ಮುಂಬೈ ಕನ್ನಡಿಗರ ಹೃದಯದಲ್ಲಿ ಮಹಾಮೇಳ ದೀಪ
ಕನ್ನಡಪ್ರಭ ವಾರ್ತೆ, ಮುಂಬೈ, ಫೆ. 10
ಒಂದೇ ಸೂರಿನಡಿ ತಮ್ಮ ಸುಖ-ದುಃಖ-ಭಾವನೆಗಳನ್ನು ಹಂಚಿಕೊಳ್ಳಬೇಕು. ಒಂದಿಷ್ಟು ಕನ್ನಡತನ ಹೆಚ್ಚಿಸಬೇಕು ಎಂಬ ಆಶಯದಿಂದ ಮುಂಬೈನಲ್ಲಿ ನಡೆದ ಎರಡು ದಿನಗಳ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 3ನೇ ಮಹಾಮೇಳಕ್ಕೆ ಭಾನುವಾರ ಯಶಸ್ವಿ ತೆರೆ ಬಿದ್ದಿದೆ.
ಈಗಾಗಲೇ ಕಳೆದ ಎರಡು ಮಹಾಮೇಳಕ್ಕಿಂತ ಮುಂಬೈನ ಹೊರವಲಯ ಡೊಂಬಿವಲಿಯಲ್ಲಿ ಪ್ರಸ್ತುತ ನಡೆದ ಮೇಳ ತೀರಾ ಭಿನ್ನ ಹಾಗೂ ವಿಶೇಷತೆಯಿಂದ ಕೂಡಿತ್ತು. ಮುಂಬೈನ ಅಂಬರನಾಥ ಕರ್ನಾಟಕ ವೈಭವ ಸಂಸ್ಥೆ, ಡೊಂಬಿವಲಿ, ಕಲ್ಯಾಣದ ಕರ್ನಾಟಕ ಸಂಘ, ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ ಪೂರ್ವ ಸೇರಿದಂತೆ ದೆಹಲಿ, ಹೈದರಾಬಾದ್, ಸೂರತ್, ಗೋವಾ, ಅಕ್ಕಲಕೋಟ, ಜತ್ತ, ಕೇರಳ, ಕಾಸರಗೋಡು, ಸೊಲ್ಲಾಪುರ, ಪುಣೆ, ಚಂಡಿಘರ ಒಟ್ಟೂ ಹನ್ನೆರಡಕ್ಕೂ ಹೆಚ್ಚು ಹೊರನಾಡು ಕನ್ನಡ ಸಂಘಗಳು ಈ ಮೇಳಕ್ಕೆ ಭರಪೂರ ಕಳೆ ತಂದವು.
ಮೇಳಕ್ಕೆ ಮೆರಗು: ಹೊರನಾಡಿನಲ್ಲಿರುವ ಮಕ್ಕಳಲ್ಲಿ ಕನ್ನಡ ಬಗ್ಗೆ ಅಭಿಮಾನ ಮತ್ತು ಇನ್ನಷ್ಟು ಭಾಷೆಯ ಮೇಲಿನ ಹಿಡಿತ ಹೆಚ್ಚಿಸುವ ಸಲುವಾಗಿ ಚಿಂತನಾ ಗೋಷ್ಠಿ ಜೊತೆಗೆ ಮಕ್ಕಳೊಂದಿಗೆ ಮಾತುಕತೆ, ಸಂಗೀತ, ಜಾನಪದ, ನಾಟಕ, ಕಿರುಚಿತ್ರ, ನೃತ್ಯ ಹಾಗೂ ಮುಂಬೈ ಕನ್ನಡಿಗರ ಮಕ್ಕಳಿಂದ ಕಲಾ ಪ್ರತಿಭೋತ್ಸವ ಜರುಗಿತು. ಮೇಳದ ಮೊದಲ ದಿನ ಸೂರತನ ಕರುನಾಡು ಟ್ರಸ್ಟ್ ಪ್ರಸ್ತುತಪಡಿಸಿದ ಗುಜರಾತಿ ಸಾಂಸ್ಕೃತಿಕ ನೃತ್ಯ, ರಾಮದುರ್ಗದ ಸಿದ್ದು ಮೋಟೆ ತಂಡದವರಿಂದ ಡೊಳ್ಳಿನ ಪದಗಳು, ಧಾರವಾಡದ ಪ್ರಕಾಶ ಮಲ್ಲಿಗವಾಡ ತಂಡದಿಂದ ನಡೆದ ಜಾನಪದ ನೃತ್ಯ, ಪುಣೆಯ ಕರ್ನಾಟಕ ಸಂಘದ ನೃತ್ಯ ಹಾಗೂ ಮುಂಬೈನ ಎಸ್. ನಿಜಲಿಂಗಪ್ಪ ಕನ್ನಡ ಶಾಲೆಯ ವಿದ್ಯಾರ್ಥಿಗಳ ಕಾರ್ಯಕ್ರಮಗಳು ಸೇರಿದಂತೆ 2ನೇ ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳಕ್ಕೆ ಮೆರಗು ತಂದವು.
ಹೆಮ್ಮೆಯ ಕಾರ್ಯ: ದೇಶದ ವಿವಿಧ ಮೂಲೆಗಳಿಂದ ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸಿ ಹಾಗೂ ಹೊರನಾಡ ಕನ್ನಡ ಬಂಧುಗಳನ್ನು ಒಟ್ಟುಗೂಡಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿರುವ ವಿದ್ಯಾವರ್ಧಕ ಸಂಘದ ಕಾರ್ಯ ಹೆಮ್ಮೆಯ ವಿಷಯ.
ಇದರಿಂದ ಹೊರನಾಡಿನಲ್ಲಿ, ಗಡಿನಾಡಿನಲ್ಲಿ ಕನ್ನಡ ಭಾಷೆ ಉಳಿಯುವುದಲ್ಲದೇ ಭಾಷಾ ಪ್ರೇಮ, ಬಾಂಧವ್ಯ ಹೆಚ್ಚುತ್ತದೆ ಎನ್ನುತ್ತಾರೆ ಜತ್ತದ ಕನ್ನಡಿಗ ಪಿ.ಬಿ. ಮೇತ್ರಿ. ಮೇಳದಲ್ಲಿ ಎರಡು ದಿನ ಭಾಗವಹಿಸಿದ ಸಾವಿರಾರು ಒಳನಾಡು ಹಾಗೂ ಹೊರನಾಡು ಕನ್ನಡಿಗರಿಗೆ ತೊಂದರೆ ಆಗದಂತೆ ಸಂಘಟಕರು ಊಟ, ವಸತಿ, ಸಾರಿಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ್ದರು. ಈ ಮೇಳಕ್ಕೆ ಅಂದಾಜು ರು. 30 ಲಕ್ಷ ಖರ್ಚಾಗಿದ್ದು ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಭಾವನೆಯನ್ನು ಮುಂಬೈನಲ್ಲಿರುವ ಕನ್ನಡಿಗರಿಗೆ ಮೂಡಿಸಿದ್ದು ಮಾತ್ರ ನಿಜ. ಉದ್ಘಾಟನೆಯ ದಿನ ಶನಿವಾರ ಶಿವಸೇನೆ ಕಾರ್ಯಕರ್ತರ ಸಣ್ಣ ಗಲಾಟೆ ಹೊರತುಪಡಿಸಿ ಮೇಳವು ಸಂಪೂರ್ಣ ಯಶಸ್ಸು ಕಂಡಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.