ಕೊಲ್ಕತ್ತಾ: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆ(ಇಸಿಸ್) ಟ್ವೀಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಆರೋಪ ಮೇಲೆ ಬಂಧಿತನಾಗಿರುವ ಮೆಹ್ದಿ ಮಸೂರ್ ಬಿಸ್ವಾಸ್ ಈ ರೀತಿ ಕೆಲಸ ಮಾಡಿದ್ದಾನೆ ಎಂದರೇ ನಂಬಲು ಸಾಧ್ಯವಿಲ್ಲ ಎಂದು ಆತನ ತಂದೆ ಡಾ. ಮೆಕೈಲ್ ಬಿಸ್ವಾಸ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿದ್ದುಕೊಂಡು ಇಸಿಸ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ದೇಶದ್ರೋಹಿ ಸಂದೇಶಗಳನ್ನು ಹಾಕುತ್ತಿದ್ದ ಮೆಹ್ದಿಯನ್ನು ಬೆಂಗಳೂರು ಕ್ರೈಂಬ್ರಾಂಬ್ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸ್ವಾಸ್, ಇದನ್ನು ನಾನು ನಂಬುವುದಿಲ್ಲ. ನನ್ನ ಮಗನನ್ನು ಅವನ ಶತ್ರುಗಳು ಈ ರೀತಿ ರೂಪಿಸಿದ್ದಾರೆ ಎಂದರು.
ಪಶ್ಚಿಮ ಬಂಗಾಳ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಕೆಲಸ ನಿರ್ವಹಿಸಿ ಕಳೆದ ಹತ್ತು ವರ್ಷಗಳ ಹಿಂದೆ ನಿವೃತ್ತಿ ಹೊಂದಿರುವ ಬಿಸ್ವಾಸ್, ನನ್ನ ಮಗ ರೀತಿ ಮಾಡಲು ಸಾಧ್ಯವಿಲ್ಲ. ಆತ ಇಂತ ದೇಶದ್ರೋಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಆತ ಧಾರ್ಮಿಕ ಕುಟುಂಬದಿಂದ ಬಂದವನು ಆತ ನಿರಂತರವಾಗಿ ನಮಾಜ್ ಮಾಡುತ್ತಿದ್ದ ಹಾಗೂ ಧರ್ಮದ ಬಗ್ಗೆ ಉದಾರ ಚಿಂತನೆಗಳನ್ನು ಇಟ್ಟುಕೊಂಡಿದ್ದ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹೋಮಿಯೋಪತಿ ತರಬೇತಿ ಪಡೆಯುತ್ತಿದ್ದ ಕಳೆದ ಮೂರು ತಿಂಗಳ ಹಿಂದೆ ಭೇಟಿ ನೀಡಿ ನವೆಂಬರ್ 25ರಂದು ಪಶ್ಚಿಮಬಂಗಾಳಕ್ಕೆ ಮರಳಿದ್ದೆ ಎಂದು ಹೇಳಿದ್ದಾರೆ.
ಪ್ರತೀ ತಿಂಗಳು ಈತ ಸುಮಾರು 2 ಮಿಲಿಯನ್ ಪ್ರಚೋದನಕಾರಿ ಸಂದೇಶಗಳನ್ನು ಟ್ವಿಟರ್ ಖಾತೆಗೆ ಹಾಕುತ್ತಿದ್ದನು. ಇಸಿಸ್ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿರುವ ವಿಶ್ವಾದ್ಯಂತ ವಿವಿಧ ಪ್ರದೇಶಗಳಲ್ಲಿ ನೆಲೆಗೊಂಡಿರುವ ಸುಮಾರು 17, 700 ಮಂದಿ ಖಾತೆಯನ್ನು ಪ್ರತಿ ನಿತ್ಯ ವೀಕ್ಷಿಸುತ್ತಿದ್ದರು ಮತ್ತು ಆಯಾ ದೇಶಗಳ ಕುರಿತ ಸುದ್ದಿ ಸಮಾಚಾರಗಳನ್ನು ಚರ್ಚೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.