Kitchen Hacks: ಮಳೆಗಾಲ ಬಂದರೆ ಅಡುಗೆ ಮನೆಯೇ ದೊಡ್ಡ ಸಮಸ್ಯೆ.! ಯಾಕಂದ್ರೆ, ಗಾಳಿಯಲ್ಲಿರುವ ತೇವಾಂಶದಿಂದ ಉಪ್ಪು ಗಡ್ಡೆ ಕಟ್ಟುತ್ತದೆ, ಸಕ್ಕರೆ ನೀರಾಗುತ್ತದೆ, ಮಸಾಲೆಗಳು ವಾಸನೆ ಕಳೆದುಕೊಳ್ಳುತ್ತವೆ. ಹಾಗಾಗಿ, ದಿನಾ ಅಡುಗೆ ಮಾಡುವವರಿಗೆ ಇದು ತುಂಬಾ ಕಿರಿಕಿರಿ. ಆದರೆ ಈ ಸಮಸ್ಯೆಗಳಿಗೆ ತಲೆ ಕೆಡಿಸಿಕೊಳ್ಳೋ ಬದಲು ಈ ಸಿಂಪಲ್ ಮನೆ ಮದ್ದುಗಳನ್ನು ಫಾಲೋ ಮಾಡಿದ್ರೆ ಸಾಕು, ನಿಮ್ಮ ಮನೆಯ ಉಪ್ಪು ಮತ್ತು ಸಕ್ಕರೆಯನ್ನು ಇಡೀ ಮಾನ್ಸೂನ್ ಉದ್ದಕ್ಕೂ ಫ್ರೆಶ್ ಆಗಿ ಇಡಬಹುದು. ಹಾಗದ್ರೆ, ಆ ಹ್ಯಾಕ್ಸ್ ಏನು ಗೊತ್ತಾ?
ಉಪ್ಪಿನ ಡಬ್ಬಕ್ಕೆ ಅಕ್ಕಿ ಹಾಕಿ:
ಇದು ಅಜ್ಜಿಯ ಕಾಲದಿಂದಲೂ ಬಳಸುವ ಟ್ರಿಕ್.! ಹೌದು, ಉಪ್ಪಿನ ಡಬ್ಬಿಯ ಕೆಳಭಾಗದಲ್ಲಿ ಒಂದು ಚಿಕ್ಕ ಬಟ್ಟೆಯಲ್ಲಿ ಅಥವಾ ನೇರವಾಗಿ 1 ಚಮಚ ಅಕ್ಕಿ ಹಾಕಿ. ಅಕ್ಕಿ ಗಾಳಿಯಲ್ಲಿರುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಉಪ್ಪು ಗಟ್ಟಿಯಾಗುವುದಿಲ್ಲ ಮತ್ತು ಬಳಕೆ ಮಾಡಲು ಸುಲಭವಾಗಿರುತ್ತದೆ. ಏತನ್ಮಧ್ಯೆ, ಪ್ರತಿ 15 ದಿನಕ್ಕೊಮ್ಮೆ ಅಕ್ಕಿಯನ್ನು ಬದಲಾಯಿಸಿದರೆ ಒಳ್ಳೆಯದು.
ಸಕ್ಕರೆ ಡಬ್ಬಿಗೆ ಬ್ರೆಡ್ ಸ್ಲೈಸ್ ಇಡಿ:
ಸಕ್ಕರೆ ಗಟ್ಟಿಯಾಗಿ ಕಲ್ಲಾಗುವುದು ಮಾನ್ಸೂನ್‌ನ ದೊಡ್ಡ ತಲೆನೋವು. ಹಾಗಾಗಿ, ಇದನ್ನು ಅವಾಯ್ಡ್ ಮಾಡಲು ಸಕ್ಕರೆ ಡಬ್ಬಿಯೊಳಗೆ 1 ಸಣ್ಣ ಬ್ರೆಡ್ ಸ್ಲೈಸ್ ಇಡಿ. ಯಾಕಂದ್ರೆ, ಬ್ರೆಡ್‌ನಲ್ಲಿರುವ ತೇವಾಂಶವನ್ನು ಸಕ್ಕರೆ ಹೀರಿಕೊಂಡು ಮತ್ತೆ ಸಾಫ್ಟ್ ಆಗುತ್ತದೆ. ಇನ್ನು, ಬ್ರೆಡ್ ಒಣಗಿದ ಕೂಡಲೇ ಹೊಸದನ್ನು ಬದಲಾಯಿಸಿ. ಈ ಟ್ರಿಕ್ ಕಂದು ಸಕ್ಕರೆಗೂ ಚೆನ್ನಾಗಿ ಕೆಲಸ ಮಾಡುತ್ತದೆ.
ಫ್ರಿಡ್ಜ್‌ನಲ್ಲಿ ಇಡಬೇಡಿ:
ಅನೇಕರು ಉಪ್ಪು - ಸಕ್ಕರೆಯನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಆದ್ರೆ, ಇದು ತಪ್ಪು.! ಯಾಕಂದ್ರೆ, ಫ್ರಿಡ್ಜ್‌ನಿಂದ ತೆಗೆದ ತಕ್ಷಣ ಹೊರಗಿನ ಬಿಸಿ ಗಾಳಿ ತಾಗಿದಾಗ ಡಬ್ಬದೊಳಗೆ ನೀರಿನ ಹನಿಗಳು ಉಂಟಾಗಿ ಇನ್ನೂ ಜಾಸ್ತಿ ಹಾಳಾಗುತ್ತದೆ. ಬದಲಾಗಿ ಡಬ್ಬಗಳನ್ನು ಅಡುಗೆ ಮನೆಯ ತಂಪಾದ, ನೇರ ಬಿಸಿಲು ಬೀಳದ ಕಡೆ ಇಡಿ.
ಗಾಜಿನ ಡಬ್ಬ ಬಳಸಿ:
ಪ್ಲಾಸ್ಟಿಕ್ ಡಬ್ಬಗಳಿಗಿಂತ ಗಾಳಿ ಆಡದ ಗಾಜಿನ ಜಾರ್‌ಗಳು ತೇವಾಂಶವನ್ನು ತಡೆಯುವಲ್ಲಿ ಬೆಸ್ಟ್. ಹಾಗಾಗಿ, ಉಪ್ಪು ಮತ್ತು ಸಕ್ಕರೆಯನ್ನು ಯಾವಾಗಲೂ ಮುಚ್ಚಳ ಬಿಗಿಯಾಗಿ ಇರುವ ಗಾಜಿನ ಡಬ್ಬದಲ್ಲಿ ಸಂಗ್ರಹಿಸಿ.
ಒಣ ಚಮಚದ ಬಳಕೆ:
ಡಬ್ಬದಿಂದ ಸಕ್ಕರೆ ಅಥವಾ ಉಪ್ಪನ್ನು ತೆಗೆಯುವಾಗ ಯಾವಾಗಲೂ ಸಂಪೂರ್ಣವಾಗಿ ಒಣಗಿದ ಚಮಚವನ್ನೇ ಬಳಸಬೇಕು. ಜೊತೆಗೆ ಸಿಂಕ್ ಅಥವಾ ಒಲೆಯ ಹತ್ತಿರ ಈ ಡಬ್ಬಗಳನ್ನು ತೆರೆದಿಡಬಾರದು.
ಲವಂಗದ ಎಲೆ:
ಸಕ್ಕರೆ ಡಬ್ಬದೊಳಗೆ ಒಂದೆರಡು ಲವಂಗದ ಎಲೆಯನ್ನು ಹಾಕುವುದರಿಂದ ಡಬ್ಬದಲ್ಲಿನ ತೇವಾಂಶ ಕಡಿಮೆಯಾಗುತ್ತದೆ ಮತ್ತು ಇರುವೆಗಳ ಕಾಟವೂ ಬರುವುದಿಲ್ಲ.!
ಏತನ್ಮಧ್ಯೆ, ಮಳೆಗಾಲದಲ್ಲಿ ವಾರಕ್ಕೊಮ್ಮೆ ಉಪ್ಪು ಮತ್ತು ಸಕ್ಕರೆ ಡಬ್ಬವನ್ನು ಬಿಸಿಲಿನಲ್ಲಿ 10 ನಿಮಿಷ ಇಡಿ. ಇದರಿಂದ ಒಳಗಿರುವ ಸೂಕ್ಷ್ಮ ತೇವಾಂಶ ಹೋಗುತ್ತದೆ ಮತ್ತು ಡಬ್ಬಕ್ಕೆ ಫಂಗಸ್ ಆಗುವುದಿಲ್ಲ.
ಒಟ್ಟಾರೆಯಾಗಿ ಮಳೆಗಾಲದಲ್ಲಿ ಅಡುಗೆ ಸಾಮಾನು ಹಾಳಾಗುವುದು ಸಾಮಾನ್ಯ. ಆದರೆ ಈ ಚಿಕ್ಕ ಚಿಕ್ಕ ಹ್ಯಾಕ್ಸ್‌ಗಳನ್ನು ಫಾಲೋ ಮಾಡಿದರೆ ಉಪ್ಪು ಸಕ್ಕರೆ ಮಾತ್ರವಲ್ಲ, ಎಲ್ಲಾ ಮಸಾಲೆ ಪದಾರ್ಥಗಳೂ ತಿಂಗಳುಗಟ್ಟಲೆ ಫ್ರೆಶ್ ಆಗಿರುತ್ತವೆ.