ಇಸಿಸ್ ಇತ್ತೀಚಿನ ದಿನಗಳಲ್ಲಿ ಈ ಹೆಸರನ್ನು ಕೇಳದವರಿಲ್ಲ. ಇರಾಕ್ ಮತ್ತು ಸಿರಿಯಾ ದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಉಗ್ರ ಸಂಘಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಗಳಿಸುತ್ತಿದೆ. ಇಸಿಸ್ ಮೂಲತಃ ಜಮಾತ್ ಅಲ್ ತಾವ್ಹಿದ್ ಜಿಹಾದ್ ಎಂಬ ಸಂಘಟನೆ ಹೆಸರಲ್ಲಿ 1999ರಲ್ಲಿ ಸ್ಥಾಪನೆಯಾಯಿತು. ಬಳಿಕ 2004ರಲ್ಲಿ ಅಲ್ ಖೈದಾದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ತನ್ನ ಹೆಸರನ್ನು ಖೈದತ್ ಅಲ್ ಜಿಹಾದ್ ಫಿ ಬಿಲಾದ್ ಅಲ್ ರಫ್ದಿಯಾನ್‌ಗೆ ಬದಲಾಯಿಸಿಕೊಂಡಿತು. ಬಳಿಕ ಮುಜಾಹಿದ್ದೀನ್ ಶುರಾ ಕೌನ್ಸಿಲ್ ಎಂದೂ, ಬಳಿಕ ಇಸ್ಲಾಮಿಕ್ ಸ್ಟೇಟ್ಸ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿತು ಎಂದು ತಜ್ಞರು ತಿಳಿಸಿದ್ದಾರೆ.
ಇರಾಕ್ ಮತ್ತು ಸಿರಿಯಾ ದೇಶಗಳಲ್ಲಿ ತನ್ನದೇ ಸರ್ಕಾರ ರಚನೆಗೆ ಪಟ್ಟು ಹಿಡಿದಿರುವ ಇಸಿಸ್ ಮನಸೋ ಇಚ್ಛೆ ನಾಗರೀಕರ ಮೇಲೆ ದಾಳಿ ಮಾಡುತ್ತಿದೆ. ಇರಾಕ್‌ನ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿರುವ ಇಸಿಸ್, ರಾಜಧಾನಿ ಬಾಗ್ದಾದ್ ಅನ್ನು ತನ್ನ ವಶಪಡಿಸಿಕೊಳ್ಳಲು ಹವಣಿಸುತ್ತಿದೆ. ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಹೊಂದಿದ್ದ ಮೈತ್ರಿಯನ್ನು ಕಡಿದುಕೊಂಡ ಇಸಿಸ್ ಮೊದಲ ಬಾರಿಗೆ 2013 ಏಪ್ರಿಲ್ ತಿಂಗಳಲ್ಲಿ ವಿಶ್ವ ಸಮುದಾಯದ ಗಮನ ಸೆಳೆದಿತ್ತು. ಸಿರಿಯಾದಲ್ಲಿ ಉಂಟಾಗಿದ್ದ ರಾಜಕೀಯ ಅಸ್ತಿರತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಇಸಿಸ್ ಅಲ್ಲಿಗೂ ತನ್ನ ಕೈ ಚಾಚಿತು. ಸರ್ಕಾರದ ವಿಚಾರಗಳಲ್ಲಿ ಮೂಗು ತೂರಿಸುತ್ತಾ ಸಿರಿಯಾದಲ್ಲಿ ಅಶಾಂತಿ ನೆಲೆಸುವಂತೆ ಮಾಡಿತ್ತು.
ಸಿರಿಯಾ ಸರ್ಕಾರದ ವಿರುದ್ಧ ನಾಗರೀಕರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮಧ್ಯ ಪ್ರವೇಶಿಸಿದ ಇಸಿಸ್, ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಸಿರಿಯಾ ಸೈನಿಕರನ್ನು ಗುರಿಯಾಗಿಸಿಕೊಂಡು ಇಸಿಸ್ ನಡೆಸಿದ ಸಾಕಷ್ಟು ಅಮಾನುಷ ದಾಳಿಗಳು ಸಿರಿಯಾ ಸರ್ಕಾರ ಕಂಗೆಡುವಂತೆ ಮಾಡಿತ್ತು. ಇಸಿಸ್ ಮತ್ತು ಸಿರಿಯಾ ಸರ್ಕಾರದ ನಡುವಿನ ದಾಳಿ ಎಷ್ಟರ ಮಟ್ಟಿಗೆ ಇತ್ತು ಎಂದರೆ ಸಿರಿಯಾ ಸರ್ಕಾರ ವಿಷಾನಿಲ ಬಳಕೆ ಮಾಡುವ ಮೂಲಕ ಇಸಿಸ್ ಉಗ್ರರ ಸದ್ದಡಗಿಸಲು ಮುಂದಾಗಿತ್ತು. ಆದರೆ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳು ಸಿರಿಯಾ ನಿರ್ಧಾರವನ್ನು ವಿರೋಧಿಸಿದ್ದವು. ಒಂದು ಹಂತದಲ್ಲಿಯಂತೂ ಅಮೆರಿಕ ಸಿರಿಯಾ ವಿಷಾನಿಲ ಶಸ್ತ್ರಾಸ್ತ್ರಗಳ ಬಳಕೆ ನಿಲ್ಲಿಸದಿದ್ದರೆ ತಾನು ವಾಯು ದಾಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಅಂತಿಮವಾಗಿ ವಿಶ್ವ ಸಮುದಾಯ ಮಧ್ಯಪ್ರವೇಶದೊಂದಿಗೆ ಸಿರಿಯಾ ಮತ್ತು ಇರಾನ್ ಸರ್ಕಾರಗಳು ಉಗ್ರರ ವಿರುದ್ಧದ ವಿಷಾನಿಲ ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಲ್ಲಿಸಿತ್ತು. ಅಷ್ಟುಹೊತ್ತಿಗಾಗಲೇ ಉಭಯ ದೇಶಗಳಲ್ಲಿ ಸಾವಿರಾರು ನಾಗರೀಕರು, ಪ್ರತ್ಯೇಕತಾವಾದಿಗಳು ಸಾವನ್ನಪ್ಪಿದ್ದರು.
ಇರಾಕ್ ಮತ್ತು ಸಿರಿಯಾದಲ್ಲಿ ಇಸಿಸ್‌ಗೆ ಬೆಂಬಲ ನೀಡಿದ್ದ ಅಲ್ ಖೈದಾ 2014 ಫೆಬ್ರವರಿಯಲ್ಲಿ ತನ್ನ ಬೆಂಬಲವನ್ನು ವಾಪಸ್ ಪಡೆದಿತ್ತು. ಇದು ಇಸಿಸ್‌ಗೆ ಭಾರಿ ಹಿನ್ನಡೆ ಎಂದೇ ಭಾವಿಸಲಾಗಿತ್ತು. ಆದರೆ ಆ ಬಳಿಕ ನಿರೀಕ್ಷೆಗೂ ಮೀರಿ ಬೆಳೆದ ಇಸಿಸ್ ಉಗ್ರ ಸಂಘಟನೆ ವಿಶ್ವ ಸಮುದಾಯಕ್ಕೇ ಸವಾಲೆಸೆಯುವಷ್ಟರ ಮಟ್ಟಿಗೆ ಬೆಳೆಯಿತು. ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಇಸಿಸ್ ವಿಶ್ವಾದ್ಯಂತ ತನ್ನ ಕದಂಬ ಬಾಹುಗಳನ್ನು ಚಾಚಿ ಲಕ್ಷಾಂತರ ಯುವಕರನ್ನು ತನ್ನೊಂದಿಗೆ ಸೇರಿಸಿಕೊಂಡಿತು. ಒಂದು ಹಂತದಲ್ಲಿಯಲ್ಲಿಂತೂ ಇರಾಕ್‌ನ ಪ್ರಮುಖ ತೈಲಾಗಾರಗಳನ್ನು ಇಸಿಸ್ ಉಗ್ರರು ವಶಪಡಿಸಿಕೊಂಡಿದ್ದರು. ಇರಾಕ್‌ನಲ್ಲಿ ಪರಿಸ್ಥಿತಿ ಕೈಮೀರುವ ಕುರಿತು ಮನಗಂಡ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿತಾದರೂ ಇಸಿಸ್ ತನ್ನ ದುರ್ವರ್ತನೆಯನ್ನು ನಿಲ್ಲಿಸಿಲ್ಲ. ಇಂದಿಗೂ ನೂರಾರು ಯುವಕರು ಇಸಿಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
ಇದೇ ಸಂದರ್ಭದಲ್ಲಿಯೇ ಮುಂಬೈ ಮೂಲದ ಇಬ್ಬರು ಯುವಕರು ಇಸಿಸ್ ಸಂಘಟನೆ ಸೇರಿದ್ದರು. ಈ ಪೈಕಿ ಓರ್ವ ಭಾರತಕ್ಕೆ ವಾಪಸಾಗಿದ್ದು, ಮತ್ತೋರ್ವ ಇರಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದಾನೆ. ಇನ್ನು ಇಸಿಸ್‌ನ ಹೆಸರಲ್ಲಿ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಮೆಹ್ದಿ ಮಸ್ರೂರ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.