ಆರೋಗ್ಯವಾಗಿರಲು ಮುಂಜಾನೆಯ ಬಿಸಿಲಿಗೆ ಮೈಯೊಡ್ಡಬೇಕು ಎಂಬುದನ್ನು ನಾವು ಚಿಕ್ಕಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ದೇಹಕ್ಕೆ 'ವಿಟಮಿನ್ ಡಿ' (Vitamin D) ಸಿಗುತ್ತದೆ ಮತ್ತು ಅದು ಮೂಳೆಗಳನ್ನು ಬಲಪಡಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಸೂರ್ಯನ ಬೆಳಕು ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood Sugar) ನೇರವಾಗಿ ನಿಯಂತ್ರಿಸುತ್ತದೆ ಮತ್ತು ಮಧುಮೇಹದ (Diabetes) ಅಪಾಯವನ್ನು ತಗ್ಗಿಸುತ್ತದೆ ಎಂಬುದು ನಿಮಗೆ ಗೊತ್ತೇ?
ಈ ಅಚ್ಚರಿಯ ಸತ್ಯವನ್ನು ಇತ್ತೀಚಿನ ವೈದ್ಯಕೀಯ ಸಂಶೋಧನೆಗಳು ಬಹಿರಂಗಪಡಿಸಿವೆ. ನೈಸರ್ಗಿಕ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು. ಬೆಳಗಿನ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕಳೆಯುವುದು, ಹಗಲಿನಲ್ಲಿ ಸಾಕಷ್ಟು ನೈಸರ್ಗಿಕ ಬೆಳಕು ಸಿಗುವಂತೆ ನೋಡಿಕೊಳ್ಳುವುದು ಕೇವಲ ದೈಹಿಕ ಚಟುವಟಿಕೆಗೆ ಸೀಮಿತವಲ್ಲ. ಇದು ದೇಹದ ಆಂತರಿಕ ಜೈವಿಕ ಗಡಿಯಾರ, ನಿದ್ರೆಯ ಗುಣಮಟ್ಟ, ಹಸಿವಿನ ನಿಯಂತ್ರಣ ಹಾಗೂ ಇನ್ಸುಲಿನ್ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಬಹುದು.
ನಮ್ಮ ದೇಹವು ಹಗಲು ಮತ್ತು ರಾತ್ರಿಯ ಬದಲಾವಣೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಯಾವ ಸಮಯದಲ್ಲಿ ಎಚ್ಚರವಾಗಿರಬೇಕು, ಯಾವಾಗ ನಿದ್ರಿಸಬೇಕು, ಯಾವಾಗ ಹಸಿವಾಗಬೇಕು ಮತ್ತು ದೇಹವು ಆಹಾರದಿಂದ ದೊರೆಯುವ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ನಿಯಂತ್ರಿಸುವ ವ್ಯವಸ್ಥೆಯೇ ಜೈವಿಕ ಗಡಿಯಾರ.
ಈ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ನೈಸರ್ಗಿಕ ಬೆಳಕು ಪ್ರಮುಖ ಸಂಕೇತವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಸೂರ್ಯನ ಬೆಳಕು ಮತ್ತು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣದ ನಡುವೆ ನಿರೀಕ್ಷೆಗಿಂತಲೂ ಹೆಚ್ಚಿನ ಸಂಬಂಧವಿದೆ ಎಂದು ಸಂಶೋಧನೆಗಳು ಸೂಚಿಸಿವೆ. ಹಾಗಾದರೆ ಹಗಲಿನ ಬೆಳಕು ನಮ್ಮ ದೇಹದ ಸಕ್ಕರೆ ನಿರ್ವಹಣೆಗೆ ಹೇಗೆ ನೆರವಾಗುತ್ತದೆ? ರಾತ್ರಿಯ ಪ್ರಭಾವ ಏನು...? ತಿಳಿಯೋಣ ಬನ್ನಿ...
ಸೂರ್ಯನ ಬೆಳಕು ಮತ್ತು ರಕ್ತದಲ್ಲಿನ ಸಕ್ಕರೆಯ ನಡುವಿನ ಸಂಬಂಧವೇನು?
ಬ್ರಿಟನ್'ನಲ್ಲಿ 4.2 ಲಕ್ಷಕ್ಕೂ ಅಧಿಕ ಜನರನ್ನು ಒಳಗೊಂಡ ಅಧ್ಯಯನವೊಂದರಲ್ಲಿ, ಹೆಚ್ಚು ನೈಸರ್ಗಿಕ ಸೂರ್ಯನ ಬೆಳಕಿಗೆ ಒಡ್ಡಿಕೊಂಡವರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆ ಇರುವುದರೊಂದಿಗೆ ಸಂಬಂಧ ಕಂಡುಬಂದಿದೆ.
ಕೃತಕವಾಗಿ ಬೆಳಕು ಪಡೆಯುವ ಕೆಲವು ವಿಧಾನಗಳ ಕುರಿತ ಅಧ್ಯಯನಗಳಲ್ಲಿಯೂ ಟೈಪ್-2 ಮಧುಮೇಹದ ಅಪಾಯದೊಂದಿಗೆ ಸಂಬಂಧಿಸಿದ ಅಂಶಗಳನ್ನು ಗಮನಿಸಲಾಗಿದೆ. ಆದರೆ, ಇಂತಹ ಅಧ್ಯಯನಗಳು ಬೆಳಕೇ ಮಧುಮೇಹವನ್ನು ತಡೆಯುತ್ತದೆ ಅಥವಾ ಗುಣಪಡಿಸುತ್ತದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ. ಆಹಾರ, ದೈಹಿಕ ಚಟುವಟಿಕೆ, ವಯಸ್ಸು ಮತ್ತು ಜೀವನಶೈಲಿಯಂತಹ ಇತರ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ.
ನೈಸರ್ಗಿಕ ಬೆಳಕು ದೇಹದ ಜೈವಿಕ ಗಡಿಯಾರವನ್ನು ಸರಿಯಾದ ಸಮಯಕ್ಕೆ ಹೊಂದಿಸಲು ನೆರವಾಗುತ್ತದೆ. ಇನ್ಸುಲಿನ್ ಸೇರಿದಂತೆ ಹಲವು ಹಾರ್ಮೋನುಗಳ ಸ್ರವಿಕೆ ಮತ್ತು ದೇಹವು ಶಕ್ತಿಯನ್ನು ಬಳಸಿಕೊಳ್ಳುವ ವಿಧಾನಗಳು ಈ ಗಡಿಯಾರದೊಂದಿಗೆ ಸಂಬಂಧ ಹೊಂದಿವೆ. ಹಗಲಿನಲ್ಲಿ ಸಾಕಷ್ಟು ನೈಸರ್ಗಿಕ ಬೆಳಕು ಸಿಗುವುದರಿಂದ ದೇಹದ ಚಯಾಪಚಯ ಕ್ರಿಯೆಗಳು ಸರಿಯಾದ ಲಯದಲ್ಲಿ ನಡೆಯಲು ಸಹಕಾರಿಯಾಗಬಹುದು.
ಸಾಮಾನ್ಯ ಒಳಾಂಗಣ ಬೆಳಕಿಗೆ ಹೋಲಿಸಿದರೆ ನೈಸರ್ಗಿಕ ಹಗಲಿನ ಬೆಳಕು ದೇಹದ ಚಯಾಪಚಯ ನಿಯಂತ್ರಣ ಮತ್ತು ಗ್ಲೂಕೋಸ್ ನಿರ್ವಹಣೆಗೆ ಅನುಕೂಲಕರವಾಗಿರಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.
ನಿದ್ರೆಯ ಗುಣಮಟ್ಟ ಸುಧಾರಿಸಿದರೆ ಸಕ್ಕರೆಯ ಮಟ್ಟಕ್ಕೂ ಅನುಕೂಲ
ಸೂರ್ಯನ ಬೆಳಕು ರಕ್ತದಲ್ಲಿನ ಸಕ್ಕರೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಮಾರ್ಗಗಳಲ್ಲಿ ಒಂದು ನಿದ್ರೆ. ಬೆಳಿಗ್ಗೆ ಮತ್ತು ಹಗಲಿನಲ್ಲಿ ಸಾಕಷ್ಟು ನೈಸರ್ಗಿಕ ಬೆಳಕು ಪಡೆಯುವುದರಿಂದ ನಿದ್ರೆಯ ಸಮಯ ಮತ್ತು ಗುಣಮಟ್ಟ ಸುಧಾರಿಸಲು ನೆರವಾಗಬಹುದು. ಇದರಿಂದ ದೇಹದ ಜೈವಿಕ ಗಡಿಯಾರವೂ ಸರಿಯಾದ ಲಯದಲ್ಲಿ ಕಾರ್ಯನಿರ್ವಹಿಸುತ್ತದೆ.
ನಿದ್ರೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣದ ನಡುವೆ ನಿಕಟ ಸಂಬಂಧವಿದೆ. ರಾತ್ರಿ ಸರಿಯಾಗಿ ನಿದ್ರೆ ಮಾಡದಿರುವುದು, ನಿದ್ರೆಯ ಸಮಯದಲ್ಲಿ ಪದೇಪದೆ ಬದಲಾವಣೆ ಮಾಡುವುದು ಅಥವಾ ನಿದ್ರೆಯ ಅವಧಿ ಕಡಿಮೆಯಾಗುವುದು ಇನ್ಸುಲಿನ್ ಸಂವೇದನಾಶೀಲತೆಯನ್ನು ಕುಗ್ಗಿಸಬಹುದು. ಅಂದರೆ, ದೇಹವು ಇನ್ಸುಲಿನ್ಗೆ ಸರಿಯಾಗಿ ಪ್ರತಿಕ್ರಿಯಿಸದೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಕೆಲವು ಸಂದರ್ಭಗಳಲ್ಲಿ ಕೇವಲ ಒಂದು ಗಂಟೆ ನಿದ್ರೆ ಕಡಿಮೆಯಾದರೂ ಮರುದಿನ ದೇಹದ ಗ್ಲೂಕೋಸ್ ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ದೀರ್ಘಕಾಲದವರೆಗೆ ನಿದ್ರೆಯ ಸಮಯದಲ್ಲಿ ಏರುಪೇರು ಉಂಟಾದರೆ ಚಯಾಪಚಯ ಆರೋಗ್ಯವೂ ಹದಗೆಡುವ ಸಾಧ್ಯತೆಯಿದೆ. ಆದ್ದರಿಂದ ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಎಚ್ಚರಗೊಳ್ಳುವುದರ ಜೊತೆಗೆ ಹಗಲಿನಲ್ಲಿ ನೈಸರ್ಗಿಕ ಬೆಳಕು ಪಡೆಯುವ ಅಭ್ಯಾಸ ಬೆಳೆಸಿಕೊಳ್ಳುವುದು ಮುಖ್ಯ.
ಹಗಲಿನಲ್ಲಿ ಬೆಳಕು, ರಾತ್ರಿ ಕತ್ತಲೆ: ಈ ಸಮತೋಲನ ಅಗತ್ಯ
ದೇಹದ ಜೈವಿಕ ಗಡಿಯಾರ ಸರಿಯಾಗಿ ಕಾರ್ಯನಿರ್ವಹಿಸಲು ಹಗಲು ಮತ್ತು ರಾತ್ರಿಯ ಬೆಳಕಿನ ವ್ಯತ್ಯಾಸ ಸ್ಪಷ್ಟವಾಗಿರಬೇಕು. ಹಗಲಿನಲ್ಲಿ ಸಾಕಷ್ಟು ಬೆಳಕು ಸಿಗಬೇಕು; ರಾತ್ರಿ ಮಲಗುವ ಸಮಯದಲ್ಲಿ ಬೆಳಕಿನ ಪ್ರಮಾಣ ಕಡಿಮೆಯಾಗಬೇಕು. ಈ ಸಮತೋಲನವೇ ನಿದ್ರೆಗೆ ನೆರವಾಗುವ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಗೆ ಸಹಕಾರಿಯಾಗಿದೆ.
ರಾತ್ರಿ ಅತಿಯಾದ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆಲಟೋನಿನ್ ಉತ್ಪಾದನೆಗೆ ಅಡ್ಡಿಯಾಗಬಹುದು. ವಿಶೇಷವಾಗಿ ನೀಲಿ ಬೆಳಕು ಹೆಚ್ಚಿರುವ ಮೊಬೈಲ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ ಪರದೆಗಳನ್ನು ದೀರ್ಘಕಾಲ ನೋಡುವುದು ನಿದ್ರೆಯ ಸಮಯವನ್ನು ಮುಂದೂಡಬಹುದು. ಸಂಜೆ ನೀಲಿ ಬೆಳಕಿನ ಪ್ರಭಾವ ಹೆಚ್ಚಿರುವ ಬೆಳಕಿಗೆ ಒಡ್ಡಿಕೊಂಡಾಗ, ಮಂದ ಬೆಳಕಿನಲ್ಲಿರುವುದಕ್ಕೆ ಹೋಲಿಸಿದರೆ ದೇಹದ ಗ್ಲೂಕೋಸ್ ಪ್ರತಿಕ್ರಿಯೆ ಹೆಚ್ಚಾಗಬಹುದು ಎಂದು ಕೆಲವು ಸಂಶೋಧನೆಗಳು ತಿಳಿಸಿವೆ.
ಹೀಗಾಗಿ ರಾತ್ರಿ ಮಲಗುವ ಕೋಣೆಯಲ್ಲಿ ಸಾಧ್ಯವಾದಷ್ಟು ಕತ್ತಲೆ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಮಲಗುವ ಮುನ್ನ ಮೊಬೈಲ್ ಮತ್ತು ಟ್ಯಾಬ್ಲೆಟ್ ಬಳಕೆಯನ್ನು ಕಡಿಮೆ ಮಾಡಬೇಕು. ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಎಲೆಕ್ಟ್ರಾನಿಕ್ ಸಾಧನಗಳನ್ನು ಬದಿಗಿಡುವ ಅಭ್ಯಾಸ ಬೆಳೆಸಿಕೊಳ್ಳಬಹುದು. ಸಂಜೆ ಮನೆಯೊಳಗೆ ಹೆಚ್ಚು ಪ್ರಕಾಶಮಾನವಾದ ಬಿಳಿ ಬೆಳಕಿನ ಬದಲು ಮೃದುವಾದ ಬೆಚ್ಚಗಿನ ಬೆಳಕನ್ನು ಬಳಸುವುದೂ ಸಹಾಯಕವಾಗಬಹುದು.
ಹಸಿವು ಮತ್ತು ಆಹಾರದ ಬಯಕೆಯ ಮೇಲೂ ಬೆಳಕಿನ ಪ್ರಭಾವ
ನಮ್ಮ ಹಸಿವು ಕೇವಲ ಹೊಟ್ಟೆ ಖಾಲಿಯಾಗುವುದರಿಂದ ಮಾತ್ರ ನಿರ್ಧಾರವಾಗುವುದಿಲ್ಲ. ದೇಹದಲ್ಲಿನ ಹಾರ್ಮೋನುಗಳು, ನಿದ್ರೆಯ ಗುಣಮಟ್ಟ ಮತ್ತು ಜೈವಿಕ ಗಡಿಯಾರವೂ ಹಸಿವಿನ ಮೇಲೆ ಪ್ರಭಾವ ಬೀರುತ್ತವೆ. ಈ ಪೈಕಿ ಲೆಪ್ಟಿನ್ ಮತ್ತು ಗ್ರೆಲಿನ್ ಪ್ರಮುಖ ಹಾರ್ಮೋನುಗಳು.
ಲೆಪ್ಟಿನ್ ದೇಹಕ್ಕೆ ಹೊಟ್ಟೆ ತುಂಬಿದ ಸಂಕೇತ ನೀಡಲು ನೆರವಾದರೆ, ಗ್ರೆಲಿನ್ ಹಸಿವನ್ನು ಉತ್ತೇಜಿಸುತ್ತದೆ. ನಿದ್ರೆಯ ಕೊರತೆ ಮತ್ತು ಜೈವಿಕ ಗಡಿಯಾರದ ಏರುಪೇರು ಈ ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಅನಗತ್ಯವಾಗಿ ಹಸಿವಾಗುವುದು, ರಾತ್ರಿ ಹೊತ್ತು ಹೆಚ್ಚು ತಿನ್ನಬೇಕೆಂಬ ಬಯಕೆ ಉಂಟಾಗುವುದು ಮತ್ತು ಆಹಾರದ ಆಯ್ಕೆಯಲ್ಲಿ ಬದಲಾವಣೆಗಳಾಗಬಹುದು.
ಹಗಲಿನಲ್ಲಿ ನೈಸರ್ಗಿಕ ಬೆಳಕು ಪಡೆಯುವುದು ಹಾಗೂ ರಾತ್ರಿ ಸರಿಯಾದ ಸಮಯಕ್ಕೆ ನಿದ್ರಿಸುವುದು ಜೈವಿಕ ಗಡಿಯಾರವನ್ನು ನಿಯಂತ್ರಿಸಲು ನೆರವಾಗುತ್ತದೆ. ಇದರಿಂದ ಹಸಿವಿನ ಸಂಕೇತಗಳು ಹೆಚ್ಚು ಸ್ಥಿರವಾಗಿರಲು ಸಹಕಾರಿಯಾಗಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಆಯಾಸದಿಂದ ಉಂಟಾಗುವ ಅನಗತ್ಯ ಆಹಾರ ಸೇವನೆಯನ್ನೂ ಕಡಿಮೆ ಮಾಡಲು ನೆರವಾಗಬಹುದು.
ಪ್ರತಿದಿನದ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಸರಳ ಅಭ್ಯಾಸಗಳು...
ಸೂರ್ಯನ ಬೆಳಕಿನ ಪ್ರಯೋಜನ ಪಡೆಯಲು ಸಂಕೀರ್ಣವಾದ ದಿನಚರಿಯ ಅಗತ್ಯವಿಲ್ಲ. ದೈನಂದಿನ ಜೀವನದಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
ಬೆಳಿಗ್ಗೆ ನೈಸರ್ಗಿಕ ಬೆಳಕು ಪಡೆಯಿರಿ
ಸಾಧ್ಯವಾದರೆ ಬೆಳಿಗ್ಗೆ ಸ್ವಲ್ಪ ಸಮಯ ಹೊರಾಂಗಣದಲ್ಲಿ ಕಳೆಯಿರಿ. ನಡಿಗೆ ಅಥವಾ ಲಘು ವ್ಯಾಯಾಮದ ವೇಳೆ ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳಬಹುದು.
ಹಗಲಿನಲ್ಲಿ ಒಳಾಂಗಣದಲ್ಲೇ ಇರಬೇಡಿ
ಕೆಲಸದ ಮಧ್ಯೆ ವಿರಾಮ ತೆಗೆದುಕೊಂಡು ಹೊರಗೆ ಹೋಗಿ. ಮನೆಯ ಕಿಟಕಿಗಳ ಮೂಲಕ ನೈಸರ್ಗಿಕ ಬೆಳಕು ಒಳಬರುವಂತೆ ನೋಡಿಕೊಳ್ಳಿ.
ಸಂಜೆಯ ಬೆಳಕನ್ನು ಕಡಿಮೆ ಮಾಡಿ
ರಾತ್ರಿ ಅತಿಯಾದ ಪ್ರಕಾಶಮಾನ ಬೆಳಕನ್ನು ತಪ್ಪಿಸಿ. ಅಗತ್ಯವಿದ್ದಲ್ಲಿ ಮೃದುವಾದ ಬೆಳಕನ್ನು ಬಳಸಿ.
ಮಲಗುವ ಮುನ್ನ ಪರದೆ ಬಳಕೆ ತಪ್ಪಿಸಿ
ಮೊಬೈಲ್, ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್ಗಳ ಬಳಕೆಯನ್ನು ಮಲಗುವ ಮುನ್ನ ಕಡಿಮೆ ಮಾಡಿ.
ನಿದ್ರೆಯ ಸಮಯ ನಿಗದಿಪಡಿಸಿ
ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಎಚ್ಚರಗೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಆಹಾರ-ವ್ಯಾಯಾಮಕ್ಕೂ ಆದ್ಯತೆ ನೀಡಿ
ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಮತ್ತು ಅಗತ್ಯವಿರುವಷ್ಟು ನಿದ್ರೆ ರಕ್ತದಲ್ಲಿನ ಸಕ್ಕರೆಯ ನಿಯಂತ್ರಣಕ್ಕೆ ಮುಖ್ಯ.
ಸೂರ್ಯನ ಬೆಳಕು ಮಧುಮೇಹಕ್ಕೆ ಚಿಕಿತ್ಸೆಯಲ್ಲ
ನೈಸರ್ಗಿಕ ಬೆಳಕು ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಬಹುದು. ಆದರೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದಲೇ ಮಧುಮೇಹ ಗುಣವಾಗುತ್ತದೆ ಅಥವಾ ಔಷಧಗಳ ಅಗತ್ಯವಿರುವುದಿಲ್ಲ ಎಂದು ಭಾವಿಸಬಾರದು. ವೈದ್ಯರು ಸೂಚಿಸಿದ ಔಷಧಗಳನ್ನು ನಿಲ್ಲಿಸುವುದು ಅಥವಾ ಇನ್ಸುಲಿನ್ ಪ್ರಮಾಣವನ್ನು ಸ್ವಯಂ ಬದಲಾಯಿಸುವುದು ಅಪಾಯಕಾರಿ.
ಅತಿಯಾದ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಚರ್ಮಕ್ಕೆ ಹಾನಿ, ಬಿಸಿಲಿನ ಸುಡುವಿಕೆ ಮತ್ತು ನಿರ್ಜಲೀಕರಣದ ಅಪಾಯವಿದೆ. ಆದ್ದರಿಂದ ಸ್ಥಳೀಯ ಹವಾಮಾನ, ಚರ್ಮದ ಸ್ವಭಾವ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸುರಕ್ಷಿತವಾಗಿ ಬೆಳಕು ಪಡೆಯಬೇಕು. ಕೃತಕ ಟ್ಯಾನಿಂಗ್ ಹಾಸಿಗೆಗಳನ್ನು ಬಳಸುವುದು ಮಧುಮೇಹ ತಡೆಗಟ್ಟುವ ವಿಧಾನವಲ್ಲ; ಅವು ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.
ಆಧುನಿಕ ಜೀವನಶೈಲಿಯಲ್ಲಿ ನಾವು ಹೆಚ್ಚಿನ ಸಮಯವನ್ನು ಕಚೇರಿ ಮತ್ತು ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಕಳೆಯುತ್ತಿದ್ದೇವೆ. ಪ್ರತಿದಿನ ಸ್ವಲ್ಪ ಸಮಯ ಪ್ರಕೃತಿಯ ಮಡಿಲಲ್ಲಿ, ಸೂರ್ಯನ ಬೆಳಕಿನಲ್ಲಿ ಕಳೆಯುವ ಸಣ್ಣ ಅಭ್ಯಾಸವು ನಮ್ಮ ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು, ದೀರ್ಘಕಾಲ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ಒಟ್ಟಿನಲ್ಲಿ, ಬೆಳಿಗ್ಗೆ ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದು, ಹಗಲಿನಲ್ಲಿ ಚಟುವಟಿಕೆಯಿಂದ ಇರುವುದು, ರಾತ್ರಿ ಬೆಳಕನ್ನು ಕಡಿಮೆ ಮಾಡುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು ದೇಹದ ಜೈವಿಕ ಗಡಿಯಾರವನ್ನು ಸಮತೋಲನದಲ್ಲಿಡಲು ನೆರವಾಗಬಹುದು.
ಮಧುಮೇಹ ನಿಯಂತ್ರಣಕ್ಕೆ ಆಹಾರ, ವ್ಯಾಯಾಮ, ಔಷಧ ಮತ್ತು ವೈದ್ಯಕೀಯ ಸಲಹೆಯೇ ಪ್ರಮುಖವಾಗಿದ್ದು, ಬೆಳಕಿನ ಸರಿಯಾದ ಬಳಕೆಯನ್ನು ಆರೋಗ್ಯಕರ ಜೀವನಶೈಲಿಯ ಹೆಚ್ಚುವರಿ ಭಾಗವಾಗಿ ಅಳವಡಿಸಿಕೊಳ್ಳಬಹುದು.