ಪ್ರತಿ ವರ್ಷವೂ ರೇಟಿನ ಏಟು
ರೇಲ್ವೆ ಬಜೆಟ್ ಮಂಡನೆ ಮುಂಚೆ ರೈಲು ಪ್ರಯಾಣ ದರ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ನಿರೀಕ್ಷೆಯನ್ನು ತಲೆ ಕೆಳಗೆ ಮಾಡಿರುವ ಸಚಿವ ಪವನ್ಕುಮಾರ್ ಬನ್ಸಲ್, ಪ್ರಯಾಣ ದರವನ್ನು ಹೆಚ್ಚಿಸಿಲ್ಲ. ಆದರೆ, ಭವಿಷ್ಯದಲ್ಲಿ ಪ್ರತಿ ವರ್ಷಕ್ಕೆ ಶೇ.5ರಿಂದ ಶೇ.6ರಷ್ಟು ದರ ಹೆಚ್ಚಳದ ಅನಿವಾರ್ಯತೆಯನ್ನು ಬಿಚ್ಚಿಟ್ಟಿದ್ದಾರೆ. ಮೇಲ್ನೋಟಕ್ಕೆ ಪ್ರಯಾಣ ದರ ಹೆಚ್ಚಳವಾಗಿಲ್ಲವಾದರೂ ಒಳಾರ್ಥದಲ್ಲಿ ಬೇರೆ ಬೇರೆ ಮೂಲಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸುವ ಕಸರತ್ತನ್ನು ಬನ್ಸಲ್ ಮಾಡಿದ್ದಾರೆ ಎಂದು ಹೇಳಬಹುದು. ದೇಶದ ಜನರ ಸಾರಿಗೆ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ರೈಲು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಹಾಗಂತ, ರೈಲು ಪ್ರಯಾಣ ದರವನ್ನು ಹೆಚ್ಚಿಸುತ್ತಿಲ್ಲ. ಯಾಕಂದರೆ, ರೈಲು ಸೇವೆಯನ್ನು ಲಾಭದಾಯಕವಾಗಿ ನೋಡುವಂತಿಲ್ಲ. ಹೀಗಿದ್ದಾಗ್ಯೂ, ಒಂದು ವೇಳೆ, ರೈಲು ನಿರ್ವಹಣಾ ವೆಚ್ಚಕ್ಕಿಂತ ಕಡಿಮೆಯಾಗಿ ದರಗಳು ಸ್ಥಿರತೆ ಕಾಯ್ದುಕೊಂಡರೆ, ಸಾರ್ವಜನಿಕರಿಗೆ ಸುರಕ್ಷಿತ, ಸ್ವಚ್ಛ ಹಾಗೂ ಆರಾಮದಾಯಕ ಸೇವೆಯನ್ನು ನೀಡಲು ಹೆಣಗಬೇಕಾಗುತ್ತದೆ ಎಂದು ಸಚಿವ ಬನ್ಸಲ್ ಹೇಳಿದ್ದಾರೆ.
ಸೂಪರ್ಫಾಸ್ಟ್ ಟ್ರೇನ್ ರಿಸರ್ವೇಷನ್ ತುಟ್ಟಿ
ಅತಿವೇಗದ ರೈಲುಗಳಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಮುಂಗಡ ಟಿಕೆಟ್ ಕಾಯ್ದಿರಿಸಲು ಹಾಗೂ ಪೂರಕ ಶುಲ್ಕವನ್ನು 5ರಿಂದ 25ರವರೆಗೂ ಹೆಚ್ಚಿಗೆ ನೀಡಬೇಕು. ಇದು ಸೂಪರ್ಫಾಸ್ಟ್ ಟ್ರೇನ್ಗಳ ಎಲ್ಲ ವರ್ಗದ ಪ್ರಯಾಣಕ್ಕೆ ಅನ್ವಯವಾಗಲಿದೆ. ಅದೇ ರೀತಿ, ಎರಡನೇ ದರ್ಜೆ ಪ್ರಯಾಣದ ಮುಂಗಡ ಟಿಕೆಟ್ ಕಾಯ್ದುರಿಸುವಿಕೆ ಶುಲ್ಕದಲ್ಲಿ ವ್ಯತ್ಯಾಸವಾಗಿಲ್ಲ. ಅದು 15ರಷ್ಟಿದೆ. ಆದರೆ, ಪೂರಕ ಶುಲ್ಕವನ್ನು ಮಾತ್ರ 5ರಿಂದ 15ಕ್ಕೆ ಹೆಚ್ಚಿಸಲಾಗಿದೆ.
ಸ್ಲೀಪರ್ ಕ್ಲಾಸ್ ಪೂರಕ ಶುಲ್ಕ ಹೆಚ್ಚು
ಸ್ಲೀಪರ್ ಕ್ಲಾಸ್ ರಿಸರ್ವೇಷನ್ ಶುಲ್ಕ ಪರಿಷ್ಕರಣೆ ಮಾಡಲಾಗಿಲ್ಲ. ಸದ್ಯ ಈ ಶುಲ್ಕ 20. ಆದರೆ, ಪೂರಕ ಶುಲ್ಕವನ್ನು 10ರಿಂದ 30ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ, ಹವಾನಿಯಂತ್ರಿತ(ಎಸಿ) ಫಸ್ಟ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ರಿಸರ್ವೇಷನ್ ಶುಲ್ಕ 25ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಅದೇ ವೇಳೆ, ಪೂರಕ ಶುಲ್ಕ 25ರಿಂದ 75ರವರೆಗೂ ಏರಿಸಲಾಗಿದೆ.
ತತ್ಕಾಲ್ ಟಿಕೆಟ್ ದರ ಹೆಚ್ಚಳ, ಎಸಿ-2 ತುಂಬಾ ಬಿಸಿ
ತತ್ಕಾಲ್ ರಿಸರ್ವೇಷನ್ ಶುಲ್ಕ ಕೂಡಾ 100ವರೆಗೂ ಹೆಚ್ಚಳವಾಗಿದೆ. ಸ್ಲೀಪರ್ ಮತ್ತು ಎಸಿ ಚೇರ್ ಕಾರ್, ತತ್ಕಾಲ್ ದರವನ್ನು ಕ್ರಮವಾಗಿ 25, 50, 175 ಮತ್ತು ಗರಿಷ್ಠ 200ವರೆಗೂ ಹೆಚ್ಚಿಸಲಾಗಿದೆ. ಎಸಿ-2 ಟೈರ್ ಹಾಗೂ ಎಕ್ಸಿಕ್ಯೂಟಿವ್ ಶುಲ್ಕ 100ರಿಂದ 400ವರೆಗೂ ಏರಿಕೆಯಾಗಿದೆ. ಅಷ್ಟೇ ಅಲ್ಲದೆ, ರಿಸರ್ವೇಷನ್ ರದ್ದು ಶುಲ್ಕವನ್ನು ಶೇ.50ವರೆಗೂ ಹೆಚ್ಚಿಸುವ ಪ್ರಸ್ತಾವನೆಯೂ ಇದೆ.
ಟಿಕೆಟ್ ರದ್ದು ಶುಲ್ಕವೂ ದುಬಾರಿ
ದ್ವಿತೀಯ ಮತ್ತು ಸ್ಲೀಪರ್ ದರ್ಜೆ ಮುಂಗಡ ಟಿಕೆಟ್ ರದ್ದು ಶುಲ್ಕವನ್ನು 10 ಮತ್ತು ಕ್ರಮವಾಗಿ 20ರಿಂದ 30 ಹಾಗೂ 60ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ, ಎಸಿ ಚೇರ್ ಕಾರ್, ಎಸಿ-3 ಎಕಾನಮಿ, ಎಸಿ-3 ಟೈರ್ ಟಿಕೆಟ್ ರದ್ದು ಶುಲ್ಕವನ್ನು 30ರಿಂದ 90ವರೆಗೂ ಹೆಚ್ಚಿಸಲಾಗಿದೆ. ಹಾಗೆಯೇ ಎಸಿ ಫಸ್ಟ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ಗಳ ರದ್ದು ಶುಲ್ಕ 50 ರಿಂದ 120ವರೆಗೂ ಹೆಚ್ಚಿಸಲಾಗಿದೆ.
ಬನ್ಸಲ್ ಕಸರತ್ತು ಹೀಗಿದೆ...
ರೈಲು ಪ್ರಯಾಣದ ಮೂಲ ದರ ಹೆಚ್ಚಳವಾಗದಿದ್ದರೂ ಟಿಕೆಟ್ ಕಾಯ್ದುರಿಸುವಿಕೆ ಶುಲ್ಕ, ಪೂರಕ ಶುಲ್ಕ, ತತ್ಕಾಲ್, ಎಸಿ-2 ಟೈರ್, ಕಾಯ್ದಿಟ್ಟ ಟಿಕೆಟ್ ರದ್ದು ಮಾಡುವ ಶುಲ್ಕವನ್ನು ಹೆಚ್ಚಿಸಿ ಪರೋಕ್ಷವಾಗಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದಾರೆ ರೇಲ್ವೆ ಸಚಿವರು. ಬನ್ಸಲ್ ಯಾವ ರೀತಿ ಕಸರತ್ತು ಮಾಡಿದ್ದಾರೆಂಬುದರ ಬಗ್ಗೆ ಇಲ್ಲಿದೆ ಸರಳ ನಕ್ಷೆ.
ಇವರು ಹಿಂಗಂದ್ರು
ದೇಶದಲ್ಲೇ ಅತಿ ಹೆಚ್ಚು ರೈಲು ಪ್ರಯಾಣಿಕರಿರುವುದು ಬಿಹಾರದಲ್ಲಿ. ಆದರೂ ಹೊಸ ರೈಲು ಘೋಷಣೆ ಮಾಡಿಲ್ಲ. ಜನವರಿಯಲ್ಲೇ ಟಿಕೆಟ್ ದರ ಹೆಚ್ಚಿಸುವ ಮೂಲಕ ಯುಪಿಎ-2 'ಬುದ್ಧಿವಂತಿಕೆ' ಮೆರೆದಿದೆ.
- ನಿತೀಶ್ ಕುಮಾರ್, ಬಿಹಾರ ಸಿಎಂ
ಇದೊಂದು ರಾಜಕೀಯ ಬಜೆಟ್ ಇದು. ಹಿಂದಿನ ವರ್ಷಗಳಲ್ಲಿ ರೇಲ್ವೆ ಹಣಕಾಸನ್ನು ಸೂಕ್ತವಾಗ ನಿರ್ವಹಿಸಿಲ್ಲ ಎಂದು ಬನ್ಸಲ್ ಅವರೇ ಹೇಳಿಕೊಂಡಿದ್ದಾರೆ. ರೇಲ್ವೆಯ ಆರ್ಥಿಕ ಬಿಕ್ಕಟ್ಟಿಗೆ ಪ್ರಧಾನಿ ಸಿಂಗ್ ಅವರೇ ಕಾರಣ.
- ಯಶವಂತ್ ಸಿನ್ಹಾ, ಸಂಸದ
ಪೂರಕ, ಸರಕು ಸಾಗಣೆ ವೆಚ್ಚದಲ್ಲಿ ಹೆಚ್ಚಳ ಮಾಡಲಾಗಿದೆ. ಇದು ಅಗತ್ಯ ವಸ್ತುಗಳ ದರ ಏರಿಕೆ, ಇಂಧನ ಹಣದುಬ್ಬರಕ್ಕೆ ಕಾರಣವಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ದೀರ್ಘಕಾಲಿಕ ದೃಷ್ಟಿಕೋನ ಇಲ್ಲ.
- ಜಯಲಲಿತಾ, ತ.ನಾಡು ಸಿಎಂ
ರೇಲ್ವೆ ಬಜೆಟ್ ಕಾಂಗ್ರೆಸ್ನ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ಸೇರಿದ ರೇಲ್ವೆ ಸಚಿವರೊಬ್ಬರು ಇಂತಹ ಸಂಕುಚಿತ ಮನೋಭಾವ ಹೊಂದಿದ್ದಾರೆ ಎಂಬುದನ್ನು ನಿರೀಕ್ಷಿಸಿಯೇ ಇರಲಿಲ್ಲ.
- ಶಹನವಾಜ್, ಬಿಜೆಪಿ ವಕ್ತಾರ