ರಾಂಚಿ/ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಾಲುಗಟ್ಟಿ ಜನತೆ ಮತದಾನದಲ್ಲಿ ತೊಡಗಿದ್ದಾರೆ.
ಉಗ್ರರ ದಾಳಿ ಭೀತಿಯ ಕರಿ ನೆರಳಿನ ನಡುವೆಯೇ ಇಂದು ಕಣಿವೆ ರಾಜ್ಯದ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪ್ರತಿನಿಧಿಸಿರುವ ಸೋನ್ವಾರ್ ಕ್ಷೇತ್ರ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ 18 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಮೊಹಮ್ಮದ್ ಸಯೀದ್ ಸೇರಿ ಒಟ್ಟು 182 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಯ ಹಿನ್ನಲೆಯಲ್ಲಿ ಮತಗಟ್ಟೆ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.
ಇನ್ನು ಮತ್ತು ಜಾರ್ಖಂಡ್ ರಾಜ್ಯದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಜಾರ್ಖಂಡ್ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗಿರಿಡ್ಹಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಸೇರಿದಂತೆ ಒಟ್ಟು 217 ಅಭ್ಯರ್ಥಿಗಳು ಕಣದಲ್ಲಿದ್ದು, ಮೂವರು ಕ್ಯಾಬಿನೆಟ್ ಸಚಿವರು ಕೂಡ ಕಣದಲ್ಲಿದ್ದಾರೆ. 4ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಜಾರ್ಖಂಡ್‌ನ ಒಟ್ಟು 15 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಅತ್ತ ಕಾಶ್ಮೀರದಲ್ಲಿ ಉಗ್ರರ ದಾಳಿ ಭೀತಿ ಇದ್ದರೆ ಇತ್ತ ಜಾರ್ಖಂಡ್‌ನಲ್ಲಿ ನಕ್ಸಲರ ದಾಳಿ ಭೀತಿ ಹಿನ್ನಲೆಯಲ್ಲಿಯೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ 4ನೇ ಹಂತದ ಮತದಾನ ನಡೆಯುತ್ತಿರುವ ಎಲ್ಲ 15 ಕ್ಷೇತ್ರಗಳ 3700 ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಪೈಕಿ ನಕ್ಸಲ್ ಪೀಡಿತ ಪ್ರದೇಶಗಳು ಸೇರಿದಂತೆ ಒಟ್ಟು 716 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಹೀಗಾಗಿ ಇಲ್ಲಿ ಸಿಆರ್‌ಪಿಎಫ್ ಯೋಧರು ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.