ಜೀವನಶೈಲಿ

ಗಾಢ ಕೆಂಪು ಬಣ್ಣದ ಬೆಳಕು ದಿಟ್ಟಿಸಿ ನೋಡುವುದರಿಂದ ದೃಷ್ಟಿಸಮಸ್ಯೆ ಸುಧಾರಣೆ 

Srinivas Rao BV

ಲಂಡನ್: ಪ್ರತಿ ದಿನ ಮೂರು ನಿಮಿಷದವರೆಗೆ ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡುವುದರಿಂದ ದೃಷ್ಟಿ ಸಮಸ್ಯೆ ಸುಧಾರಣೆಯಾಗಲಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಜೆರೊಂಟಾಲಜಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ ವಯಸ್ಸಾದಂತೆ ಕುಸಿಯುವ ದೃಷ್ಟಿ ಸಾಮರ್ಥ್ಯವನ್ನು ಸುಧಾರಣೆ ಮಾಡುವುದಕ್ಕೆ ಗಾಢ ಕೆಂಪು ಬಣ್ಣದ ಬೆಳಕು ದಿಟ್ಟಿಸಿ ನೋಡುವುದು ಮನೆಯ ಮಟ್ಟಿಗೆ ಮಾಡಿಕೊಳ್ಳಬಹುದಾದ ಕಣ್ಣಿನ ಥೆರೆಪಿಯಾಗಲಿದ್ದು, ಸ್ವಭಾವಿಕವಾಗಿ ಕುಸಿಯುವ ದೃಷ್ಟಿ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುವುದಕ್ಕೆ ಲಕ್ಷಾಂತರ ಜನರಿಗೆ ಸಹಕಾರಿಯಾಗಲಿದೆ ಎಂದು ಹೇಳಿದೆ. ವಯಸ್ಸಾದಂತೆ ರೆಟಿನಾ ಜೀವಕೋಶಗಳ ಶಕ್ತಿ ಕುಂದುತ್ತದೆ. ಈ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವ ತರಂಗಾಂತರದ ಗಾಢ ಕೆಂಪು ಬಣ್ಣದ ಬೆಳಕನ್ನು ದಿನವೊಂದಕ್ಕೆ 3 ನಿಮಿಷಗಳು ದಿಟ್ಟಿಸಿ ನೋಡಬಹುದು ಎಂಬುದು ನಮ್ಮ ಅಧ್ಯಯನ ವರದಿಯ ಮೂಲಕ ದೃಢಪಟ್ಟಿದೆ ಎಂದು ಬ್ರಿಟನ್ ನಲ್ಲಿರುವ ಯೂನಿವರ್ಸಿಟಿ ಕಾಲೇಜ್ ಲಂಡನ್ ನ ಮುಖ್ಯ ಲೇಖಕಿ ಗ್ಲೆನ್ ಜೆಫರಿ ಹೇಳಿದ್ದಾರೆ.

ಮನುಷ್ಯರಲ್ಲಿ 40 ವಯಸ್ಸಿನ ಬಳಿಕ ರೆಟೀನಾದ ಜೀವಕೋಶಗಳ ಶಕ್ತಿ ಸಹ ಕುಂದುತ್ತದೆ. ಬೇರೆಲ್ಲಾ ಭಾಗಗಳಿಗಿಂತ ದೃಷ್ಟಿ ಸಾಮರ್ಥ್ಯ ಬೇಗ ಕುಸಿಯುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಇಲಿ ಹಾಗೂ ಇತರ ಕೀಟ, ಪಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ 670 ನ್ಯಾನೋಮೀಟರ್ ನಷ್ಟು ಗಾಢ ಕೆಂಪು ಬಣ್ಣದ ಬೆಳಕನ್ನು ಚೆಲ್ಲಿದಾಗ ಅವುಗಳ ರೆಟೀನಾದ ಫೋಟೊರಿಸೆಪ್ಟರ್ ಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಕಂಡುಬಂದಿದೆ.

ಇದೇ ಮಾದರಿಯ ಪ್ರಯೋಗವನ್ನು ಮನುಷ್ಯರ ಮೇಲೆಯೂ ನಡೆಸಲಾಗಿದ್ದು, 28-72 ವರ್ಷಗಳ ನಡುವಿನ 24 (12 ಪುರುಷರ, 12 ಮಹಿಳೆಯರು) ಸಂಶೋಧನೆಗೆ ಒಳಪಡಿಸಲಾಗಿದ್ದು, ಎಲ್ ಇಡಿ ಟಾರ್ಚ್ ನ್ನು ನೀಡಲಾಗಿತ್ತು. ಅದರಲ್ಲಿನ 670 ಎನ್ಎಂ ಬೆಳಕಿನ ಕಿರಣಗಳನ್ನು ದಿನವೊಂದಕ್ಕೆ 3 ನಿಮಿಷಗಳ ಕಾಲ ದಿಟ್ಟಿಸುವಂತೆ  ಸೂಚಿಸಲಾಗಿತ್ತು, 40 ವಯಸ್ಸಿನವರ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಿರುವುದನ್ನು ಸಂಶೋಧಕರು ಕಂಡಿದ್ದಾರೆ.

SCROLL FOR NEXT