ನವದೆಹಲಿ: ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ, ಮರಣೋತ್ತರ ಪರೀಕ್ಷೆಗಳಿಂದ ತನಿಖೆ ಮುಂದುವರೆಸಲು ಯಾವುದೇ ಸಹಾಯವಾಗದೆ ನಿಗೂಢ ಬೇಧಿಸಲು ದೆಹಲಿ ಪೊಲೀಸರು, ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ಒಳಗೊಂಡಂತೆ, ಸುನಂದಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ವ್ಯಕ್ತಿಗಳೊಂದಿಗೆ ನಡೆಸಿದ ಸಂಭಾಷಣೆಯ ಮೊರೆಹೋಗಿದ್ದಾರೆ.
ಪುಷ್ಕರ್ ಅವರು ಯಾಹೂ ಮತ್ತು ಗೂಗಲ್ ಸಂಸ್ಥೆಯ ಈಮೇಲ್ ಬಳಸುತ್ತಿದ್ದಿದ್ದರಿಂದ ಆ ಸಂಸ್ಥೆಗಳಿಗೆ, ಹಾಗೆಯೇ ಟ್ವಿಟ್ಟರ್ ಮತ್ತು ಫೇಸ್ ಬುಕ್ ಸಂಸ್ಥೆಗಳಿಗೆ ವಿವರಗಳನ್ನು ಒದಗಿಸಲು ಪೊಲೀಸರು ಪತ್ರ ಬರೆದಿದ್ದಾರೆ.
ಯಾಹೂ ಮತ್ತು ಗೂಗಲ್ ನಿಂದ ಪೊಲೀಸರಿಗೆ ಬೇಕಿದ್ದ ಮಾಹಿತಿ ದೊರೆತಿದ್ದು, ಟ್ವಿಟ್ಟರ್ ಮತ್ತು ಫೇಸ್ ಬುಕ್ ಸಂಸ್ಥೆಗಳು ಪೊಲೀಸರಿಗೆ ನಿಖರವಾಗಿ ಬೇಕಿರುವ ಮಾಹಿತಿ ಏನೆಂದು ಸ್ಪಷ್ಟೀಕರಣವನ್ನು ಕೇಳಿದ್ದಾರೆ.
ಗೂಗಲ್ ಮತ್ತು ಯಾಹೂ ತಾಣಗಳಲ್ಲಿ ವಿವಿಧ ವ್ಯಕ್ತಿಗಳ ಜೊತೆ ಸುನಂದಾ ನಡೆಸಿದ ಈಮೇಲ್, ಚಾಟ್ ಸಂಭಾಷಣೆಯ ಮಾಹಿತಿಯನ್ನು ನೀಡಿರುವ ಈ ಸಂಸ್ಥೆಗಳು, ಸುನಂದಾ ಅವರ ಸಂಪರ್ಕ ಇದ್ದ ವ್ಯಕ್ತಿಗಳ ಐ ಪಿ ವಿಳಾಸಗಳನ್ನು ಕೂಡ ನೀಡಿವೆ.
ಎ ಐ ಐ ಎಂ ಎಸ್ ನಲ್ಲಿ ೩ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ಮಾಡಿ ಇದು ಅಸಹಜ ಸಾವು, ಸುನಂದಾ ಅವರಿಗೆ ವಿಷ ಕೊಟ್ಟು ಸಾಯಿಸಲಾಗಿದೆ ಎಂದು ವರದಿ ನೀಡಿತ್ತು. ಆದರೆ ಯಾವ ರೀತಿಯ ವಿಷ ಎಂದು ಆ ವರದಿ ಹೇಳಿಲ್ಲ. ಸ್ವಾಭಾವಿಕ ಸಾವು ಎಂದು ನಂಬಲಾಗಿದ್ದ ಈ ಪ್ರಕರಣಕ್ಕೆ ಆಗ ತಿರುವು ಸಿಕ್ಕಿತ್ತು. ಪೊಲೀಸರು ವೈದ್ಯರಿಂದಲೂ ಹೆಚ್ಚಿನ ಮಾಹಿತಿ ಕೋರಿದ್ದಾರೆ.