ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಹಿಳಾ ಬ್ಯಾಂಕ್ ನವೆಂಬರಲ್ಲಿ

Parashurama
Updated On : 3 Mar 2013, 10:17 am

ನವದೆಹಲಿ: ವಿತ್ತ ಸಚಿವ ಪಿ. ಚಿದಂಬರಂ ಅವರ ಬಜೆಟ್‌ನಲ್ಲಿ ಘೋಷಿಸಲಾಗಿರುವ ದೇಶದ ಮೊಟ್ಟಮೊದಲ ಮಹಿಳಾ ಬ್ಯಾಂಕ್ ಈ ವರ್ಷ ನವೆಂಬರ್‌ನಲ್ಲೇ ಕಾರ್ಯಾರಂಭ ಮಾಡಲಿದೆ. ಆರಂಭದಲ್ಲಿ ಈ ಬ್ಯಾಂಕ್ ಆರು ಶಾಖೆಗಳನ್ನು ಹೊಂದಿರಲಿದೆ.
ಹೌದು. ಈ ವಿನೂತನ ಬ್ಯಾಂಕ್ ಆರಂಭದಲ್ಲಿ ಉತ್ತರ, ದಕ್ಷಿಣ, ಪೂರ್ವ, ಪಶ್ಟಿಮ ಮಧ್ಯ ಮತ್ತು ಈಶಾನ್ಯ ಭಾಗದಲ್ಲಿ ಕನಿಷ್ಠ ಒಂದು ಶಾಖೆಯನ್ನು ಹೊಂದಿರಲಿದೆ. ಅಂದರೆ 6 ಶಾಖೆಗಳೊಂದಿಗೆ ಬ್ಯಾಂಕ್ ಕಾರ್ಯಾಚರಿಸಲಿದೆ ಎಂದು ವಿತ್ತ ಸಚಿವ ಪಿ.ಚಿದಂಬರಂ ಮಾಹಿತಿ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಬ್ಯಾಂಕಿಂಕ್ ಕ್ಷೇತ್ರದಲ್ಲಿರುವ ಪಂಡಿತರ ಅಭಿಪ್ರಾಯ ಪಡೆದು ತಿಂಗಳಾಂತ್ಯದಲ್ಲಿ ಮಹಿಳಾ ಬ್ಯಾಂಕ್ ಸ್ಥಾಪನೆ ಕುರಿತು ನೀಲನಕ್ಷೆ ಸಿದ್ಧಪಡಿಸಲಾಗುವುದು. ಈ ಬ್ಯಾಂಕ್ ಸಂಪೂರ್ಣ ಸರ್ಕಾರದ ನಿಯಂತ್ರಣದಲ್ಲೇ ಇರುವುದರಿಂದ ಪರವಾನಗಿ ಪಡೆಯುವುದು ಸಮಸ್ಯೆಯಾಗದು ಎಂದೂ ಚಿದು ಸುದ್ದಿ ಸಂಸ್ಥೆಯೊಂದಕ್ಕೆ ಭಾನುವಾರ ನೀಡಿದ ಸಂದರ್ಶನದಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಜೈಪುರ ಸಮಾವೇಶ ನಿರ್ಧಾರ: ಮಹಿಳಾ ಬ್ಯಾಂಕ್ ಸ್ಥಾಪಿಸುವ ನಿರ್ಧಾರ ಸೋನಿಯಾ ಅವರದ್ದಲ್ಲ ಎಂದಿರುವ ಚಿದು, ಕಾಂಗ್ರೆಸ್‌ನ ಜೈಪುರ ಸಮಾವೇಶದಲ್ಲಿ ಈ ನಿರ್ಣಯ ಮಂಡಿಸಲಾಗಿತ್ತು. ಇದು ತಮ್ಮ ಚಿಂತನೆಗೆ ಪೂರಕವಾಗಿದ್ದರಿಂದ ಬಜೆಟ್‌ನಲ್ಲಿ ಈ ನಿರ್ಧಾರ ಸೇರಿಸುವ ತೀರ್ಮಾನ ತೆಗೆದುಕೊಂಡೆ ಎಂದು ಮಾಹಿತಿ ನೀಡಿದ್ದಾರೆ.

ಮಾಫಿ ಯೋಜನೆ ಇಲ್ಲ
ತೆರಿಗೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಈಗ ಆನ್‌ಲೈನ್‌ನಲ್ಲಿ ದಾಖಲಾಗುತ್ತಿದೆ. ತೆರಿಗೆ ಕಟ್ಟದವರಿಗೆ ಕ್ಷಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಚಿದು ಹೇಳಿದ್ದಾರೆ. ಈ ಮೂಲಕ ತೆರಿಗೆ ತಪ್ಪಿಸುವವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎನ್ನುವ ಪರೋಕ್ಷ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ಜನ ತಮ್ಮ ಆದಾಯ ಮಾಹಿತಿ ತೋರಿಸಬೇಕು. ತೆರಿಗೆ ಪಾವತಿಸಬೇಕು ಎಂದು ಚಿದು ಹೇಳಿದ್ದಾರೆ.

ಮಸೂದೆಗಳಿಗೆ ಅಸ್ತು?
ಇನ್ಷೂರೆನ್ಸ್ ಹಾಗೂ ಪಿಂಚಣಿ ಮಸೂದೆಗಳು ಸದ್ಯ ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆ ಅಂಗೀಕಾರವಾಗಲಿವೆ ಎನ್ನುವ ವಿಶ್ವಾಸವನ್ನು ಚಿದಂಬರಂ ಅವರು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಜತೆ ಮಾತುಕತೆ ನಡೆಸುತ್ತಿದ್ದೇವೆ. ಆ ಬಳಿಕ ಇತರೆ ಪಕ್ಷಗಳ ಜತೆ ಚರ್ಚೆ ನಡೆಸಲಿದ್ದೇವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಗೂಗಲ್ ಹ್ಯಾಂಗ್‌ಔಟ್‌ನಲ್ಲಿ ಚಿದು
ನಿಮಗೆ ಸಾಮಾನ್ಯ ಬಜೆಟ್ ಕುರಿತು ಏನಾದರೂ ಪ್ರಶ್ನೆಗಳಿವೆಯೇ? ಹಾಗಿದ್ದರೆ ಆ ಪ್ರಶ್ನೆಗಳನ್ನು ನೀವು ನೇರವಾಗಿ ವಿತ್ತ ಸಚಿವ ಪಿ. ಚಿದಂಬರಂ ಅವರಿಗೇ ಕೇಳಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಚಿದು ಅವರು ಗೂಗಲ್ ಹ್ಯಾಂಗ್‌ಔಟ್ ಆನ್‌ಲೈನ್ ವಿಡಿಯೋ ಚಾಟ್‌ನಲ್ಲಿ ಸೋಮವಾರ ರಾತ್ರಿ 8 ಗಂಟೆಗೆ ಲಭ್ಯವಿರಲಿದ್ದಾರೆ. ಚಿದು ಜತೆಗೆ ಜೆ.ಪಿ. ಮಾರ್ಗನ್‌ನ ಏಷ್ಯಾ ಆ್ಯಂಡ್ ಇಂಡಿಯಾದ ಹಿರಿಯ ಆರ್ಥಿಕ ತಜ್ಞ ಜಹಾಂಗೀರ್ ಅಜೀಜ್, ಮಹೀಂದ್ರಾ ಆ್ಯಂಡ್ ಮಹೀಂದ್ರಾದ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ್ ಮಹೀಂದ್ರಾ ಮತ್ತು ಗೂಗಲ್ ಇಂಕ್‌ನ ಹಿರಿಯ ಉಪಾಧ್ಯಕ್ಷ ಅಮಿತ್ ಸಿಂಘಾಲ್ ಉಪಸ್ಥಿತರಿರಲಿದ್ದಾರೆ. ವಿತ್ತ ಸಚಿವ ಚಿದಂಬರಂ ಅವರು ಬಜೆಟ್ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಗೂಗಲ್ ಹ್ಯಾಂಗ್‌ಔಟ್ ಬಳಸುತ್ತಿರುವುದು ಇದೇ ಮೊದಲು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಆಸ್ಟ್ರೇಲಿಯಾದ ಅಧ್ಯಕ್ಷೆ ಜೂಲಿಯಾ ಗಿಲಾರ್ಡ್, ಮಲೇಷ್ಯಾ ಪ್ರಧಾನಮಂತ್ರಿ ನಜೀಬ್ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯಂಥ ಪ್ರಭಾವಿ ನಾಯಕರು ಗೂಗಲ್ ಹ್ಯಾಂಗ್‌ಔಟ್ ಬಳಸಿಕೊಂಡು ನೆಟ್ಟಿಗರ ಜತೆ ಈಗಾಗಲೇ ಮಾತುಕತೆ ನಡೆಸಿದ್ದರು. ಚಿದಂಬರಂ ಅವರು ಕೂಡ ಈಗ ಅವರ ಸಾಲಿಗೆ ಸೇರಲಿದ್ದಾರೆ.

ಅಂಗೀಕಾರಕ್ಕೆ ಮುನ್ನ ಇನ್ನಷ್ಟು ಘೋಷಣೆ
ಸಂಸತ್ತಿನಲ್ಲಿ ಬಜೆಟ್‌ಗೆ ಅಂಗೀಕಾರ ಪಡೆಯುವ ಮುನ್ನ ಕಸ್ಟಮ್ಸ್, ಅಬಕಾರಿ, ಸೇವಾ ತೆರಿಗೆ, ಇನ್ಷೂರೆನ್ಸ್ ಮತ್ತು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಅನೇಕ ನಿರ್ಧಾರಗಳನ್ನು ಘೋಷಿಸಲಾಗುವುದು ಎಂದು ಚಿದು ತಿಳಿಸಿದ್ದಾರೆ. ಫೆ.28ರಂದು ಮಂಡಿಸಿದ ಬಜೆಟ್ ಶಾಸನಸಭೆಯ ವ್ಯಾಪ್ತಿಗೆ ಒಳಪಡುವ ವಿಚಾರಗಳನ್ನು ಒಳಗೊಂಡಿದೆ. ಆದರೆ, ಬಜೆಟ್‌ಗೆ ಸಂಬಂಧಿಸಿದ ಚರ್ಚೆ ವೇಳೆ ತೆಗೆದುಕೊಳ್ಳುವ ಈ ನಿರ್ಧಾರಗಳಿಗೆ ಶಾಸನಸಭೆಯ ಅಂಗೀಕಾರದ ಅಗತ್ಯ ಇರುವುದಿಲ್ಲ ಎಂದು ಚಿದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments