ದೇಶ

ಕೆಪಿಎಸ್‌ಸಿ ಶಿಫಾರಸಿಗೆ ವಿರೋಧದ ಕೂಗು

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದಿಗೆ ರಾಜ್ಯ ಸರ್ಕಾರ ರಾಜ್ಯ.ಪಾಲರಿಗೆ ಮಾಡಿರುವ ಶಿಫಾರಸಿನ ಬಗ್ಗೆ ವಿರೋಧದ ಕೂಗು ಕೇಳಿ ಬಂದಿದೆ.

ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಸೈಯದ್ ಉಲ್ಫತ್ ಹುಸೇನ್, ಪ್ರೊ.ಗೋವಿಂದಯ್ಯ, ರಫುನಂದನ್ ರಾಮಣ್ಣ ಹಾಗೂ ಡಾ.ರವಿಕುಮಾರ್ ವಿರುದ್ಧ 9 ಪುಟಗಳ ಆಕ್ಷೇಪಣಾ ಹೇಳಿಕೆಯನ್ನು ಸಾಮಾಜಿಕ ಹೋರಾಟಗಾರ ಅಬ್ರಾಹಂ ರಾಜ್ಯಪಾಲರಿಗೆ ಶನಿವಾರ ಸಲ್ಲಿಸಿದ್ದಾರೆ .

ಸರ್ಕಾರದ ಶಿಫಾರಸು ಪತ್ರಕ್ಕೆ ರಾಜ್ಯಪಾಲರಿಂದ ಉತ್ತರ ಬರುವ ಮುನ್ನವೇ ಈ ಪತ್ರ ಸಲ್ಲಿಕೆಯಾಗಿದ್ದು, ರಾಜ್ಯ ಸರ್ಕಾರವನ್ನು ಸಂಕಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ. ಸುದರ್ಶನ್ ಹೊರತು ಪಡಿಸಿ ಉಳಿದ ಸದಸ್ಯರ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಪಟ್ಟಿ ಮಾಡಿ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳನ್ನು ಈ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಬಾಂಬ್ ಸ್ಫೋಟದ ಆರೋಪಿಗೆ ಸಹಕಾರ:
ಮುಂಬೈ ಬಾಂಬ್ ಸ್ಫೋಟದ ಪ್ರಮುಖ ರುವಾರಿ ಟೈಗರ್ ಮೆಮನ್‌ಗೆ ಕಾನೂನು ಬಾಹಿರವಾಗಿ ಗನ್ ಪರವಾನಗಿಯನ್ನು ಸೈಯದ್ ಉಲ್ಫತ್ ಹುಸೇನ್ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಹುಸೇನ್ ವಿರುದ್ಧ ದೂರು ದಾಖಲಾಗಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಕಡತವೇ ಕಾಣೆಯಾದ ಕಾರಣ ಪ್ರಕರಣ ಇಂದಿಗೂ ಬಗೆಹರಿದಿಲ್ಲ.

ಕಡತ ನಾಪತ್ತೆ, ಟೈಗರ್ ಮೆಮನ್ ಹಾಗೂ ಹುಸೇನ್ ಅವರ ಕಾರ್ಯದಕ್ಷತೆಗೆ ಸಂಬಂಧವಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೇ ಸಾಂವಿಧಾನಿಕ ಸಂಸ್ಥೆಗೆ ಸದಸ್ಯರನ್ನಾಗಿ ನೇಮಿಸಲು ಮುಂದಾಗಿರುವುದು ಆಶ್ಚರ್ಯವಾಗಿದೆ ಎಂದು ಅಬ್ರಾಹಂ ಹೇಳಿದ್ದಾರೆ.

ಇನ್ನು ಗೋವಿಂದಯ್ಯ ಹಾಗೂ ಅವರ ಪತ್ನಿ ಗೋಪಮ್ಮ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರ ಕುರಿತಂತೆ ಕ್ರಿಮಿನಲ್ ಮೊಕದ್ದಮೆ ಹೂಡಲು ತಹಸೀಲ್ದಾರ್ ಆದೇಶಿಸಿದ್ದಾರೆ. ಆದರೆ ಕೆಪಿಎಸ್‌ಸಿ ಸದಸ್ಯರಾಗಿ ಶಿಫಾರಸು ಆಗುತ್ತಿದ್ದಂತೆ ಗೋವಿಂದಯ್ಯ ಹೆಸರನ್ನು ಈ ಮೊಕದ್ದಮೆಯಿಂದ ಕೈ ಬಿಡಲಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಗೋಪಮ್ಮ ಅವರು ನಕಲಿ ಪ್ರಮಾಣಪತ್ರ ಬಳಸಿದ್ದರು ಎನ್ನುವುದು ತನಿಖೆಯಲ್ಲಿ ಸಾಬೀತಾಗಿದೆ. ಇಂಥ ಗಂಭೀರ ಆರೋಪಗಳನ್ನು ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದೂ ಅಬ್ರಾಹಂ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.

SCROLL FOR NEXT