2ಜಿ ತನಿಖೆಗೆ ಜೆಪಿಸಿ ಅಸಮಾಧಾನ
ನವದೆಹಲಿ: 2ಜಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ವಿದೇಶದಲ್ಲಿ ನಡೆಸುತ್ತಿರುವ ನಿಧಾನಗತಿ ತನಿಖೆಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದಲ್ಲಿ ಕ್ರಿಮಿನಲ್ ಅಪರಾಧ ಸಾಬೀತುಪಡಿಸಲು ವಿವಿಧ ರಾಷ್ಟ್ರಗಳಿಗೆ ನ್ಯಾಯಾಲಯದ ಮೂಲಕ ಪತ್ರ ಕಳುಹಿಸಲಾಗಿದೆ. ಭಾರತದಲ್ಲಿ ರೇಡಿಯೋ ತರಂಗಾಂತರ ಪಡೆದ ಕಂಪನಿಗಳ ಹಣದ ಮೂಲದ ಕುರಿತು ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ಸಿಬಿಐ ಕಳೆದ ವಾರ ತಿಳಿಸಿತ್ತು. ಈ ಸಂಬಂಧ ಸಭೆ ನಡೆಸಿದ ಜೆಪಿಸಿ ನಿಧಾನಗತಿ ತನಿಖೆ ಕುರಿತು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಿಬಿಐ, ಭಾರತದಲ್ಲಿ ತನಿಖೆ ಪೂರ್ಣಗೊಂಡಿದೆ. ಆದರೆ, ವಿದೇಶದಲ್ಲಿನ ತನಿಖೆ ಬಾಕಿ ಉಳಿದಿದೆ. ಈ ಪತ್ರಕ್ಕೆ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದೆ.