ವಿಶ್ವರೂಪಂ ನಿಷೇಧ ತೆರವು
ವಿಶ್ವರೂಪಂ ಚಿತ್ರದ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿದೆ.
ಚೆನ್ನೈ/ನವದೆಹಲಿ: ವಿಶ್ವರೂಪಂ ವಿವಾದ ಸೌಹಾರ್ದವಾಗಿ ಬಗೆಹರಿದ ಹಿನ್ನೆಲೆಯಲ್ಲಿ ಚಿತ್ರದ ಮೇಲೆ ಹೇರಲಾಗಿದ್ದ ನಿಷೇಧವನ್ನು ಭಾನುವಾರ ಸರ್ಕಾರ ತೆರವುಗೊಳಿಸಿದೆ. ನಟ ಕಮಲ್ಹಾಸನ್ ಹಾಗೂ ಮುಸ್ಲಿಂಗುಂಪುಗಳ ನಡುವೆ ವಿವಾದದ ಕುರಿತು ಒಪ್ಪಂದ ಏರ್ಪಟ್ಟ ಮರುದಿನವೇ ಜಿಲ್ಲಾಧಿಕಾರಿಗಳು ಚಿತ್ರದ ಮೇಲೆ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದ್ದಾರೆ.
ಆದರೆ, ಕಮಲ್ಹಾಸನ್ ಅಭಿಮಾನಿಗಳು ವಿಶ್ವರೂಪಂ ದರ್ಶನಕ್ಕೆ ಇನ್ನಷ್ಟು ದಿನ ಕಾಯಬೇಕಿದೆ. ಯಾಕೆಂದರೆ ಮುಸ್ಲಿಂ ಸಂಘಟನೆಗಳ ಜತೆಗೆ ನಡೆದ ಒಪ್ಪಂದದಂತೆ ಚಿತ್ರದ ಏಳು ಆಕ್ಷೇಪಾರ್ಹ ದೃಶ್ಯ ಹಾಗೂ ಕೆಲವು ದೃಶ್ಯಗಳ ಸಂಭಾಷಣೆಗೆ ಕತ್ತರಿ ಹಾಕಬೇಕಿದೆ. ಅಲ್ಲದೆ, ಈ ಕುರಿತು ಸೆನ್ಸಾರ್ ಮಂಡಳಿಗೂ ಮಾಹಿತಿ ನೀಡಬೇಕಿದೆ.ಇದರ ಜತೆಗೆ, ಮದ್ರಾಸ್ ಹೈಕೋರ್ಟ್ನಲ್ಲಿ ಚಿತ್ರದ ಮೇಲೆ ನಿಷೇಧ ಹೇರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಔಪಚಾರಿಕವಾಗಿ ಹಿಂತೆಗೆದುಕೊಳ್ಳಬೇಕಿದೆ. ಈ ಪ್ರಕ್ರಿಯೆಗಳಿಂದಾಗಿ ಬಿಡುಗಡೆ ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಲಿದೆ.
ಹಿಂದಿಯಲ್ಲಿ ಗಳಿಕೆ ಉತ್ತಮ: ತಮಿಳುನಾಡಿನಲ್ಲಿ ವಿಶ್ವರೂಪಂ ಬಿಡುಗಡೆಗೆ ಅಡೆತಡೆ ಎದುರಾಗಿರಬಹುದು. ಆದರೆ, ವಿಶ್ವರೂಪಂ ಹಿಂದಿ ಆವೃತ್ತಿಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶುಕ್ರವಾರ ಮತ್ತು ಶನಿವಾರ ಎರಡೇ ದಿನಗಳಲ್ಲಿ ಚಿತ್ರ 4.46 ಕೋಟಿ ಗಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.