ಬಜೆಟ್ ಹೈಲೈಟ್ಸ್
1.52 ಲಕ್ಷ ಹುದ್ದೆ ಭರ್ತಿ
ರೇಲ್ವೆ ಇಲಾಖೆಯಲ್ಲಿ ಖಾಲಿ ಇರುವ 1.52 ಲಕ್ಷ ಹುದ್ದೆಗಳನ್ನು 2013-14ನೇ ಸಾಲಿನಲ್ಲಿ ಭರ್ತಿ ಮಾಡಲು ತೀರ್ಮಾನಿಸಲಾಗಿದೆ. ಇದರ ಜತೆಗೆ ಆರ್ಥಿಕವಾಗಿ ಹಿಂದುಳಿದ ಮತ್ತು ವಿಕಲಾಂಗರಿಗಾಗಿ ಇರುವ 47 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳನ್ನು ಪ್ರಸಕ್ತ ಸಾಲಿನಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ರೇಲ್ವೆ ನೇಮಕಾತಿಗಳು ದೇಶಾದ್ಯಂತ ಹೆಚ್ಚು ಜನಪ್ರಿಯವಾಗಿವೆ. ಈಗಾಗಲೇ 2.20 ಕೋಟಿ ಅರ್ಜಿಗಳು ಬಂದಿದ್ದು, ಇವೆಲ್ಲವನ್ನೂ ಪರಿಶೀಲಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ದೇಶಾದ್ಯಂತ 60 ನಗರಗಳಲ್ಲಿ ನೇಮಕಾತಿ ಪರಿಕ್ಷೆ ನಡೆಸಲಾಗುವುದು ಎಂದು ರೇಲ್ವೆ ಸಚಿವರು ತಿಳಿಸಿದ್ದಾರೆ.
ಮಹಿಳೆಗೆ ವಿಶೇಷ ಭದ್ರತೆ
ರೇಲ್ವೆ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ವಿಶೇಷವಾಗಿ ಮಹಿಳಾ ಪ್ರಯಾಣಿಕರ ಭದ್ರತೆಗೆ ಹೆಚ್ಚುವರಿಯಾಗಿ 8 ರೇಲ್ವೆ ರಕ್ಷಣಾ ದಳ (ಆರ್‌ಪಿಎಫ್) ಕಂಪನಿಗಳನ್ನು ಸ್ಥಾಪಿಸಲಾಗುತ್ತದೆ. ಸದ್ಯ 4 ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಆರ್‌ಪಿಎಫ್ ನೇಮಕದಲ್ಲಿ ಶೇ.10ರಷ್ಟು ಹುದ್ದೆಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗುತ್ತದೆ. ಈಗ ಇರುವ ಮಹಿಳಾ ಆರ್‌ಪಿಎಫ್ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸಲಾಗುತ್ತದೆ. ಮೆಟ್ರೋ ನಗರಗಳಲ್ಲಿ ಸಂಚರಿಸುವ ಮಹಿಳಾ ವಿಶೇಷ ಲೋಕಲ್ ರೈಲುಗಳಲ್ಲಿ ಮಹಿಳಾ ಆರ್‌ಪಿಎಫ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗುತ್ತದೆ. ಮಹಿಳೆಯರಿಗೆ ಯಾವುದೇ ತೊಂದರೆ, ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ವಲಯಗಳ ರೈಲುಗಳಲ್ಲಿ 'ಹೆಲ್ಪ್‌ಲೈನ್' ನಂಬರ್‌ಗಳು ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸರಕು ಸಾಗಣೆ ಕಾರಿಡಾರ್
ಸುಮಾರು 2,800 ಕಿ.ಮೀ.ನ ಪೂರ್ವ ಮತ್ತು ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಪೂರ್ವ ಕಾರಿಡಾರ್‌ನ 343 ಕಿ.ಮೀ. ಕಾನ್ಪುರ-ಖುರ್ಜಾ ವಲಯ ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ಈಗಾಗಲೇ ನೀಡಲಾಗಿದೆ. 2013-14ರ ಅಂತ್ಯದಲ್ಲಿ ಎರಡೂ ಕಾರಿಡಾರ್‌ಗಳಲ್ಲಿ 1,500 ಕಿ.ಮೀ. ನಿರ್ಮಾಣ ಗುತ್ತಿಗೆ ನೀಡಲಾಗುವುದು. ಭವಿಷ್ಯದ 4 ವಿಶೇಷ ಸರಕು ಸಾಗಣೆ ಕಾರಿಡಾರ್‌ಗೆ ಪ್ರಾಥಮಿಕ ಎಂಜಿನಿಯರಿಂಗ್ ಹಾಗೂ ಟ್ರಾಫಿಕ್ ಅಧ್ಯಯನ (ಪಿಇಟಿಎಸ್) ಆರಂಭಿಸಲಾಗಿದೆ.
ಮ್ಯೂಸಿಯಂ ನವೀಕರಣ
ನವದೆಹಲಿಯಲ್ಲಿರುವ ರಾಷ್ಟ್ರೀಯ ರೇಲ್ವೆ ಮ್ಯೂಸಿಯಂ ದೇಶದ ರೇಲ್ವೇ ವ್ಯವಸ್ಥೆಗೆ ಕನ್ನಡಿಯಾಗಿದೆ. ಇಲ್ಲಿ ಭಾರತೀಯ ರೇಲ್ವೆ ಇತಿಹಾಸ ಹಾಗೂ ಬೆಳೆದು ಬಂದ ಹಾದಿಯನ್ನು ನೋಡಬಹುದಾಗಿದೆ. ದೆಹಲಿಯ ಪ್ರವಾಸಿ ತಾಣದ ಭೂಪಟದಲ್ಲಿ ರೇಲ್ವೆ ಮ್ಯೂಸಿಯಂ ಪ್ರಮುಖ ಸ್ಥಾನಗಳಿಸಿದೆ. ಇದಕ್ಕೆ ಪ್ರಮುಖ ಸ್ಥಾನವಿದೆ. ಮ್ಯೂಸಿಯಂಗೆ ಭೇಟಿ ನೀಡುವ ವೀಕ್ಷಕರಿಗೆ ಅದರಲ್ಲೂ ಮಕ್ಕಳಿಗೆ ಮರೆಯಲಾಗದ ಅನುಭವವನ್ನು ಕೊಡುವುದರಿಂದ ಇದನ್ನು 2013-14ನೇ ಸಾಲಿನಲ್ಲಿ ನವೀಕರಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.
ರೇಲ್ವೆಯಲ್ಲೂ ಪಿಎಚ್.ಡಿ
ಇನ್ನು ರೇಲ್ವೆ ಇಲಾಖೆ ಅಧ್ಯಯನಕ್ಕೂ ಮುಕ್ತವಾಗಿದೆ. ರೇಲ್ವೆ ಬಗ್ಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅವರಿಗೆ ಶಿಷ್ಯವೇತನವನ್ನೂ ನೀಡಲು ಮುಂದಾಗಿದೆ. ಇಂತಹ ಯೋಜನೆಗಳನ್ನು ರೂಪಿಸುವ ಮೂಲಕ ಯುವಕರನ್ನು ತನ್ನತ್ತ ಹೆಚ್ಚು ಹೆಚ್ಚು ಸೆಳೆಯುವ ಯತ್ನಕ್ಕೆ ಕೈ ಹಾಕಿದೆ. ಭಾರತೀಯ ರೇಲ್ವೆ ಮೇಲೆ ಅಧ್ಯಯನ ಮಾಡುವ ವಿದ್ಯಾರ್ಥಿಗಳು, ಅಂದರೆ ಎಂ.ಫಿಲ್ ಮತ್ತು ಪಿಎಚ್.ಡಿ ಮಟ್ಟದಲ್ಲಿ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುವ 5 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ನಿರ್ಧರಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಭತ್ಯೆ ಕೂಡಾ ನಿಗದಿಗೊಳಿಸಲಾಗುವುದು.