ಮದುವೆ ಪ್ರಸ್ತಾಪ ಹೀಗೂ ಉಂಟು
ಹೀಗೂ ಪ್ರಪೋಸ್ ಮಾಡ್ಬಹುದಾ? ಫೇಸ್ಬುಕ್ನಲ್ಲಿ ಹರಿದಾಡುತ್ತಿರುವ 'ವೈಜ್ಞಾನಿಕ ಮದುವೆ ಪ್ರಸ್ತಾಪ'ವೊಂದನ್ನು ನೋಡಿ ಅನೇಕರ ಬಾಯಿಯಿಂದ ಹೊರಬಿದ್ದ ಉದ್ಗಾರ ಇದು. ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡೋಕೆ ಕೆಲವರು ಹೂ ಕೊಡ್ತಾರೆ, ಇನ್ನು ಕೆಲವರು ಚಾಕಲೇಟ್ ಮುಂದಿಡ್ತಾರೆ... ಕೊನೆಗೊಂದು ದಿನ ಐಲವ್ ಯು ಅಂದು ಬಿಡುತ್ತಾರೆ. ಆದರೆ, ಆಸ್ಟ್ರೇಲಿಯಾದ ಈ ವಿಜ್ಞಾನಿ ಬ್ರೆಂಡನ್ ಮಾಡಿದ್ದೇನು ಗೊತ್ತಾ? ಪ್ರೇಮ ನಿವೇದನೆ ವೇಳೆ ಮೊಣಕಾಲೂರಿ ತನ್ನ ವಿಜ್ಞಾನಿ ಪ್ರಿಯತಮೆಯ ಕೈಗಿಟ್ಟಿದ್ದು ರಿಂಗ್ ಅಲ್ಲ, ಬದಲಾಗಿ ಅಧ್ಯಯನ ವರದಿಯೊಂದನ್ನು. ಹಾಗಂತ ಅದು ಖಾಲಿಪೋಲಿ ವರದಿಯಲ್ಲ. ಬದಲಾಗಿ ಇಬ್ಬರ ನಡುವಿನ ವೈಜ್ಞಾನಿಕ ಅಧ್ಯಯನ ವರದಿ. ಆ ವರದಿ ತೆರೆದು ನೋಡಿದ ಕ್ರಿಸ್ಟಿ ನೆಲಾನ್ಗೆ ಶಾಕ್! ಯಾಕೆಂದರೆ ಅದು ಯಾವುದೇ ವಿವಿಯ ಮುಂದೆ ಮಂಡಿಸುವ ಪಿಎಚ್.ಡಿ ಪ್ರಬಂಧಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಪ್ರಸ್ತಾವನೆ, ಆರಂಭ, ಗ್ರಾಫ್ ಎಲ್ಲವೂ ಅದರಲ್ಲಿತ್ತು. ಅದನ್ನು ಓದಿದ ಬಳಿಕ ನೆಲನ್ ಆ ವಿಚಿತ್ರ ಪ್ರಸ್ತಾಪಕ್ಕೆ 'ಎಸ್' ಅಂದು ಬಿಟ್ಟರು. ಅಂದ ಹಾಗೆ ಫೇಸ್ಬುಕ್ನಲ್ಲಿ ಹರಿದಾಡುತ್ತಿರುವ ಈ ಮದುವೆ ಪ್ರಸ್ತಾಪವನ್ನು 17 ಲಕ್ಷ ಮಂದಿ ವೀಕ್ಷಿಸಿದ್ದಾರಂತೆ.