ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಬಳಕೆ ಮಾಡುವುದುಂಟು. ಮುಖ್ಯವಾಗಿ ಖಾದ್ಯಗಳ ಕೊನೆಗೆ ಡೆಕೋರೇಶನ್‌ಗಾಗಿ ಕೊತ್ತಂಬರಿ ಸೊಪ್ಪನ್ನು ಬಳಕೆ ಮಾಡುವುದುಂಟು. ಕೊತ್ತಂಬರಿ ಸೊಪ್ಪು ಆಹಾರವನ್ನು ಸುಂದರವಾಗಿಸುವುದಲ್ಲದೆ, ಉತ್ತಮ ಘಮವನ್ನೂ ನೀಡುತ್ತದೆ. ಈ ಕೊತ್ತಂಬರಿ ಸೊಪ್ಪು ವಿಟಮಿನ್ A, C, K, ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ,
ಚರ್ಮದ ಆರೋಗ್ಯ ಸುಧಾರಿಸುವುದಲ್ಲದೆ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಾಗೂ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಬಾಯಿಯಲ್ಲಿ ಹುಣ್ಣು, ತಲೆನೋವು, ಉರಿಯೂತ, ಮತ್ತು ಮೂತ್ರಪಿಂಡದ ಆರೋಗ್ಯ ಕಾಪಾಡಲು ಪ್ರಮುಖವಾಗಿದೆ.
ಭಾರತದ ಬಹುತೇಕ ಖಾದ್ಯಗಳಿಗೆ ಕೊತ್ತಂಬರಿ ಸೊಪ್ಪನ್ನು ಬಳಕೆ ಮಾಡಲಾಗುತ್ತದೆ. ಆದರೆ, ಇದರ ಮುಖ್ಯ ಸಮಸ್ಯೆ ಎಂದರೆ ಕೊತ್ತಂಬರಿ ಸೊಪ್ಪು ಎರಡು ಮೂರು ದಿನಗಳಲ್ಲಿ ಹಾಳಾಗುವುದು. ಫ್ರಿಡ್ಜ್‌ನಲ್ಲಿಟ್ಟರೂ ಇದರ ತಾಜಾತನ ಉಳಿಯುವುದಿಲ್ಲ.
ಕೊತ್ತಂಬರಿ ಸೊಪ್ಪಿನ ತಾಜಾತನ ಕಾಪಾಡಲು ಕೆಲವು ಟಿಪ್ಸ್ ಗಳು ಇಂತಿವೆ...
ಕೊತ್ತಂಬರಿ ಸೊಪ್ಪನ್ನು ತಂದ ಕೂಡಲೇ ಅದರಲ್ಲಿರುವ ಬೇರು ಹಾಗೂ ಕೆಟ್ಟಿರುವ ಎಲೆಗಳನ್ನು ತೆಗೆದುಹಾಕಿ.
ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ, ಒಂದು ಚಮಚ ಅರಿಶಿನ ಪುಡಿಯನ್ನು ಹಾಕಿ. ಇದರಲ್ಲಿ ಕೊತ್ತಂಬರಿ ಸೊಪ್ಪನ್ನು ಸುಮಾರು 30 ನಿಮಿಷಗಳ ಕಾಲ ನೆನೆಸಿಡಿ. ಈಗ ಕೊತ್ತಂಬರಿ ಸೊಪ್ಪನ್ನು ತೆಗೆದು, ನೀರನ್ನು ಒಣಗಿಸಿ, ಒಂದು ಡಬ್ಬದಲ್ಲಿ ಟಿಶ್ಯು ಹಾಕಿ ಅದರಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತರ ಮೇಲೆ ಮತ್ತೊಂದು ಟಿಶ್ಯು ಹಾಕಿ ಡಬ್ಬವನ್ನು ಮುಚ್ಚಿಡಿ. ಈ ಡಬ್ಬನನ್ನು ಫ್ರಿಡ್ಜ್ ನಲ್ಲಿಡಿ.
ಡಬ್ಬವನ್ನು ಫ್ರಿಡ್ಜ್ ನಲ್ಲಿ ಇಡುವುದಕ್ಕೂ ಮುನ್ನ ಕೊತ್ತಂಬರಿ ಸೊಪ್ಪಿನಲ್ಲಿ ನೀರಿನಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ
ಕೊತ್ತಂಬರಿ ಸೊಪ್ಪನ್ನು ಖರೀದಿಸುವಾಗ ಬೆಲೆಗೆ ಮಾತ್ರವಲ್ಲ, ಅದರ ಗಾತ್ರ, ಬಣ್ಣ ಮತ್ತು ಪರಿಮಳದ ಬಗ್ಗೆಯೂ ಗಮನ ಹರಿಸುವುದು ಮುಖ್ಯ. ಇಲ್ಲದಿದ್ದರೆ, ಆಹಾರದಲ್ಲಿ ರುಚಿ ಅಥವಾ ಸುವಾಸನೆ ಇರುವುದಿಲ್ಲ. ಆದ್ದರಿಂದ ಯಾವಾಗಲೂ ತಾಜಾ ವಾಸನೆ ಮತ್ತು ತಿಳಿ ಹಸಿರು ಮತ್ತು ಸಣ್ಣ ಎಲೆಗಳನ್ನು ಹೊಂದಿರುವ ಕೊತ್ತಂಬರಿ ಸೊಪ್ಪನ್ನು ಖರೀದಿಸಿ. ಇದರಿಂದ ಶೇಖರಣೆಗೂ ಒಳ್ಳೆಯದು.
ದೀರ್ಘಕಾಲ ಇರಿಸಲು ಸೊಪ್ಪನ್ನು ಕತ್ತರಿಸಿ, ಫ್ರೀಜರ್-ಸೇಫ್ ಬ್ಯಾಗ್‌ಗಳಲ್ಲಿ ಹಾಕಿ ಫ್ರೀಜ್ ಮಾಡಿ, ಬೇಕಾದಾಗ ಬಳಸಿ.
ಕೊತ್ತಂಬರಿ ಸೊಪ್ಪಿನ ತುದಿಗಳನ್ನು ಟ್ರಿಮ್ ಮಾಡಿ ಮತ್ತು ಅವುಗಳನ್ನು ಚೆನ್ನಾಗಿ ತೊಳೆಯಿರಿ. ಪೇಪರ್ ಟವೆಲ್ ಬಳಸಿ ಎಲೆಗಳನ್ನು ಒಣಗಿಸಿ. ನಂತರ ಗಟ್ಟಿಮುಟ್ಟಾದ ಗಾಜಿನ ಜಾರ್ನಲ್ಲಿ ಕಾಲುಭಾಗವನ್ನು ತಣ್ಣಿರಿನಿಂದ ತುಂಬಿಸಿ. ಕೊತ್ತಂಬರಿ ಸೊಪ್ಪನ್ನು ಗಾಜಿನೊಳಗೆ ಇಡಿ, ಎಲ್ಲಾ ಕಾಂಡದ ತುದಿಗಳನ್ನು ಪೂರ್ತಿಯಾಗಿ ನೆನೆಸುವುದನ್ನ ಮರೆಯಬಾರದು.
ಜಿಪ್-ಲಾಕ್ ಬ್ಯಾಗ್ ತೆಗೆದುಕೊಂಡು ಅದನ್ನು ಗಾಜಿನ ಜಾರ್‌ನ ಒಳಗೆ ಇರಿಸಿ. ಚೀಲದ ಜಿಪ್ ಸಡಿಲವಾಗಿರಲಿ ಮತ್ತು ರೆಫ್ರಿಜರೇಟರ್‌ನಲ್ಲಿ ಕವರ್ ಜೊತೆಗೆ ಜಾರ್ ಅನ್ನು ಇರಿಸಿ. ನೀವು ಪ್ರತಿ ಕೆಲವು ದಿನಗಳ ನಂತರ ನೀರನ್ನು ಬದಲಾಯಿಸಬೇಕಾಗುತ್ತದೆ. ಈ ವಿಧಾನವನ್ನು ಬಳಸಿಕೊಂಡು, ಕೊತ್ತಂಬರಿಯನ್ನು ಎರಡು ವಾರಗಳವರೆಗೆ ತಾಜಾವಾಗಿರಬಹುದು.
ಜಿಪ್-ಲಾಕ್ ಬ್ಯಾಗ್ ವಿಧಾನದಲ್ಲಿ ಸಂಗ್ರಹಿಸಿಡಲು ಕೊತ್ತಂಬರಿ ಸೊಪ್ಪನ್ನು ಸರಿಯಾಗಿ ತೊಳೆಯಿರಿ ಮತ್ತು ಒಣಗಲು ಬಿಡಿ. ಕೊತ್ತಂಬರಿ ಸೊಪ್ಪನ್ನು ಸಣ್ಣ ಬ್ಯಾಚ್‌ಗಳಾಗಿ ವಿಂಗಡಿಸಿ. ಈಗ, ಪೇಪರ್ ಟವೆಲ್ ಅನ್ನು ತೆಗೆದುಕೊಂಡು, ಒಂದು ಬ್ಯಾಚ್ ಕೊತ್ತಂಬರಿ ಸೊಪ್ಪನ್ನು ಅದರಲ್ಲಿ ಇರಿಸಿ ಮತ್ತು ಅದನ್ನು ಒಮ್ಮೆ ಸುತ್ತಿ. ಇನ್ನೊಂದು ಬ್ಯಾಚ್ ತೆಗೆದುಕೊಳ್ಳಿ ಮತ್ತು ಇನ್ನೊಂದು ತುದಿಯಿಂದ ಒಮ್ಮೆ ಸುತ್ತಿ. ಇತರ ಬ್ಯಾಚ್‌ಗಳಿಗೆ ಇದನ್ನು ಪುನರಾವರ್ತಿಸಿ.
ನಂತರ, ರೋಲ್ ಮಾಡಿರುವ ಕೊತ್ತಂಬರಿ ಸೊಪ್ಪುಗಳನ್ನು ಜಿಪ್-ಲಾಕ್ ಬ್ಯಾಗ್‌ನಲ್ಲಿ ಇರಿಸಿ. ಒಮ್ಮೆ ನೀವು ಬ್ಯಾಚ್‌ಗಳನ್ನು ಬ್ಯಾಚ್‌ಗಳಿಗೆ ಸೇರಿಸಿದ ನಂತರ. ಚೀಲಗಳನ್ನು ಸರಿಯಾಗಿ ಲಾಕ್ ಮಾಡಿ ಮತ್ತು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ. ಈ ವಿಧಾನವು ಕೊತ್ತಂಬರಿ ಸೊಪ್ಪನ್ನು ಎರಡು ವಾರಗಳಿಗಿಂತ ಹೆಚ್ಚು ಕಾಲ ತಾಜಾವಾಗಿಡಲು ಸಹಾಯ ಮಾಡುತ್ತದೆ.
ಕೊತ್ತಂಬರಿ ಸೊಪ್ಪು ಬೇಗನೆ ಹಾಳಾಗುವುದನ್ನು ತಡೆಯಲು ಬಾಳೆಹಣ್ಣು ಮತ್ತು ಸೇಬಿನಂತಹ ಎಥಿಲೀನ್ ಉತ್ಪಾದಿಸುವ ಹಣ್ಣುಗಳಿಂದ ದೂರವಿಡಿ.
ಈ ವಿಧಾನಗಳು ನಿಮ್ಮ ಕೊತ್ತಂಬರಿ ಸೊಪ್ಪನ್ನು ಹೆಚ್ಚು ಸಮಯದವರೆಗೆ ತಾಜಾ ಮತ್ತು ಹಸಿರಾಗಿ ಇರಿಸಲು ಸಹಾಯ ಮಾಡುತ್ತದೆ.