ನವಾಡ: ಬಿಹಾರದಲ್ಲಿ ಇಂದು ಕಾರು ಮತ್ತು ರೈಲು ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆ ವೇಳೆ ಸ್ಥಳದಲ್ಲೇ ನಾಲ್ಕು ಮಂದಿ ಸಾವನ್ನಪ್ಪಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉಳಿದವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬಿಹಾರದ ನವಾಡ ಜಿಲ್ಲೆಯಲ್ಲಿನ ವಾರ್ಸಲಿಂಗಜ್ ಮತ್ತು ನವಾಡ ಮಾರ್ಗದಲ್ಲಿನ ಮಾನವ ರಹಿತ ರೈಲ್ವೆ ಕ್ರಾಸಿಂಗ್ ಮೂಲಕ ಇಂದು ಬೆಳಿಗ್ಗೆ 8.55 ಗಂಟೆಯ ಸುಮಾರಿಗೆ ಕಾರು ಒಂದು ಹಳಿ ದಾಟಲು ಮುಂದಾಯಿತು. ಈ ವೇಳೆ ಹೌರಾ ಗಯಾ ಎಕ್ಸ್‌ಪ್ರೆಸ್ ಆ ಮಾರ್ಗವಾಗಿ ಸಂಚರಿಸುತ್ತಿತ್ತು. ರೈಲ್ವೆ ಹಳಿ ದಾಟುತ್ತಿದ್ದ ವೇಳೆ, ರಭಸವಾಗಿ ಬರುತ್ತಿದ್ದ ರೈಲು ಕಾರಿಗೆ ಡಿಕ್ಕಿ ಹೊಡೆಯಿತು.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದವರ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು. ಉಳಿದ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮುಘಲ್‌ಸರಾಯ್ ವಿಭಾಗದ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.