ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರೈಲು ರೊಕ್ಕ ಪಕ್ಕಾ

Parashurama
Updated On : 26 Feb 2013, 11:51 am

ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿರೀಕ್ಷಿತ 1.35 ಲಕ್ಷ ಕೋಟಿ ಗುರಿಗಿಂತ 7,500 ಕೋಟಿ ಕಡಿಮೆ ಆದಾಯ ಸಂಗ್ರಹವಾಗುತ್ತಿದ್ದರೂ 2013-14ನೇ ಸಾಲಿನಲ್ಲಿ 1.46 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಗುರಿ ಸಾಧಿಸುವ ಭರವಸೆಯನ್ನು ರೇಲ್ವೆ ಸಚಿವ ಪವನ್‌ಕುಮಾರ್ ಬನ್ಸಲ್ ಹೊಂದಿದ್ದಾರೆ.
2013-14ನೇ ಸಾಲಿನಲ್ಲಿ 1.46 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಗುರಿಯನ್ನು ರೇಲ್ವೆ ಇಲಾಖೆ ಇಟ್ಟುಕೊಂಡಿದೆ. ಆದರೆ, 2012-13ನೇ ಸಾಲಿನಲ್ಲಿ 1.35 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಗುರಿ ಪೈಕಿ 7491 ಕೋಟಿ ಕೊರತೆಯಾಗಲಿದೆ.
ಈ ಗುರಿ ಸಾಧನೆ ಸಾಧ್ಯವಾಗದಿರಲು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ 3573 ಕೋಟಿ ಮತ್ತು ಸರಕು ಸಾಗಣೆ ವೆಚ್ಚ ವಸೂಲಿಯಲ್ಲಿ 3383 ಕೋಟಿ ಕೊರತೆಯಾಗಿರುವುದೇ ಕಾರಣ ಎಂಬ ಅಭಿಪ್ರಾಯಕ್ಕೆ ಬಂದಿರುವ ರೇಲ್ವೆ ಸಚಿವರು, ಸರಕು ಸಾಗಣೆಯಲ್ಲಿ ಶೇ. 9ರಷ್ಟು ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 5.2ರಷ್ಟು ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯೊಂದಿಗೆ 1.46 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದಾರೆ.
2013-14ನೇ ಸಾಲಿನಲ್ಲಿ ಪ್ರಯಾಣ ದರ ಮೂಲಕ 42210 ಕೋಟಿ ಮತ್ತು ಸರಕು ಸಾಗಣೆ ರೂಪದಲ್ಲಿ 85,956 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ರೇಲ್ವೆ ಇಲಾಖೆಯಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವ ಬಗ್ಗೆ ಸಚಿವರು ಪ್ರಸ್ತಾಪಿಸಿದ್ದಾರಾದರೂ 2013-14ನೇ ಸಾಲಿನಲ್ಲಿ ಇಲಾಖೆ ಒಟ್ಟು 24,000 ಕೋಟಿ ನಷ್ಟ ಅನುಭವಿಸಲಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಮುಂದಿನ ಆರ್ಥಿಕ ಸಾಲಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲು ಸರಕು ಸಾಗಣೆಗೆ ವಿಶೇಷ ಕಾರಿಡಾರ್ ಸ್ಥಾಪನೆ, ಹೂಡಿಕೆಯಲ್ಲಿ ಸರಳತೆ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ವಿಶೇಷ ಸರಕು ಸಾಗಣೆ ಕಾರಿಡಾರ್ ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲು ಪ್ರತ್ಯೇಕ ಋಣ ಸೇವಾ ನಿಧಿ ಸ್ಥಾಪಿಸಲಾಗುವುದು. 12ನೇ ಪಂಚವಾರ್ಷಿಕ ಯೋಜನೆ ಅವಧಿ ಪೂರ್ಣಗೊಳ್ಳುವ ವೇಳೆಗೆ ಯೋಜನಾ ವೆಚ್ಚವನ್ನು 1.05 ಲಕ್ಷಕ್ಕೆ ಏರಿಸಲು ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಯಕಾರಿ, ಯೋಜನಾ ವೆಚ್ಚ ಏರಿಕೆ: ಅದೇ ರೀತಿ 2013-14ನೇ ಸಾಲಿನಲ್ಲಿ 96500 ಕೋಟಿ ಕಾರ್ಯಕಾರಿ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಇದು 2012-13ನೇ ಸಾಲಿಗಿಂತ ಶೇ. 14ರಷ್ಟು ಹೆಚ್ಚು.
ಅಲ್ಲದೆ, 63,363 ಕೋಟಿ ಯೋಜನಾ ವೆಚ್ಚ ನಿಗದಿಪಡಿಸಲಾಗಿದ್ದು, ಈ ಪೈಕಿ ಬಜೆಟ್ ಹಂಚಿಕೆ 26,000 ಕೋಟಿ, ರಸ್ತೆ ಸುರಕ್ಷತಾ ನಿಧಿಯ ರೇಲ್ವೆ ಪಾಲು 2,000 ಕೋಟಿ, ಮಾರುಕಟ್ಟೆ ಸಾಲದ ಮೂಲಕ 15,103 ಕೋಟಿ ಹಾಗೂ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯಿಂದ 6,000 ಕೋಟಿ ಸಂಗ್ರಹಿಸಲಾಗುತ್ತದೆ.
ಜೋಡಿ ಹಳಿಗಳ ನಿರ್ಮಾಣ, ಪ್ರಯಾಣಿಕರ ಸುರಕ್ಷತೆ ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ 13,220 ಕೋಟಿ ವೆಚ್ಚ ಮಾಡಲಾಗುತ್ತದೆ. ಇದು 2012-13ನೇ ಸಾಲಿಗಿಂತ ಶೇ. 13ರಷ್ಟು ಹೆಚ್ಚು.
ಸಾಲದ ಪ್ರಮಾಣ ಹೆಚ್ಚಳ: 2013-14ನೇ ಸಾಲಿನಲ್ಲಿ 24,000 ಕೋಟಿ ನಷ್ಟದ ಅಂದಾಜು ಮಾಡಲಾಗಿದ್ದು, ಇದರಲ್ಲಿ ಆಗಾಗ್ಯೆ ಹೆಚ್ಚುತ್ತಿರುವ ಡೀಸೆಲ್ ದರ ಮತ್ತು ವಿದ್ಯುತ್ ವೆಚ್ಚದಿಂದಾಗಿ 3200 ಕೋಟಿ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ. 2012-13ನೇ ಸಾಲಿನಲ್ಲಿ 22,500 ಕೋಟಿ ನಷ್ಟ ಅಂದಾಜು ಮಾಡಲಾಗಿದೆ. ಹೀಗಾಗಿ ನಷ್ಟದ ಮೊತ್ತ ಪ್ರಸಕ್ತ ವರ್ಷಕ್ಕಿಂತ 1,500 ಕೋಟಿ ಹೆಚ್ಚಾಗಲಿದೆ. 2011-12ನೇ ಸಾಲಿನಲ್ಲಿ ರೇಲ್ವೆ ಇಲಾಖೆ ಆರ್ಥಿಕ ಇಲಾಖೆಯಿಂದ 3,000 ಕೋಟಿ ಸಾಲ ಪಡೆದಿತ್ತು. 2012-13ನೇ ಸಾಲಿನಲ್ಲಿ ಈ ಸಾಲವನ್ನು ಬಡ್ಡಿ ಸಹಿತ ಮರುಪಾವತಿ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಒಟ್ಟು 347 ಯೋಜನೆಗಳನ್ನು ಆದ್ಯತಾ ಕಾರ್ಯಕ್ರಮಗಳೆಂದು ಗುರುತಿಸಲಾಗಿದ್ದು, 12ನೇ ಪಂಚವಾರ್ಷಿಕ ಯೋಜನೆಯ ಅಂತ್ಯದೊಳಗೆ ಈ ಎಲ್ಲಾ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ಈ ಮೂಲಕ ಯೋಜನೆಯ ಅನುಕೂಲವನ್ನು ಸಾರ್ವಜನಿಕರಿಗೆ ಒದಗಿಸಿ, ಇದಕ್ಕೆ ಮಾಡಿದ ವೆಚ್ಚವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕರ್ನಾಟಕಕ್ಕೆ ಹರಿದು ಬಂದ ಹೊಸ ರೈಲುಗಳು
1.  ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
2. ಹುಬ್ಬಳ್ಳಿ- ಮೀರಜ್- ಪುಣೆ- ಮುಂಬೈ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
3. ಕಾಮಖ್ಯ(ಗುವಾಹಟಿ)- ಬೆಂಗಳೂರು ಎಸಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
4. ಮಡಗಾಂವ್- ಉಡುಪಿ- ಕಾರವಾರ- ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ಪ್ರತಿದಿನ)
5. ಮಂಗಳೂರು- ಧೋನೆ- ಗೂಟಿ- ರೇಣಿಗುಂಟ್- ಕೊಯಮತ್ತೂರು- ಕಾಚಿಗುಡ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
6. ನಾಗರಕೊಯಿಲ್- ಮಧುರೈ- ತಿರುಚಿರಾಪಳ್ಳಿ- ಬೆಂಗಳೂರು ಎಕ್ಸ್‌ಪ್ರೆಸ್ (ಪ್ರತಿದಿನ)
7. ಪಟ್ನಾ- ಬೆಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
8. ಯಶವಂತಪುರ- ರಾಯಬರೇಲಿ- ಲಖನೌ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
9. ಜಬಲ್ಪುರ್- ನಾಗ್ಪುರ್- ಧರ್ಮಾವರಮ್- ಯಶವಂತಪುರ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

ಪ್ಯಾಸೆಂಜರ್ ರೈಲುಗಳು
 ಮಾರಿಕುಪ್ಪಂ- ಬೆಂಗಳೂರು (ಪ್ರತಿದಿನ)
 ತಾಳಗುಪ್ಪ- ಶಿವಮೊಗ್ಗ (ಪ್ರತಿದಿನ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement