ಜೀವನಶೈಲಿ

ಕಂಪ್ಯೂಟರ್, ಮೊಬೈಲ್ ನೋಡಿ ನೋಡಿ ಕಣ್ಣುಗಳಿಗೆ ತ್ರಾಸ? ಒತ್ತಡ ಎದುರಿಸಲು ಕೆಲವು ಸಲಹೆಗಳು

Sumana Upadhyaya

ಇಂದಿನ ತಾಂತ್ರಿಕ ಕಂಪ್ಯೂಟರ್ ಯುಗದಲ್ಲಿ ಬಹುತೇಕ ಮಂದಿ ದಿನನಿತ್ಯ ಗಂಟೆಗಟ್ಟಲೆ ಕಂಪ್ಯೂಟರ್, ಮೊಬೈಲ್ ನಲ್ಲಿ ಸಮಯ ಕಳೆಯುತ್ತಾರೆ. ಕಂಪ್ಯೂಟರ್ ಇಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಗಂಟೆಗಟ್ಟಲೆ ಕಂಪ್ಯೂಟರ್ ಪರದೆ ಮುಂದೆ ಕುಳಿತುಕೊಂಡರೆ ಕೆಲವರಿಗೆ ತಲೆನೋವು ಬರುವುದು, ಕಣ್ಣು ಮಂಜಾಗುವುದು, ಕಣ್ಣಿನಲ್ಲಿ ನೀರು ಬರುವುದು, ಕುತ್ತಿಗೆ, ಬೆನ್ನು, ಭುಜ ಇತ್ಯಾದಿ ಕಡೆಗಳಲ್ಲಿ ನೋವು ಕಾಣಿಸಿಕೊಳ್ಳುವುದು ಇತ್ಯಾದಿ ಸಮಸ್ಯೆಗಳು ಬರುತ್ತವೆ. ಇದಕ್ಕೆ ಕಂಪ್ಯೂಟರ್ ವಿಷನ್ ಸಿಂಡ್ರೊಮ್ ಎಂದು ಕರೆಯುತ್ತಾರೆ.


ಡಿಜಿಟಲ್ ಯಂತ್ರಗಳನ್ನು ಗಂಟೆಗಟ್ಟಲೆ ವೀಕ್ಷಿಸಿದಾಗ ಕಣ್ಣು ನೋವಾಗುವುದು, ಸುಸ್ತಾಗುವುದರಿಂದ ಕಾಲಕ್ರಮೇಣ ಹಲವು ಸಮಸ್ಯೆಗಳು ಬರುತ್ತವೆ. ಇದಕ್ಕೆ ನಾವು ಪಾಲಿಸಬೇಕಾದ ಕೆಲವೊಂದು ಸಲಹೆಗಳು ಇಲ್ಲಿವೆ:


ಕೆಲಸದ ಮಧ್ಯೆ ವಿರಾಮ ತೆಗೆದುಕೊಳ್ಳಿ: ಒಂದು ಸಾಧನದ ಮುಂದೆ ದೀರ್ಘಾವಧಿಯವರೆಗೆ ಕುಳಿತುಕೊಳ್ಳುವಾಗ 20-20-20 ನಿಯಮವನ್ನು ನೆನಪಿಟ್ಟುಕೊಳ್ಳಿ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದರೆ ಪ್ರತಿ 20 ನಿಮಿಷಗಳಿಗೊಮ್ಮೆ ನಿಮ್ಮ ಕಣ್ಣನ್ನು ಬೇರೆಡೆ ಹಾಯಿಸಿ. 20 ನಿಮಿಷಗಳಿಗೆ ಬ್ರೇಕ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಾದರೆ ನಿಮಗೆ ಸಾಧ್ಯವಾಗುವಾಗ ನಿಗದಿತ ಸಮಯದಲ್ಲಿ ತೆಗೆದುಕೊಳ್ಳಿ. ಕಣ್ಣನ್ನು ಆಗಾಗ ಮುಚ್ಚಿ-ತೆರೆಯುವುದು ಮಾಡುತ್ತಿರಿ. ಇದರಿಂದ ಒಣಗಿಹೋಗುವುದನ್ನು ತಡೆಯಬಹುದು. ನಿಮ್ಮ ಕಣ್ಣು ಒಣಗಿ ಹೋಗುವ ಸಮಸ್ಯೆ ಹೊಂದಿದ್ದರೆ ಔಷಧಾಲಯಗಳಿಂದ ಐ ಡ್ರಾಪ್ಸ್ ತಂದು ಅದನ್ನು ಹಾಕುತ್ತಿರಿ.


ಕಣ್ಣುಗಳಿಗೆ ವ್ಯಾಯಾಮ ನೀಡಿ: ಯೋಗ ಮಾಡುವುದರಿಂದ ದೇಹಕ್ಕೆ, ಅಂಗಾಂಗಗಳಿಗೆ ಹೇಗೆ ಸಹಾಯವಾಗುತ್ತದೆಯೋ ಅದೇ ರೀತಿ ಕಣ್ಣುಗಳಿಗೆ ಸಹ ಕೆಲವು ವ್ಯಾಯಾಮವಿರುತ್ತದೆ. ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿರುವಾಗ ಕಣ್ಣನ್ನು ಸುತ್ತಲೂ ಹೊರಳಿಸುವುದು, ಹತ್ತಿರ ಮತ್ತು ದೂರದ ವಸ್ತುಗಳ ಕಡೆ ನೋಡುವುದು, ವಿರಾಮ ಎನಿಸಲು ಸುಸ್ತಾದಾಗ ಕಣ್ಣುಗಳ ಸುತ್ತ ಕೈಯಿಂದ ಉಜ್ಜುವುದು ಇತ್ಯಾದಿಗಳನ್ನು ಮಾಡಬೇಕು. ಇಂತಹ ಅಭ್ಯಾಸಗಳನ್ನು ದಿನಕ್ಕೆ ಸುಮಾರು 20 ನಿಮಿಷ ಮಾಡುತ್ತಿರಬೇಕು.


ಸಾಧನಗಳನ್ನು ಪರೀಕ್ಷಿಸುತ್ತಿರಿ: ನಿಮ್ಮ ಕಂಪ್ಯೂಟರ್ ಪರದೆ ಕಣ್ಣಿಗೆ ಹೊಡೆಯುವಂತೆ ತೀಕ್ಷ್ಣವಾಗಿರಬಾರದು. ಕಂಪ್ಯೂಟರ್ ಕುಳಿತುಕೊಳ್ಳುವ ಕುರ್ಚಿಯ ಎತ್ತರ ಕೂಡ ಮುಖ್ಯವಾದದ್ದು. ಮೊಬೈಲನ್ನು ಬಳಸುವಾಗ ಮುಖಕ್ಕೆ ಹತ್ತಿರವಾಗಿ ಬಳಸಬಾರದು. ಪರದೆಯ ಮೇಲಿನ ಅಕ್ಷರದ ಗಾತ್ರವನ್ನು ಹೆಚ್ಚಿಸಿ. ನಿಮ್ಮ ಕಣ್ಣಿಗೆ ಸರಿಯಾಗುವ ರೀತಿಯಲ್ಲಿ ಮೊಬೈಲ್ ಸ್ಕ್ರೀನ್ ನ ಬೆಳಕಿನ ಪ್ರಕಾಶವನ್ನು ಹೊಂದಿಸಿಕೊಳ್ಳಿ.


ಬೆಳಕನ್ನು ಹೊಂದಿಸಿಕೊಳ್ಳಿ; ಒಳಾಂಗಣದಲ್ಲಿರುವಾಗ ಸುತ್ತ ಇರುವ ಬೆಳಕು ಹೆಚ್ಚು ಪ್ರಕಾಶಮಾನವಾಗಿ ಅಥವಾ ತುಂಬ ಮಂದಬೆಳಕು ಕೂಡ ಇರಬಾರದು. ಕಡಿಮೆ ತೀವ್ರತೆಯ ಬಲ್ಬ್ ನ್ನು ಬಳಸಿ. ಹಾಗೆಂದು ತುಂಬಾ ಕತ್ತಲೆಯಲ್ಲಿರಬಾರದು. 
ಕಣ್ಣಿನ ತಪಾಸಣೆ ಮಾಡಿಸುತ್ತಿರಿ; ಕಣ್ಣಿನ ಯಾವುದೇ ಸಮಸ್ಯೆ ಬಂದಾಗ ತಕ್ಷಣ ಕಣ್ಣಿನ ತಜ್ಞರನ್ನು ಭೇಟಿ ಮಾಡಿ ತಪಾಸಣೆ ಮಾಡಿಸುತ್ತಿರಿ, ವರ್ಷಕ್ಕೊಂದು ಸಲವಾದರೂ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುತ್ತಿರಿ. ದೃಷ್ಟಿ ಸಮಸ್ಯೆಯಿದ್ದಾಗ ಕನ್ನಡಕ ಧರಿಸುವುದೇ ಉತ್ತಮ. 


ಕಂಪ್ಯೂಟರ್ ಕನ್ನಡಕ ಧರಿಸಿ: ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವಾಗ ಕಂಪ್ಯೂಟರ್ ಐಗ್ಲಾಸ್ ಗಳನ್ನೇ ಬಳಸಿದರೆ ಕಣ್ಣಿನ ಆರೋಗ್ಯಕ್ಕೆ ಉತ್ತಮ. 


ಉತ್ತಮ ಆಹಾರ ಸೇವಿಸಿ: ಯಾವುದೇ ಸಾಧನಗಳನ್ನು ಬಳಸಿದರೂ ಅಂತಿಮವಾಗಿ ನಮ್ಮ ಆರೋಗ್ಯ ನಾವು ಸೇವಿಸುವ ಆಹಾರವನ್ನು ಅವಲಂಬಿಸುತ್ತಿರುತ್ತದೆ. ವಿಟಮಿನ್, ಮಿನರಲ್ ಗಳು ಹೆಚ್ಚಾಗಿರುವ ಆಹಾರಗಳು ಕಣ್ಣಿಗೆ ಒಳ್ಳೆಯದು. ಸಾಕಷ್ಟು ನೀರು ಸೇವಿಸಿ, ರಾತ್ರಿ ಸಾಕಷ್ಟು ನಿದ್ದೆ ಮಾಡಿ, ಹಸಿರು ತರಕಾರಿಗಳು, ಕ್ಯಾರೆಟ್, ಪಪ್ಪಾಯಿ, ಖರ್ಜೂರಗಳಲ್ಲಿ ಸಾಕಷ್ಟು ವಿಟಮಿನ್ ಎ ಇರುತ್ತದೆ. 

SCROLL FOR NEXT