ಮುಂಬೈ: ಚೀನಾದ ಆರ್ಥಿಕ ಸುಧಾರಣಾ ಪ್ರಸ್ತಾಪ ಹಾಗೂ ಅಮೆರಿಕದ ಉತ್ತೇಜನಾ ಯೋಜನೆಯು ಇನ್ನಷ್ಟು ವಿಸ್ತರಣೆಯಾಗಲಿದೆ ಎಂಬ ನಿರೀಕ್ಷೆಯು ಮುಂಬೈ ಷೇರುಪೇಟೆಯಲ್ಲಿ ಸೋಮವಾರ ದಿಢೀರ್ ಬದಲಾವಣೆಗೆ ಕಾರಣವಾಯಿತು. ಒಂದೆಡೆ ಈ ಕಾರಣದಿಂದಾಗಿ ಸಾಗರೋತ್ತರ ಷೇರುಗಳ ಭಾರಿ ಖರೀದಿ, ಮತ್ತೊಂದೆಡೆ ಸತತ 3ನೇ ದಿನವೂ ರುಪಾಯಿ ಚೇತರಿಕೆ ಕಂಡಿದ್ದರಿಂದ ಸ್ಥಳೀಯ ಹೂಡಿಕೆದಾರರೂ ಖರೀದಿಯಲ್ಲಿ ತೋರಿದ ಉತ್ಸಾಹವು ಷೇರುಪೇಟೆ ಸಂವೇದಿ ಸೂಚ್ಯಂಕ 451 ಅಂಕ ಏರಿಕೆ ದಾಖಲಿಸಲು ಕಾರಣವಾಯಿತು. ದಿನಾಂತ್ಯಕ್ಕೆ ಸೆನ್ಸೆಕ್ಸ್ ಇದು 2 ವಾರಗಳಲ್ಲೇ ಅತ್ಯಧಿಕ ಅಂದರೆ 20,850ರಲ್ಲಿ ಕೊನೆಗೊಂಡಿತು. ಹೀಗಾಗಿ ಹೂಡಿಕೆದಾರರು ಸುಮಾರು ಒಂದು ಲಕ್ಷ ಕೋಟಿಯಷ್ಟು ಲಾಭ ಗಳಿಸಿದರು. ಇದರ ಜತೆಗೇ ನಿಫ್ಟಿ ಕೂಡ 132 ಅಂಕ ಏರಿಕೆಯಾಗಿ, 6,189ರಲ್ಲಿ ಕೊನೆಗೊಂಡಿತು.