ಅಫ್ಜಲ್ ಗಲ್ಲು: ವೈರಿಗಳೂ ಹೀಗೆ ಮಾಡಲಿಕ್ಕಿಲ್ಲ
'ನಮ್ಮ ಬದ್ಧ ವೈರಿಗಳೂ ಕೂಡ ಈ ರೀತಿ...
ನವದೆಹಲಿ: 'ನಮ್ಮ ಬದ್ಧ ವೈರಿಗಳೂ ಕೂಡ ಈ ರೀತಿ ವರ್ತಿಸಲಿಕ್ಕಿಲ್ಲ'.
ಕುಟುಂಬದವರಿಗೂ ಸರಿಯಾದ ಮಾಹಿತಿ ನೀಡದೆ ಸಂಸತ್ ದಾಳಿಕೋರ ಅಫ್ಜಲ್ ಗುರುವನ್ನು ಸರ್ಕಾರ ಗಲ್ಲಿಗೇರಿಸಿದ ರೀತಿಯ ಬಗ್ಗೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಫಾಲಿ ನಾರಿಮನ್ ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ.
ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ನಾರಿಮನ್, ಅಫ್ಜಲ್‌ನ ಗಲ್ಲಿಗೇರಿಸಿದ ಬಗೆಯು ಭಾರತವನ್ನು ನಾಚಿಕೆಗೀಡುಮಾಡಿದೆ. ಇದು ನಮ್ಮ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದಿದ್ದಾರೆ. ರಾಷ್ಟ್ರಪತಿಯವರು ಕ್ಷಮಾದಾನ ಅರ್ಜಿ ತಿರಸ್ಕರಿಸಿದರೆಂದು ಅಪರಾಧಿಯನ್ನು ಗಲ್ಲಿಗೇರಿಸಿದ್ದರಲ್ಲಿ ತಪ್ಪಿಲ್ಲ. ಆದರೆ, ಮಾನವೀಯ ದೃಷ್ಟಿಕೋನದಿಂದ ನೋಡದ್ದು ತಪ್ಪು. ಆತನ ಮನೆಯವರಿಗೆ ಸ್ಪೀಡ್ ಪೋಸ್ಟ್ ತಲುಪಿದ್ದು ಗಲ್ಲಿಗೇರಿಸಿದ 2 ದಿನಗಳ ಬಳಿಕ. ಜೈಲಧಿಕಾರಿಗಳು ಪತ್ರ ಬರೆಯುವ ಬದಲು ದೂರವಾಣಿ ಮೂಲಕ ಮಾಹಿತಿ ನೀಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ ನಾರಿಮನ್.
ತಿದ್ದುಪಡಿ: ಇದೇ ವೇಳೆ, ಭಾರತದಂತಹ ದೇಶದಲ್ಲಿ ಗಲ್ಲುಶಿಕ್ಷೆಗೆ ನಿಷೇಧ ಹೇರಬೇಕು. ಜತೆಗೇ ಜೀವಾವಧಿ ಶಿಕ್ಷೆಗೆ ತಿದ್ದುಪಡಿ ತರಬೇಕು. ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಜೀವಾವಧಿಯೆಂದರೆ ಸಾಯುವವರೆಗೂ ಜೈಲು ಎಂದಾಗಬೇಕು ಎಂದಿದ್ದಾರೆ.
ಗಲ್ಲು ಶಿಕ್ಷೆ ರದ್ದುಗೊಳಿಸಬೇಕು ಎಂಬ ಕೂಗಿಗೆ ಸಿಪಿಐ ಕೂಡ ಧ್ವನಿಗೂಡಿಸಿದೆ. ಗಲ್ಲಿಗೆ ಗುರಿಯಾಗಿರುವ ವೀರಪ್ಪನ್ ಸಹಚರರು 20 ವರ್ಷ ಶಿಕ್ಷೆ ಅನುಭವಿಸಿದ್ದಾರೆ. ಹಾಗಾಗಿ ಅವರನ್ನು ಬಿಡುಗಡೆ ಮಾಡಬೇಕು ಎಂದೂ ಕೋರಿದೆ.
ಜನಜೀವನ ಅಸ್ತವ್ಯಸ್ತ
ಅಫ್ಜಲ್ ಗಲ್ಲು ಖಂಡಿಸಿ ಹಾಗೂ ಆತನ ದೇಹವನ್ನು ಕುಟುಂಬಕ್ಕೆ ಮರಳಿಸಬೇಕು ಎಂದು ಆಗ್ರಹಿಸಿ ಹುರಿಯತ್ ಕಾನ್ಫರೆನ್ಸ್ ಕರೆ ನೀಡಿರುವ ಬಂದ್ 9ನೇ ದಿನ ಪೂರೈಸಿದ್ದು, ಕಾಶ್ಮೀರದಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ.
ನುಸುಳುವಿಕೆಗೆ ತಡೆ
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ದಾಟಿ ಭಾರತದೊಳಕ್ಕೆ ಪ್ರವೇಶಿಸುವ ಐವರು ಉಗ್ರರ ಪ್ರಯತ್ನಕ್ಕೆ ಸೇನೆ ತಣ್ಣೀರೆರಚಿದೆ. ಭಾನುವಾರ ಬೆಳಗಿನ ಜಾವ 4-5 ಮಂದಿ ಉಗ್ರರು ಒಳನುಸುಳಲು ಯತ್ನಿಸಿದರು. ಈ ವೇಳೆ, ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ