ಜೀವನಶೈಲಿ

ಲಸಿಕೆ ಮಿಶ್ರಣದಿಂದ ಕೋವಿಡ್-19 ವಿರುದ್ಧದ ಹೋರಾಟ ಪರಿಣಾಮಕಾರಿ: ಲ್ಯಾನ್ಸೆಟ್ ಅಧ್ಯಯನ ವರದಿ

Srinivas Rao BV

ಒಂದೇ ರೀತಿಯ ಕೋವಿಡ್-19 ಲಸಿಕೆಯ ಎರಡು ಡೋಸ್ ಪಡೆಯುವುದಕ್ಕಿಂತಲೂ ಎರಡು ಭಿನ್ನ ಲಸಿಕೆಗಳ ಡೋಸ್ ಗಳನ್ನು ಪಡೆಯುವುದು ಅತ್ಯಂತ ಪರಿಣಾಮಕಾರಿ ಎಂದು ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ. 

ಸ್ವೀಡನ್ ನಲ್ಲಿ ರಾಷ್ಟ್ರವ್ಯಾಪಿ ನಡೆಸಲಾದ ಈ ಅಧ್ಯಯನ ವರದಿಯಲ್ಲಿ ಆಕ್ಸ್ಫರ್ಡ್ ಆಸ್ಟ್ರಾಜೆನಿಕಾದ ಮೊದಲ ಡೋಸ್ ಹಾಗೂ ನಂತರದಲ್ಲಿ ಎಂಆರ್ಎನ್ಎ ಲಸಿಕೆಯನ್ನು ಪಡೆದವರಲ್ಲಿ, ಎರಡೂ ಡೋಸ್ ಗಳಲ್ಲಿ ಆಸ್ಟ್ರಾಜೆನಿಕಾ ಲಸಿಕೆಯನ್ನು ಪಡೆದವರಿಗಿಂತಲೂ ಹೆಚ್ಚಿನ ಪರಿಣಾಮಕಾರಿತ್ವ ಇದೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ.

ಆಸ್ಟ್ರಾಜೆನಿಕಾದ ವೆಕ್ಟರ್ ಆಧಾರಿತ ಲಸಿಕೆಯನ್ನು 65 ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನವರಿಗೆ ಸುರಕ್ಷತಾ ದೃಷ್ಟಿಯಿಂದ ತಡೆಹಿಡಿಯಲಾಗಿತ್ತಾದರೂ ಈ ಲಸಿಕೆಯನ್ನು ಈಗಾಗಲೇ ಪಡೆದವರಿಗೆ ಎರಡನೇ ಡೋಸ್ ನಲ್ಲಿ ಎಂಅರ್ ಎನ್ಎ ಲಸಿಕೆಯನ್ನು ಪಡೆಯಲು ಸಲಹೆ ನೀಡಲಾಗಿದೆ.

ಲಸಿಕೆಯನ್ನೇ ಪಡೆಯದೇ ಇರುವುದಕ್ಕಿಂತಲೂ ಯಾವುದೇ ಅನುಮೋದಿತ ಲಸಿಕೆಯನ್ನು ಪಡೆಯುವುದು ಉತ್ತಮ ಎಂದು ಸ್ವೀಡನ್ ಉಮಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೀಟರ್ ನಾರ್ಡ್‌ಸ್ಟ್ರಾಮ್ ಹೇಳಿದ್ದಾರೆ.

ವೆಕ್ಟಾರ್ ಆಧಾರಿತ ಲಸಿಕೆಯನ್ನು ಪಡೆದ ನಂತರ ಎಂ-ಆರ್ ಎನ್ಎ ಲಸಿಕೆ ಪಡೆಯುವುದಕ್ಕೆ ಶಿಫಾರಸು ಮಾಡಲಾಗುತ್ತದೆ, ಎರಡೂ ಡೋಸ್ ಗಳಲ್ಲಿ ವೆಕ್ಟಾರ್ ಆಧಾರಿತ ಲಸಿಕೆಯನ್ನು ಪಡೆಯುವುದಕ್ಕಿಂತಲೂ ಮಿಶ್ರಣ ಮಾಡಿ ಒಂದೊಂದು ಡೋಸ್ ಗಳಲ್ಲಿ ಪ್ರತ್ಯೇಕ ಲಸಿಕೆಯನ್ನು ಪಡೆಯುವುದರಿಂದ ಕೋವಿಡ್-19 ವಿರುದ್ಧ ಅತ್ಯಂತ ಪರಿಣಾಮಕಾರಿ ಹೋರಾಟ ಸಾಧ್ಯ ಎನ್ನುತ್ತಾರೆ ಪೀಟರ್ ನಾರ್ಡ್‌ಸ್ಟ್ರಾಮ್.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಕುರಿತ ಅಧ್ಯಯನಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ಅನುಮೋದನೆ ನೀಡಿದೆ.

ತಮಿಳುನಾಡಿನ ವೆಲ್ಲೂರಿನ ಸಿಎಮ್‌ಸಿ ಆಸ್ಪತ್ರೆಗೆ ಲಸಿಕೆಗಳ ಡೋಸ್‌ ಮಿಶ್ರಣ ಕುರಿತು ಅಧ್ಯಯನಕ್ಕೆ ಅನುಮತಿ ನೀಡಲಾಗಿದೆ ಎಂದು ನೀತಿ ಆಯೋಗದ (ಆರೋಗ್ಯ ವಿಭಾಗ)ದ ಸದಸ್ಯ ಡಾ.ವಿ ಕೆ ಪೌಲ್ ಅವರು ಮಾಹಿತಿ ನೀಡಿದ್ದರು.

ಇನ್ನು ಈ ಹಿಂದೆ ಪ್ರತ್ಯೇಕವಾಗಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) 98 ಜನರನ್ನು ಒಳಗೊಂಡ ಇತ್ತೀಚಿನ ಅಧ್ಯಯನವು, ಉತ್ತರಪ್ರದೇಶದಲ್ಲಿ 18 ಜನರಿಗೆ ಅಜಾಗರೂಕತೆಯಿಂದ ಕೋವಿಶೀಲ್ಡ್ ಅನ್ನು ಮೊದಲ ಡೋಸ್ ಆಗಿ ಮತ್ತು ಕೋವಾಕ್ಸಿನ್ ಅನ್ನು ಎರಡನೆಯದಾಗಿ ನೀಡಲಾಗಿತ್ತು. ಆದರೆ ಈ ಎರಡು ಕೋವಿಡ್ -19 ಲಸಿಕೆಗಳನ್ನು ಸಂಯೋಜಿಸಿರುವುದು ಒಂದೇ ಲಸಿಕೆಯ ಎರಡು ಡೋಸ್ ಗಳಿಂದ ಸಿಗುವ ರೋಗ ನಿರೋಧಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಫಲಿತಾಂಶವನ್ನು ತೋರಿಸಿದೆ ಎನ್ನಲಾಗಿದೆ.

SCROLL FOR NEXT