ಬಜೆಟ್ ಸಿದ್ಧತೆ ಹೀಗೆ
ವಿತ್ತ ಸಚಿವ ಪಿ.ಚಿದಂಬರಂ ಫೆ.28ರಂದು ಸಂಸತ್ತಿನಲ್ಲಿ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಆ ಬಜೆಟ್ ಜನಪರವಾಗಿರುತ್ತದೋ? ಉದ್ಯಮಿಗಳ ಪರವಾಗಿರುತ್ತದೋ ಅನ್ನುವುದು ಬೇರೆ ಮಾತು. ಆದರೆ, ಬಜೆಟ್ ಹೇಗೆ ಸಿದ್ಧಪಡಿಸಲಾಗುತ್ತದೆ ಅನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಅಂಥವರಿಗಾಗಿಯೇ ಇಲ್ಲಿದೆ ಬಜೆಟ್ ಸಿದ್ಧತೆ ಕುರಿತ ಒಂದಷ್ಟು ಸಂಕ್ಷಿಪ್ತ ಮಾಹಿತಿ...
ಸೆಪ್ಟೆಂಬರ್...
ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಬಜೆಟ್ಗೆ ಸಂಬಂಧಿಸಿ ಸೂಚನಾಪತ್ರ ಕಳುಹಿಸಿಕೊಡಲಾಗುತ್ತದೆ. ಪ್ರತಿಯೊಂದು ಇಲಾಖೆಯೂ ಅವರಿಗೆ ತಮ್ಮ ಹಣದ ಅಗತ್ಯದ ಕುರಿತು ವಿವರವಾದ ಪ್ರತಿಕ್ರಿಯೆ ನೀಡುತ್ತವೆ. ವಿಶೇಷ ಯೋಜನೆಗಳಿಂದ ಹಿಡಿದು ಪ್ರತಿನಿತ್ಯದ ಖರ್ಚು, ಸಂಬಂಳದ ವರೆಗೆ ಅದು ಮಾಹಿತಿ ಹೊಂದಿರುತ್ತದೆ.
ನವೆಂಬರ್
ಹಣಕಾಸು ಸಚಿವರು ಉದ್ದಿಮೆ ಸಂಘಟನೆಗಳು, ಛೇಂಬರ್ ಆಫ್ ಕಾಮರ್ಸ್, ರೈತ ಪರ ಸಂಘಟನೆಗಳು, ನೌಕರರ ಸಂಘಟನೆಗಳ ಜತೆ ಹಣಕಾಸು ಇಲಾಖೆ ಅಧಿಕಾರಿಗಳು ರೈಸಿನಾ ಹಿಲ್ನ ನಾರ್ಥ್ ಬ್ಲಾಕ್ನಲ್ಲಿ ಚರ್ಚೆ ನಡೆಸುತ್ತಾರೆ. ಪ್ರತಿಯೊಂದು ಗುಂಪುಗಳು ಹಣಕಾಸು ವಿನಾಯ್ತಿಗಳಿಗೆ ಬೇಡಿಕೆ ಇಡುತ್ತವೆ.
ಜನವರಿ
ಬಜೆಟ್ ಮಂಡನೆಗೆ 2 ತಿಂಗಳಿದೆ ಅನ್ನುವಾಗ ವಿತ್ತ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತದೆ. ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರೆ ಎಲ್ಲಾ ಮಿತ್ರಪಕ್ಷಗಳ ಜತೆಗೆ ಚರ್ಚೆ ನಡೆಸಲಾಗುತ್ತದೆ. ಬಜೆಟ್ ಹೇಗಿರಬೇಕೆನ್ನುವ ಕುರಿತು ಇಲ್ಲಿ ಅಭಿಪ್ರಾಯ ಪಡೆಯಲಾಗುತ್ತದೆ.
ಫೆಬ್ರವರಿ
ಬಜೆಟ್ ಮಂಡನೆಗೆ 7 ದಿನ ಇದೆ ಎನ್ನುವಾಗ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳು, ಪ್ರಿಂಟಿಂಗ್ ತಾಂತ್ರಿಕರು ಮತ್ತು ಸ್ಟೆನೋಗ್ರಾಫರ್ಸ್ ಹಾಗೂ ರಾಷ್ಟ್ರೀಯ ಇನ್ಫೋರ್ಮ್ಯಾಟಿಕ್ ಕೇಂದ್ರದ ಹಿರಿಯ ಅಧಿಕಾರಿಗಳು ನಾರ್ಥ್ ಬ್ಲಾಕ್ ಕಡೆ ಹೆಜ್ಜೆ ಹಾಕುತ್ತಾರೆ. ಬಜೆಟ್ನ ಅಂತಿಮ ಪ್ರತಿ ಸಿದ್ಧಪಡಿಸುವ ಕಾರ್ಯದಲ್ಲಿ ಬ್ಯುಸಿಯಾಗುತ್ತಾರೆ. ಹಾಗಾಗಿ ಅವರು ವಾರ ಕಾಲ ಅವರು ಹೊರ ಜಗತ್ತಿನ ಸಂಪರ್ಕದಿಂದ ದೂರ ಉಳಿಯುತ್ತಾರೆ. ಕುಟುಂಬ ಸದಸ್ಯರ ಜತೆ ಮಾತನಾಡಲೂ ಅವರಿಗೆ ಅವಕಾಶ ಇಲ್ಲ. ಕೇವಲ ವಿತ್ತ ಸಚಿವರಷ್ಟೇ ಅವರನ್ನು ಭೇಟಿಯಾಗಬಹುದು. ತುರ್ತು ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರು ಅಧಿಕಾರಿಗಳು ನೀಡಿದ ದೂರವಾಣಿಗೆ ಸಂದೇಶ ಬಿಟ್ಟು ಹೋಗಬಹುದು ಅಷ್ಟೆ. ಆದರೆ, ನೇರವಾಗಿ ಮಾತನಾಡುವಂತಿಲ್ಲ.
ಮುದ್ರಣ
ಆರಂಭದಲ್ಲಿ ಬಜೆಟ್ ಪತ್ರಗಳನ್ನು ರಾಷ್ಟ್ರಪತಿ ಭವನದಲ್ಲಿ ಮುದ್ರಿಸಲಾಗುತ್ತಿತ್ತು. ಆದರೆ, 1950ರಲ್ಲಿ ಮಾಹಿತಿ ಬಹಿರಂಗವಾಗಿದ್ದವು. ಈ ಹಿನ್ನೆಲೆ ಮಿಂಟ್ರೋಡ್ನಲ್ಲಿರುವ ಪ್ರೆಸ್ಗೆ ಮುದ್ರಣವನ್ನು ಸ್ಥಳಾಂತರಿಸಲಾಗಿತ್ತು. 1980ರಿಂದ ಬಜೆಟ್ಪತ್ರವು ನಾರ್ಥ್ಬ್ಲಾಕ್ನ ಬೇಸ್ಮೆಂಟ್ನಲ್ಲಿ ಮುದ್ರಣವಾಗುತ್ತಿದೆ.
ಕಣ್ಗಾವಲು
ಮುದ್ರಣ ವೇಳೆ ಬೇಹುಗಾರಿಕಾ ವಿಭಾಗ (ಐಬಿ)ದ ಅಧಿಕಾರಿಗಳ ತಂಡ ಬೆಳಗ್ಗಿನಿಂದ ಸಂಜೆವರೆಗೆ ಜನರ ಚಟುವಟಿಕೆಗಳನ್ನು ಗಮನಿಸುತ್ತಿರುತ್ತದೆ. ಕೆಲವೊಮ್ಮೆ ಐಬಿ ಮುಖ್ಯಸ್ಥರು ಪ್ರಿಂಟಿಂಗ್ ಪ್ರೆಸ್ಗೆ ದಿಢೀರ್ ಭೇಟಿ ನೀಡಬಹುದು. ಪ್ರಿಂಟಿಂಗ್ ಪ್ರೆಸ್ ಆವರಣದಲ್ಲಿ ಮೊಬೈಲ್ ಜಾಮರ್ ಅನ್ನೂ ಅಳವಡಿಸಿರಲಾಗಿರುತ್ತದೆ. ಈ ಮೂಲಕ ಸಣ್ಣ ಮಾಹಿತಿಯೂ ಹೊರಹೋಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.
ಬಜೆಟ್ ಮಂಡನೆ
ಹಣಕಾಸು ಸಚಿವರ ಭಾಷಣವನ್ನು ಎಚ್ಚರದಿಂದ ಕಾಯಲಾಗುತ್ತದೆ. ಈ ಭಾಷಣವನ್ನು ಬಜೆಟ್ ಘೋಷಣೆಗೂ ಎರಡು ದಿನ ಮೊದಲು ಮಧ್ಯರಾತ್ರಿ ಮುದ್ರಿಸಲಾಗುತ್ತದೆ.