಳ್ಳಬಹುದು.

ಮಕ್ಕಳಿಗೆ ಓದಲು ಬರೆಯಲು ಉತ್ತಮ ಪೀಠೋಪಕರಣದ ಸೌಲಭ್ಯವಿರಬೇಕು. ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವಾಗ ಅಕ್ಷರದ ಗಾತ್ರ ಹೆಚ್ಚಿಸುವುದು, ಕಣ್ಣಿನ ಮಟ್ಟದಲ್ಲಿ ಕಂಪ್ಯೂಟರ್ ಪರದೆ ಇರಬೇಕು. ಲ್ಯಾಪ್ ಟಾಪ್ ನ್ನು ತೊಡೆಯ ಮೇಲೆ ಇಟ್ಟುಕೊಂಡು ಮಕ್ಕಳು ಬಳಸುವುದು ಒಳ್ಳೆಯದಲ್ಲ.

ಮಕ್ಕಳಲ್ಲಿ ಪರೀಕ್ಷೆಯ ಭಯ ಹೋಗಲಾಡಿಸಲು ಆತ್ಮವಿಶ್ವಾಸ ತುಂಬಬೇಕು. ಜವಾಬ್ದಾರಿಯುತ ಪೋಷಕರಾಗಿ ಮಕ್ಕಳಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಹೀಗೆ ಮಾಡಿ:
1. ಮಕ್ಕಳಲ್ಲಿರುವ ಒತ್ತಡದ ಚಿಹ್ನೆಯನ್ನು ಗುರುತಿಸಿ ಮಕ್ಕಳ ಸಾಮರ್ಥ್ಯ ಎಷ್ಟಿದೆ ಎಂದು ಅರ್ಥ ಮಾಡಿಕೊಳ್ಳಿ.
2. ಮಕ್ಕಳು ಹೇಗೆ ಕಲಿತರೆ ಚೆನ್ನಾಗಿ, ಬೇಗನೆ ಕಲಿಯುತ್ತಾರೆ ಎಂದು ನೋಡಿಕೊಳ್ಳಿ.
3. ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಬೇಡಿ, ಅವರನ್ನು ಉತ್ತೇಜಿಸಿ.
4. ಮಕ್ಕಳ ಆಹಾರ ಮತ್ತು ನಿದ್ದೆಗೆ ಪ್ರಾಮುಖ್ಯತೆ ನೀಡಿ. ಅನಾರೋಗ್ಯಕರ ಜಂಕ್ ಪದಾರ್ಥಗಳು, ಮಸಾಲೆಭರಿತ, ಎಣ್ಣೆ ಅಂಶದ ಆಹಾರಗಳನ್ನು ಮಕ್ಕಳಿಗೆ ಹೆಚ್ಚು ನೀಡಬೇಡಿ.
5. ಮೈಗ್ರೇನ್ ತಲೆನೋವೆಂದು ಅರ್ಥೈಸಿಕೊಳ್ಳಲು ಮಕ್ಕಳಲ್ಲಿ ಎಷ್ಟು ದಿನಕ್ಕೊಮ್ಮೆ ತಲೆನೋವು ಕಾಣಿಸಿಕೊಳ್ಳುತ್ತದೆ, ಎಷ್ಟು ಹೊತ್ತು ಇರುತ್ತದೆ, ಅದರ ತೀವ್ರತೆ ಇತ್ಯಾದಿಗಳನ್ನು ನೋಡಿ.
6. ಪಠ್ಯದ ಜೊತೆಗೆ ಮಕ್ಕಳ ಪಠ್ಯೇತರ ಚಟುವಟಿಕೆಗಳ ಮೇಲೆ ಸಹ ಗಮನ ಕೊಡಿ. ಮಕ್ಕಳು ಯೋಗ, ವ್ಯಾಯಾಮ, ಧ್ಯಾನ ಮಾಡುತ್ತಿದ್ದರೆ ಮನಸ್ಸಿನ ಮತ್ತು ಶರೀರದ ಆರೋಗ್ಯಕ್ಕೆ ಉತ್ತಮ.

SCROLL FOR NEXT