ಬಾರ್ಸಿಲೋನಿಯಾ: ಬಯಸಿ ಬಯಸಿ ಸಾವಿನ ದವಡೆಗೆ ಸಿಲುಕುವುದು ಅಂದರೆ ಇದೇ ಇರಬೇಕು.
ಸ್ಪೇನ್‌ನಲ್ಲೊಬ್ಬ ಇಂಥ ದುಸ್ಸಾಹಸ ಮಾಡಿದ್ದಾನೆ. ಸುಮ್ಮನೆ ಇರುವುದು ಬಿಟ್ಟು ಸಿಂಹ ಇರುವ ಆವರಣಕ್ಕೆ ಹಾಸಿ ಈಗ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ದೆಹಲಿ ಝೂನಲ್ಲಿ ಹುಲಿ ಬಾಯಿಗೆ ಸಿಕ್ಕು ಮೃತಪಟ್ಟ ಯುವಕನ ಘಟನೆಯನ್ನು ನೆನಪಿಸುವಂತಿದೆ ಈ ಪ್ರಸಂಗ.
ಇದಾಗಿದ್ದು ಬಾರ್ಸಿಲೋನಿಯಾ ಪ್ರಾಣಿ ಸಂಗ್ರಹಾಲಯದಲ್ಲಿ. ಇಲ್ಲಿ ಮಿಲಿಟರಿ ಸಮವಸ್ತ್ರದ ವೇಷಧಾರಿಯೊಬ್ಬ ಸಿಂಹದ ಆವರಣದೊಳಗೆ ಹಾರಿದ್ದಾನೆ. ಬಳಿಕ ಮತ್ತೆ ಬೇಲಿ ಹತ್ತಲು ಪ್ರಯತ್ನಿಸಿದ್ದಾನೆ.
ಅಷ್ಟರಲ್ಲಾಗಲೇ ಓಡಿ ಬಂದ ಸಿಂಹಿಣಿಯೊಂದು ಆತನ ಕಾಲು ಹಿಡಿದೆಳೆದು ಹೊಂಡದೊಳಗೆ ಬೀಳಿಸಿದೆ. ತಕ್ಷಣ ಉಳಿದೆರಡು ಸಿಂಹಗಳೂ ಸೇರಿಕೊಂಡಿವೆ. ಮೂರು ಸಿಂಹಗಳ ದಾಳಿಗೆ ಈತ ತೀವ್ರವಾಗಿ ಗಾಯಗೊಂಡಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಪ್ರಾಣಿಸಂಗ್ರಹಾಲಯದ ಸಿಬ್ಬಂದಿ ರಕ್ಷಣೆಗೆ ತೀವ್ರ ಪ್ರಯತ್ನಪಟ್ಟಿದ್ದಾರೆ. ನಂತರ ಸಿಂಹಗಳ ಮೇಲೆ ನೀರು ಹಾಯಿಸಿ ಹೆದರಿಸಲು ಪ್ರಯತ್ನಿಸಿದ್ದಾರೆ.
ಸುಮಾರು 30 ನಿಮಿಷ ಬಳಿಕ ಆತನನ್ನು ಅವುಗಳಿಂದ ರಕ್ಷಿಸಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.