ನವದೆಹಲಿ: ಪಾಕಿಸ್ತಾನದ ಪೇಶಾವರದ ಸೇನಾ ಶಾಲೆಯಲ್ಲಿ ಮಂಗಳವಾರ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ದೇಶಾದ್ಯಂತ ಶಾಲೆಗಳಲ್ಲಿ 2 ನಿಮಿಷಗಳ ಮೌನಾಚರಣೆ ನಡೆಸಲಾಗಿದೆ.
ಪೇಶಾವರದಲ್ಲಿ ನಿನ್ನೆ ಸೇನಾ ಶಾಲೆಯನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ್ದ ದಾಳಿಯನ್ನು ಖಂಡಿಸಿ ಇಂದು ದೇಶಾದ್ಯಂತ ಶಾಲೆಗಳಲ್ಲಿ 2 ನಿಮಿಷಗಳ ಮೌನಾಚರಣೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಹಿನ್ನಲೆಯಲ್ಲಿ ಉಗ್ರರ ದಾಳಿಯಲ್ಲಿ ಹತ್ಯೆಗೀಡಾದ ಮಕ್ಕಳ ಸ್ಮರಣಾರ್ಥ ಪ್ರಾರ್ಥನೆ ಸಲ್ಲಿಸಲಾಗಿದೆ.
ನಿನ್ನೆ ಪೇಶಾವರದ ಸೈನಿಕ ಶಾಲೆಗೆ ನುಗ್ಗಿದ್ದ ಉಗ್ರರ ಗುಂಪು ಮನಸೋ ಇಚ್ಛೆ ಗುಂಡಿನ ಮಳೆಗರೆದಿದ್ದರು. ಘಟನೆಯಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 148 ಮಂದಿ ಬಲಿಯಾಗಿದ್ದರು. ಅಲ್ಲದೆ ಈಗಲೂ ಹಲವು ಮಕ್ಕಳು ಮತ್ತು ಸಿಬ್ಬಂದಿಗಳು ಗಂಭೀರವಾಗಿದ್ದಾರೆ. ಅತ್ತ ಪೇಶಾವರದಲ್ಲಿ ಸೈನಿಕ ಕಾರ್ಯಾಚರಣೆ ಮುಗಿಯುತ್ತಿದ್ದಂತೆಯೇ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಕರೆಮಾಡಿ ವಿಷಾಧವನ್ನು ವ್ಯಕ್ತಪಡಿಸಿದ್ದರು.
ನವಾಜ್ ಷರೀಫ್ ಅವರಿಗೆ ರಾತ್ರಿ ಸುಮಾರು 10.30ರ ಸಮಯದಲ್ಲಿ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 'ಉಗ್ರರ ದಾಳಿ ಅತ್ಯಂತ ಹೀನ ಕೃತ್ಯವಾಗಿದ್ದು, ಭಾರತ ಇದನ್ನು ಖಂಡಿಸುತ್ತದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಎಂದಿಗೂ ಪಾಕಿಸ್ತಾನದೊಂದಿಗಿರುತ್ತದೆ' ಎಂದು ಹೇಳಿದ್ದರು.
ಅಲ್ಲದೆ ಪಾಕಿಸ್ತಾನದಲ್ಲಿ ಉಗ್ರರ ಪೈಶಾಚಿಕ ಕೃತ್ಯದಿಂದ ಹತರಾದ ಚಿಣ್ಣರ ಸ್ಮರಣಾರ್ಥ ದೇಶಾದ್ಯಂತ ಶಾಲೆಗಳಲ್ಲಿ 2 ನಿಮಿಷಗಳ ಮೌನಾಚರಣೆ ಸಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ತಮ್ಮ ಟ್ವಿಟರ್ ಖಾತೆಯ ಮೂಲಕ ದೇಶದ ಜನತೆಯಲ್ಲಿ ಮನವಿ ಮಾಡಿದ್ದರು. ಅದರಂತೆ ಇಂದು ದೇಶಾದ್ಯಂತ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.