ನವದೇಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ದ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಸಂಸದರು ಭಾಗವಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ತಿನ ಆವರಣದಲ್ಲಿನ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕತರೊಂದಿಗೆ, ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧದ ಘೋಷಣಾ ವಾಕ್ಯದ ಬಿತ್ತಿ ಪತ್ರಗಳನ್ನು ಹಿಡಿದು, ಇದೊಂದು ಯು-ಟರ್ನ್ ಸರ್ಕಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.
'ಯು-ಟರ್ನ್ ಸರ್ಕಾರದ 6 ತಿಂಗಳು' ಎಂಬ ಹೆಸರಿನಲ್ಲಿ ಪುಸ್ತಕವೊಂದನ್ನು ಬಿಡುಗಡೆಗೊಳಿಸಿದರು. 30 ಪುಟಗಳ ಪುಸ್ತಕದಲ್ಲಿ, ಅಸ್ತಿತ್ವಕ್ಕೆ ಬಂದ 6 ತಿಂಗಳ ಕೇಂದ್ರ ಸರ್ಕಾರ ತನ್ನ ಹಾದಿ ತಪ್ಪಿದೆ ಎಂಬ ಅಂಶಗಳನ್ನು ಉಲ್ಲೇಖಿಸಲಾಗಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ, ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಇದೊಂದು ಯು-ಟರ್ನ್ ಸರ್ಕಾರ ಎಂದು ಅವರು ಕಿಡಿ ಕಾರಿದರು.