ಸಿಡ್ನಿ: ಸಿಡ್ನಿಯಲ್ಲಿರುವ ಕಾಫಿ ಕೆಫೆ ಒತ್ತೆಯಾಳು ಪ್ರಹಸನ ಅಂತ್ಯವಾಗಿದ್ದು, ಸಾರ್ವಜನಿಕರನ್ನು ಒತ್ತೆಯಾಳುಗಳಾಗಿಟ್ಟುಕೊಂಡಿದ್ದ ಬಂದೂಕುಧಾರಿಯನ್ನು ಹೊಡೆದುರುಳಿಸುವಲ್ಲಿ ಸಿಡ್ನಿ ಭದ್ರತಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ನಿನ್ನೆ ಬೆಳಗ್ಗೆಯಿಂದ ನಡೆಯುತ್ತಿದ್ದ ಕಾರ್ಯಾಚರಣೆ ಸೋಮವಾರ ತಡರಾತ್ರಿ 2.10ರವರೆಗೂ ನಡೆದಿದ್ದು, ನೂರಾರು ಶಸ್ತ್ರಸ್ತ್ರ ಸಜ್ಜಿತ ಪೊಲೀಸರು ಶಂಕಿತ ಉಗ್ರನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ದುರಾದೃಷ್ಟವಶಾತ್ ಕಾರ್ಯಾಚರಣೆ ವೇಳೆ ಇಬ್ಬರು ನಾಗರೀಕರು ಕೂಡ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ನಾಗರೀಕರು ಆಸ್ಟ್ರೇಲಿಯಾ ಮೂಲದವರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಸತತ 15 ಗಂಟೆಗಳ ಪೊಲೀಸರು ಕೊಂಚ ಆತುರ ತೋರಿದ್ದರೂ ಕೋಪೋದ್ರಿಕ್ತನಾಗಿದ್ದ ಶಂಕಿತ ಉಗ್ರ ಸಾಕಷ್ಟು ಒತ್ತೆಯಾಳುಗಳನ್ನು ಕೊಂದುಹಾಕುವ ಸಾಧ್ಯತೆ ಇತ್ತು.
ಹೀಗಾಗಿ ಕೊಂಚ ನಿಧಾನಗತಿಯಲ್ಲಿಯೇ ಕಾರ್ಯಾಚರಣೆ ನಡೆಸಿದ ಸಿಡ್ನಿ ಪೊಲೀಸರು ಕಾರ್ಯಾಚರಣೆಗಾಗಿ ವಿಶೇಷ ಶಸ್ತ್ರಸ್ತ್ರ ಸಜ್ಜಿತ ತಂಡವನ್ನೇ ರವಾನೆ ಮಾಡಿದ್ದರು. ಕಾಫಿ ಕೆಫೆಯನ್ನು ಸುತ್ತುವರಿದ ಭದ್ರತಾ ಪಡೆಗಳು, ಮೊದಲು ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವ ಕಾರ್ಯಕ್ಕೆ ಮುಂದಾದರು. ಪೊಲೀಸರ ಕಾರ್ಯಾಚರಣೆ ಮಾಹಿತಿಯನ್ನು ಅರಿತ ಶಂಕಿತ ಉಗ್ರ ಒಂದೆರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾನೆ.
ಆದರೆ ಪೊಲೀಸರು ಜಗ್ಗದೇ ಇದ್ದಾಗ ಒತ್ತೆಯಾಳುಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ವೇಳೆಗಾಗಲೇ ಸುಮಾರು 5 ಮಂದಿ ಒತ್ತೆಯಾಳುಗಳು ತಪ್ಪಿಸಿಕೊಂಡು ಹೊರ ಬಂದಿದ್ದಾರೆ. ಅಂತಿಮವಾಗಿ ಶಂಕಿತ ಉಗ್ರನನ್ನು ಸುತ್ತುವರಿದ ಭದ್ರತಾ ಪಡೆಗಳು ಆತನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತೀಯ ಮೂಲದ ಟೆಕ್ಕಿಗಳು ಪ್ರಾಣಾಪಾಯದಿಂದ ಪಾರು
ಇದೇ ವೇಳೆ ಕಾಫಿ ಕೆಫೆಯಲ್ಲಿ ಸಿಲುಕಿದ್ದ ಭಾರತೀಯ ಮೂಲದ ಇಬ್ಬರು ಟೆಕ್ಕಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಸಾಫ್ಟವೇರ್ ಉದ್ಯೋಗಿಯಾಗಿ ಸಿಡ್ನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿಶ್ವಕಾಂತ್ ಅಂಕಿರೆಡ್ಡಿ ಸೇರಿದಂತೆ ಮತ್ತೋರ್ವ ಹೆಸರು ತಿಳಿಯದ ಇಬ್ಬರು ಭಾರತೀಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.