ದೇಶ

ವಿಮಾ ವಿಧೇಯಕಕ್ಕೆ ಮೇಲ್ಮನೆ ಗದ್ದಲ ಅಡ್ಡಿ

ನವದೆಹಲಿ: ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹಚ್ಚಿಸುವ ವಿಧೇಯಕದ ಅಂಗೀಕಾರಕ್ಕೆ ರಾಜ್ಯಸಭೆಯಲ್ಲಿ ಪ್ರತಿ ಪಕ್ಷಗಳ ಗದ್ದಲವೇ ಅಡ್ಡಿಯಾಗಿದೆ. ಪ್ರತಿಪಕ್ಷಗಳ ಇಂಥ ವರ್ತನೆ ಮಹತ್ವದ ವಿಧೇಯಕವೊಂದು ಅಂಗೀಕಾರವಾಗುವುದನ್ನು ತಡೆಯಲು ನಾವು ಬಿಡುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಶೇ.26ರಿಂದ ಶೇ.49ಕ್ಕೇರಿಸುವ ವಿಧೇಯಕಕ್ಕೆ ಸಂಸತ್ತಿನ ಸ್ಥಾಯಿ ಸಮಿತಿ ಮತ್ತು ರಾಜ್ಯ ಸಭೆಯ ಸಂಸದೀಯ ಸಮಿತಿ ಈಗಾಗಲೇ ಒಪ್ಪಿದೆ. ಇಷ್ಟಾದರೂ ಮೇಲ್ಮನೆಯಲ್ಲಿ ಈ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಪ್ರತಿಪಕ್ಷಗಳ ಈ ರೀತಿಯ ವರ್ತನೆ ಬಹು ಸಂಖ್ಯಾತರ ಬೆಂಬಲವಿರುವ ಸುಧಾರಣೆಯೊಂದಕ್ಕೆ ಅಡ್ಡಿಯಾಗುತ್ತಿದೆ ಎಂದು ಫಿಕ್ಕಿಯ ಕಾರ್ಯಕ್ರಮವೊಂದರಲ್ಲಿ ಜೇಟ್ಲಿ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ರಾಜಕೀಯ ಅಡ್ಡಿಗಳನ್ನು ಮಣಿಸಲು ಸಂವಿಧಾನ ವ್ಯವಸ್ಥೆಯಲ್ಲೇ ಅವಕಾಶ ಇದೆ. ಇನ್ನಷ್ಟು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಈ ರೀತಿಯ ಅಡೆತಡೆಗಳು ತನ್ನಷ್ಟಕ್ಕೆ ನಿವಾರಣೆಯಾಗುತ್ತವೆ ಎಂದು ಹಣಕಾಸು ಸಚಿವ ಹೇಳಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಆಡಳಿತವಿರುವೆಡೆ ರಾಜ್ಯಗಳಲ್ಲಿ ಭಾರಿ ಸೋಲು ಕಾದಿದೆ ಎನ್ನುವ ಸಂದೇಶವನ್ನು ಜೇಟ್ಲಿ ರವಾನಿಸಿದ್ದಾರೆ.

SCROLL FOR NEXT