ಮಥುರಾ: ಜನತಾ ಪರಿವಾರದ ಆರು ಘಟಕಗಳ ವಿಲೀನಕ್ಕೆ ಪ್ರಜಾಪ್ರಭುತ್ವದಲ್ಲಿ ಯಾವ ಅರ್ಥವೂ ಇಲ್ಲ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮುಲಾಯಂ ಸಿಂಗ್, ಲಾಲು ಪ್ರಸಾದ್, ನಿತಿಶ್ ಕುಮಾರ್, ಶರದ್ ಯಾದವ್ ಹಾಗೂ ಇತರೆ ನಾಯಕರು ಒಂದೇ ವೇದಿಕೆಗೆ ಬರುವ ನಿರ್ಧಾರಕ್ಕೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ಒಬ್ಬ ನಾಯಕನ ವಿಶ್ವಾಸಾರ್ಹತೆಯು ಆತನ ಬೆಂಬಲಿಗರ ಮೇಲೆ ಅವಲಂಬಿಸಿರುತ್ತದೆ. ಜನತಾ ಪರಿವಾರದವರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆಯೇ ಹೊರತು ಜನರಿಗಾಗಿ ಅಲ್ಲ ಎಂದೂ ಅವರು ಟೀಕಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರ ನೇತೃತ್ವದಲ್ಲಿ ಸಮಾಜವಾದಿ ಪಕ್ಷ, ಜನತಾದಳ (ಜಾತ್ಯತೀತ), ಜನತಾದಳ (ಸಂಯುಕ್ತ) ಹಾಗೂ ರಾಷ್ಟ್ರೀಯ ಲೋಕದಳ ಪಕ್ಷಗಳು ಒಂದೇ ಪಕ್ಷದ ಅಡಿಯಲ್ಲಿ ವಿಲೀನಗೊಳಿಸಲು ಆ ಪಕ್ಷಗಳ ನಾಯಕರು ಇತ್ತೀಚಿಗೆ ನಿರ್ಧರಿಸಿದ್ದರು.