ಬಾಲಾಪರಾಧಿಗಳ ವಯಸ್ಸು ಇಳಿಕೆ ಸದ್ಯಕ್ಕಿಲ್ಲ: ಸರ್ಕಾರ
ನವದೆಹಲಿ: ಬಾಲಾಪರಾಧ ಕಾಯ್ದೆಯಡಿ ಬಾಲಾಪರಾಧಿಗಳ ವಯಸ್ಸನ್ನು ಇಳಿಸುವ ಯಾವುದೇ ಯೋಜನೆ ಸರ್ಕಾರಕ್ಕಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೃಷ್ಣ ತೀರಥ್ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, ಬಾಲಾಪರಾಧಿಗಳ ವಯಸ್ಸು ಇಳಿಕೆಗೆ ನಾವು ಇನ್ನೂ ಸಿದ್ಧವಾಗಿಲ್ಲ. ಆದರೆ, ಈ ಸಂಬಂಧ ಗೃಹ ಸಚಿವಾಲಯ, ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾ ನಿರ್ದೇಶಕರ ಜತೆಗೆ ಚರ್ಚೆ ನಡೆಸಲಾಗಿದೆ. ಬಾಲಾಪರಾಧಿಗಳ ವಯಸ್ಸನ್ನು 18ರಿಂದ 16ಕ್ಕಿಳಿಸುವ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕ್ಷಮಾದಾನ ವಿವೇಚನೆಯುತವಾಗಿರಲಿ: ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೈದಿಗಳಿಗೆ ಕ್ಷಮಾದಾನ ನೀಡುವಾಗ ಔಚಿತ್ಯಪ್ರಜ್ಞೆಯನ್ನು ಪರಿಗಣಿಸಬೇಕು, ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕ್ಷಮಾದಾನ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು ಎಂದು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.