ಜೀವ ಉಳಿಸಲು 'ಲೆವೆಲ್' ಇಳಿಕೆ ಮದ್ದು
ರೇಲ್ವೆ ಸುರಕ್ಷತೆ ದೃಷ್ಟಿಯಿಂದ 12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ 10,797 ಲೆವೆಲ್ ಕ್ರಾಸಿಂಗ್ಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಯಾವುದೇ ಲೆವೆಲ್ ಕ್ರಾಸಿಂಗ್ಗಳನ್ನು ಅಳವಡಿಸದಿರಲೂ ತೀರ್ಮಾನಿಸಲಾಗಿದೆ.
ಮಾನವ ಸಹಿತ ಮತ್ತು ಮಾನವ ರಹಿತ ಲೆವೆಲ್ ಕ್ರಾಸಿಂಗ್ಗಳಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ರೇಲ್ವೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಕೇಂದ್ರ ರೇಲ್ವೆ ಸಚಿವ ಪವನ್ಕುಮಾರ್ ಬನ್ಸಲ್ ಹೇಳಿದ್ದಾರೆ. ಅಲ್ಲದೆ, ಮಾನವರಹಿತ ಸ್ವಯಂಚಾಲಿತ ಸಿಗ್ನಲ್ಗಳಿಗಾಗಿ ರೈಲು ರಕ್ಷಣೆ ಎಚ್ಚರಿಕೆ ವ್ಯವಸ್ಥೆ (ಟಿಪಿಡಬ್ಲ್ಯುಎಸ್) ಜಾರಿಗೆ ತರಲಾಗುವುದು ಎಂದೂ ಅವರು ತಿಳಿಸಿದರು. ರೈಲು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಪರಿಹಾರ ಕಾರ್ಯಗಳನ್ನು ಆರಂಭಿಸಲು ಅನುಕೂಲವಾಗುವಂತೆ ಸ್ವಯಂಚಾಲಿತ ಅಪಘಾತ ಪರಿಹಾರ ರೈಲುಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ.
ಅನೇಕ ಸಂದರ್ಭಗಳಲ್ಲಿ ರೈಲು ಅಪಘಾತ ಸಂಭವಿಸಿದ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ಹೋಗಲು ಸೂಕ್ತ ವ್ಯವಸ್ಥೆ ಇರುವುದಿಲ್ಲ. ಇದನ್ನು ಮನಗಂಡು ಸ್ವಯಂಚಾಲಿತ ಅಪಘಾತ ಪರಿಹಾರ ರೈಲುಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸ್ವಯಂಚಾಲಿತ ಅಪಘಾತ ಪರಿಹಾರ ರೈಲುಗಳು ಪ್ರತಿ ಗಂಟೆಗೆ 160ರಿಂದ 200 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದ್ದು, ಅತಿ ಶೀಘ್ರದಲ್ಲಿ ಅಪಘಾತ ನಡೆದ ಸ್ಥಳಕ್ಕೆ ತಲುಪಲಿದೆ. ಇದರಿಂದ ರೈಲ್ವೆ ಅಪಘಾತ ಸಂದರ್ಭದಲ್ಲಿ ಶೀಘ್ರ ಪರಿಹಾರ ಕಾರ್ಯ ಕೈಗೊಳ್ಳಲು ಅನುಕೂಲವಾಗುತ್ತದೆ. ರೈಲುಗಳು ಡಿಕ್ಕಿಯಾದಾಗ ನಜ್ಜುಗುಜ್ಜಾಗದಂತಹ ಎಲ್ಎಚ್ಬಿ ಬೋಗಿಗಳನ್ನು ಅಳವಡಿಸಿಕೊಳ್ಳಲಾಗುವುದು.
ಸುರಕ್ಷತೆ ಹೆಚ್ಚಳಕ್ಕೆ ಹಲವು ಕ್ರಮ
ರೇಲ್ವೆ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ 2014ರಿಂದ 2024ರ 10 ವರ್ಷದ ಅವಧಿಗೆ ಕಾರ್ಪೋರೇಟ್ ಸುರಕ್ಷತಾ ಯೋಜನೆ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದರ ಜತೆಗೆ ಸುರಕ್ಷಿತ ರೇಲ್ವೆ ಪ್ರಯಾಣಕ್ಕಾಗಿ ಈಗ ಜಾರಿಯಲ್ಲಿರುವ ಕೆಲವು ಕಾರ್ಯಕ್ರಮಗಳ ಜತೆಗೆ ಹೊಸ ಕ್ರಮಗಳನ್ನೂ ಜಾರಿಗೊಳಿಸಲಾಗುತ್ತಿದೆ.
ರೇಲ್ವೆ ಕಾರ್ಯಾಚರಣೆ ಮಾತ್ರವಲ್ಲದೆ, ರೇಲ್ವೆ ಹಳಿಗಳ ಸಾಮರ್ಥ್ಯ ಹೆಚ್ಚಿಸಲು ಸಿಗ್ನಲಿಂಗ್ ವ್ಯವಸ್ಥೆಯ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ.
ರೈಲು ಅಪಘಾತ ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ 'ರೈಲು ಸಂಘರ್ಷ ತಪ್ಪಿಸುವ ವ್ಯವಸ್ಥೆ' ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ರೇಲ್ವೆ ಹಳಿಗಳನ್ನು ಮೇಲ್ದರ್ಜೆಗೇರಿಸಲು 250 ಮೀಟರ್ ಉದ್ದವಿರುವ 60 ಕೆ.ಜಿ. ತೂಕದ ಕಂಬಿಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಇದನ್ನು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಜೋಡಿಸಲಾಗುತ್ತದೆ.
ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ರೇಲ್ವೆಯ 17 ಸೇತುವೆಗಳನ್ನು ಇನ್ನು ಒಂದು ವರ್ಷ ಅವಧಿಯಲ್ಲಿ ಮರುನಿರ್ಮಾಣ ಮಾಡಲಾಗುತ್ತದೆ.
ರೈಲುಗಳ ಎಸಿ ಕೋಚ್, ಪ್ಯಾಂಟ್ರೀ ಕಾರ್ಗಳಲ್ಲಿ ಸುಲಭವಾಗಿ ಸಾಗಿಸಬಹುದಾದ ಬೆಂಕಿ ಆರಿಸುವ ಸಾಧನಗಳನ್ನು ಅಳವಡಿಸಲಾಗುವುದು. ಕೋಚ್ಗಳಿಗೆ ಬೆಂಕಿ ತಗುಲದ ಬಣ್ಣಗಳನ್ನು ಬಳಿಯಲಾಗುವುದು.