ದೇಶ

ಭಾರತದ ಒತ್ತಡಕ್ಕೆ ಮಣಿದು ಮತ್ತೆ ನನ್ನನ್ನು ಬಂಧಿಸಲಾಗಿದೆ: ಲಖ್ವಿ

Mainashree

ಇಸ್ಲಾಮಾಬಾದ್: ಭಾರತದ ಒತ್ತಡಕ್ಕೆ ಮಣಿದು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮತ್ತೆ ಬಂಧಿಸಲಾಗಿದೆ ಎಂದು ಮುಂಬೈ ದಾಳಿ ಮಾಸ್ಟರ್ ಮೈಂಡ್ ಝಕೀವುರ್ ಲಖ್ವಿ ಹೇಳಿದ್ದಾನೆ.

ಇನ್ನೇನು ಜೈಲಿನಿಂದ ಬಿಡುಗಡೆ ಆಗಬೇಕು ಎನ್ನುವಷ್ಟರಲ್ಲಿ ಮತ್ತೆ ಜೈಲು ಸೇರಿದ ಲಖ್ವಿ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಎಫ್‌ಐಆರ್ ದಾಖಲಿಸಲಾಗಿದೆ. ಪಾಕಿಸ್ತಾನ ಸರ್ಕಾರಕ್ಕೆ ಭಾರತ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾನೆ.

ನನ್ನ ವಿರುದ್ಧ ಸುಳ್ಳು ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಬುಧವಾರ ಲಖ್ವಿ ಅರ್ಜಿ ಸಲ್ಲಿಸಿದ್ದಾನೆ.

ಭಾರತದ ಒತ್ತಡಕ್ಕೆ ಮಣಿದು ಪಾಕ್ ಸರ್ಕಾರ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದೆ. ನನ್ನ ಕಕ್ಷಿದಾರನನ್ನು ಜೈಲಿನಲ್ಲೇ ಉಳಿಸಿಕೊಳ್ಳುವ ಹುನ್ನಾರ ನಡೆಸಲಾಗಿದೆ ಎಂದು ಲಖ್ವಿ ಪರ ವಕೀಲ ಹೇಳಿದ್ದಾರೆ.

ಅಪಹರಣ ಪ್ರಕರಣದ ಹೆಸರಲ್ಲಿ 2 ದಿನಗಳ ಮಟ್ಟಿಗೆ ಪಾಕಿಸ್ತಾನ ನ್ಯಾಯಾಲಯ ಲಖ್ವಿಯನ್ನು ಪೊಲೀಸ್ ವಶಕ್ಕೊಪ್ಪಿಸಿತ್ತು.

ಜಾಮೀನಿನ ಮೇಲೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಲಖ್ವಿಯನ್ನು ಸಾರ್ವಜನಿಕ ಭದ್ರತಾ ಆದೈಶದನ್ವಯ ಪಾಕ್ ಸರ್ಕಾರ ಮತ್ತೆ ವಶಕ್ಕೆ ತೆಗೆದುಕೊಂಡಿತ್ತು. ಆದರೆ ಪಾಕ್ ಸರ್ಕಾರದ ಆದೇಶವನ್ನು ತಳ್ಳಿಹಾಕಿದ್ದ ಕೋರ್ಟ್ ಲಖ್ವಿಯನ್ನು ಮಂಗಳವಾರ ಬೆಳಗ್ಗೆ ಬಿಡುಗಡೆಗೊಳಿಸುವಂತೆ ಸೂಚಿಸಿತ್ತು.

ಕೋರ್ಟ್ ಆದೇಶದ ಪ್ರತಿ ಜೈಲಧಿಕಾರಿಯ ಕೈ ಸೇರುವುದಕ್ಕೆ ಮುನ್ನ ಬೇರೊಂದು ಪ್ರಕರಣ ಸಂಬಂಧ ಆತ ಮತ್ತೆ ಜೈಲು ಸೇರುವಂತಾಗಿದೆ. ಮಹಮ್ಮದ್ ಅನ್ವರ್ ಎಂಬಾತನನ್ನು ಅಪಹರಣ ಮಾಡಿದ ಪ್ರಕರಣ ಸಂಬಂಧ ಸೋಮವಾರ ದೂರು ದಾಖಲಾಗಿತ್ತು.

SCROLL FOR NEXT