ಪ್ರಯಾಣಿಕರ ಪ್ರೀತಿ; ಮಿತ್ರರೆದುರು ಫಜೀತಿ
ರೈಲು ಪ್ರಯಾಣ ದರ ಏರಿಸದೆ ಪ್ರಯಾಣಿಕರ ಪ್ರೀತಿ ಗಿಟ್ಟಿಸಿಕೊಂಡ ರೇಲ್ವೆ ಸಚಿವ ಪವನ್‌ಕುಮಾರ್ ಬನ್ಸಲ್ ಯುಪಿಎ ಸರ್ಕಾರದ ಮಿತ್ರಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ ಪಜೀತಿಗೀಡಾದರು. 75 ನಿಮಿಷಗಳ ಬಜೆಟ್ ಭಾಷಣ ವೇಳೆ ರೈಲು ಆಧಾರಿತ ಕಾರ್ಖಾನೆಗಳ ಸ್ಥಾಪನೆಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಮಾಜವಾದಿ ಪಕ್ಷದ ಆರ್.ಕೆ. ಸಿಂಗ್ ಪಟೇಲ್ 'ರೈಲು ಆಧಾರಿತ ಕಾರ್ಖಾನೆಗಳು ಕೇವಲ ಕಾಂಗ್ರೆಸ್ ಸಂಸದರ ಕ್ಷೇತ್ರಕ್ಕೆ ಸಿಮೀತವಾಗಿವೆ. ಇದು ಮಿತ್ರಪಕ್ಷಗಳಿಗೆ ಮಾಡಿದ ಅನ್ಯಾಯ' ಎಂದು ಆಕ್ರೋಶ ವ್ಯಕ್ತಪಡಿಸಿ ತಮ್ಮ ಕೈಯಲ್ಲಿದ್ದ ಬಜೆಟ್ ಕಾಗದಗಳನ್ನು ತೂರಿದರು. ಇದಕ್ಕೆ ಬಿಎಸ್‌ಪಿ, ಜೆಡಿಯು ಸಂಸದರು ಕೂಡ ಧ್ವನಿಗೂಡಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಹೀಗಾಗಿ ಕೆಲಕಾಲ ಲೋಕಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.