ನವದೆಹಲಿ: ಬುಲೆಟ್ ಟ್ರೈನ್ ಕನಸು ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಇಲಾಖೆ ಕನಿಷ್ಠ ರಾಜಧಾನಿ ಎಕ್ಸ್ ಪ್ರೆಸ್ ವೇಗದಲ್ಲಾದರೂ ಕೆಲಸ ನಿರ್ವಹಿಸಬೇಕೆಂದು ಬಯಸಿದ್ದರು.
ದುರಾದೃಷ್ಟವಶಾತ್ ಸದಾನಂದಗೌಡರು ಮಾತ್ರ ರೈಲ್ವೆ ಇಲಾಖೆಯನ್ನು ಪ್ಯಾಸೆಂಜರ್ ರೈಲಿನ ವೇಗದಲ್ಲಿ ನಿರ್ವಹಿಸಿ ಎಂಬ ದೂರುಗಳು ರೇಸ್ಕೋರ್ಸ್ ರಸ್ತೆಗೆ (ಪ್ರಧಾನಿ ನಿವಾಸ
ಇಲ್ಲೇ ಇರೋದು) ತಲುಪಿದ್ದವು. ಹೀಗಾಗಿ ಸದಾನಂದ ಗೌಡರನ್ನು ರೈಲ್ವೆ ಭವನದಿಂದ ಎತ್ತಂಗಡಿ ಮಾಡಲು ಅವರ ಕಾರ್ಯವೈಖರಿಯ ವೇಗವೂ ಪ್ರಮುಖ ಕಾರಣ. ಆದರೆ, ಇನ್ನೂ ಕೆಲವು ಕಾರಣಗಳಿವೆ.
ಮುಖ್ಯವಾಗಿ ತಮ್ಮ ಸುಧಾರಣಾ ನೀತಿಯನ್ನು ಸಮರ್ಥವಾಗಿ ಜಾರಿಗೊಳಿಸಲು ಸುರೇಶ್ ಪ್ರಭು ಅವರಿಗೊಂದು ಪ್ರಮುಖ ಖಾತೆ ನೀಡಬೇಕಾಗಿತ್ತು. ಹೀಗಾಗಿ ರೈಲ್ವೆಗಿಂತಲೂ ಉತ್ತಮ ಖಾತೆ ಬೇರೆ ಯಾವುದೂ ಇರಲ್ಲಿಲ್ಲ. ನಿತ್ಯ ಕೋಟ್ಯಂತರ ಜನರನ್ನು ತಲುಪುವ ರೈಲ್ವೆ ಇಲಾಖೆ ಸುಧಾರಣೆ ಆದರೆ, ಸರ್ಕಾರಕ್ಕೂ ಉತ್ತಮ ಹೆಸರು ಬರಬಹುದೆಂಬ ಲೆಕ್ಕಾಚಾರ ಪ್ರಧಾನಿಯದ್ದು, ಹಾಗಾಗಿ ರೈಲ್ವೆ ಇಲಾಖೆಯನ್ನು ರಾಜಕಾರಣಿಗಿಂತ ತಂತ್ರಜ್ಞನೊಬ್ಬ ನಿರ್ವಹಿಸುವುದು ಸೂಕ್ತ ಎಂಬ ಕಾರಣಕ್ಕೆ ಸುರೇಶ್ ಪ್ರಬು ಅವರನ್ನು ಚಾಲಕನ ಸ್ಥಾನದಲ್ಲಿ ಕೂರಿಸಿದ್ದಾರೆ. ಹೀಗಾಗಿ ಸದಾನಂದಗೌಡರು ರೈಲ್ವೆ ಭವನ ಬಿಡುವುದು ಅನಿವಾರ್ಯವಾಯ್ತು.
ಹಾಗೆ ನೋಡಿದರೆ ಇದು ಸದಾನಂದಗೌಡರ ಸ್ವಯಂಕತಾಪರಾಧ. ರೈಲ್ವೆ ಬಜೆಟ್ಮಂಡಿಸಿ ಶಹಬ್ಬಾಸ್ಗಿರಿ ಪಡೆದಿದ್ದ ಸದಾನಂದಗೌಡರು ಬಜೆಟ್ ನಂತರ ಅದೇ ಉತ್ಸಾಹ ತೋರಲಿಲ್ಲ. ರೈಲ್ವೆ ಇಲಾಖೆಯ ಆಳ ಅಗಲ ಅರಿಯುವುದಕ್ಕೆ ಅವರಿಗೆ ಮತ್ತಷ್ಟು ಕಾಲಾವಕಾಶ ಬೇಕಿತ್ತೇನೋ? ಆದರೆ, ಎಲ್ಲವನ್ನು ನಾಗಾಲೋಟದಲ್ಲೇ ಕೊಂಡೊಯ್ಯ ಬಯಸುವ ಮೋದಿ ಅವರಿಗೆ ರೈಲ್ವೆ ಯಾಕೋ ಕುಂಟುತ್ತಿದೆ ಅನ್ನಿಸಿದ್ದರೆ ಅದು ಅವರ ತಪ್ಪಲ್ಲ. ಸ್ವತಃ ಸದಾನಂದಗೌಡರ ತಪ್ಪು.
ಕರ್ನಾಟಕದಲ್ಲಿ ಪರ್ಯಾಯ ನಾಯಕತ್ವ ಬೆಳೆಸುವ ದೃಷ್ಟಿಯಿಂದ ಸದಾನಂದಗೌಡರಿಗೆ ರೈಲ್ವೆ ಖಾತೆ ನೀಡಲಾಗಿತ್ತು. ಅದನ್ನು ಸದಾನಂದಗೌಡರು ಸಮರ್ಥವಾಗಿ ನಿರ್ವಹಿಸುತ್ತಾರೆಂಬ
ವಿಶ್ವಾಸವೂ ಮೋದಿ ಅವರಿಗೆ ಇತ್ತು. ಸದಾನಂದಗೌಡರ ಕೌಟುಂಬಿಕ ಸಮಸ್ಯೆಗಳಿಂದಾಗಿ ಅವರು ರೈಲ್ವೆ ಇಲಾಖೆ ಬಯಸುವಷ್ಟು ಸಮಟ ಮತ್ತು ಶ್ರಮ ಎರಡನ್ನೂ ನೀಡಲಾಗಲಿಲ್ಲ.
ಅವರ ಪುತ್ರನ ನಿಶ್ಟಿತಾರ್ಥದ ದಿನ ಯುವತಿ ಮಾಡಿದ ಆರೋಪ, ಅದರ ನಂತರ ಬೆಳವಣಿಗೆಯಿಂದಾಗಿ ಸದಾನಂದಗೌಡರು ಕುಗ್ಗಿ ಹೋಗಿದ್ದರು.
ಇಲಾಖೆಯ ಆಳ-ಅಗಲ ಅರಿಯಲು ಇನ್ನಷ್ಟು ಸಮಯ ಬೇಕಿತ್ತೇ?
ನಂಬಿಕೆ ಉಳಿಸಿಕೊಳ್ಳಲಿಲ್ಲ ಆದರೆ, ಸಚಿವರಾಗುವ ಮುನ್ನ ಇದ್ದ ಆಸ್ತಿ ಸಚಿವರಾದ ನಂತರ ಭಾರಿ ಪ್ರಮಾಣದಲ್ಲಿ ಹೆಚ್ಚಾದ ಪ್ರಕರಣದಲ್ಲಿ ಸದಾನಂದ ಗೌಡರು ಸಿಕ್ಕಿ ಬಿದ್ದರು.
ಸದಾನಂದಗೌಡರು ಮಾಧ್ಯಮಗಳ ಮೂಲಕ ನೀಡಿದ್ದ ಸ್ಪಷ್ಟೀಕರಣವನ್ನು ಜನರು ನಂಬಿದರು. ಆದರೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿ ಅಧಿಕಾರಕ್ಕೆ ಬಂದ ಮೋದಿ ಅವರಿಗೆ ಸದಾನಂದಗೌಡರ ಆಸ್ತಿ ಹೆಚ್ಚಳ ಪ್ರಕರಣ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರಿಂದ ಇರುಸು ಮುರುಸು ಉಂಟು ಮಾಡಿತ್ತು ಎನ್ನಲಾಗಿದೆ.
ಈ ಬಗ್ಗೆ ಸದಾನಂದಗೌಡರು ಸ್ಪಷ್ಟೀಕರಣ ನೀಡುವ ಸಂದರ್ಭದಲ್ಲಿ ಅಮಿತ್ ಶಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. 'ಆಸ್ತಿಗಳ ಮೌಲ್ಯ ಲೆಕ್ಕಾಚಾರ ನಮಗೆ ನೀವು
ಹೇಳಿಕೊಡಬೇಕಿಲ್ಲ' ಎಂದು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಸುರೇಶ್ ಪ್ರಭು ಅವರಿಗೆ ಪ್ರಮುಖ ಖಾತೆ ನೀಡಬೇಕಾದ ಅನಿವಾರ್ಯತೆ ಇಲ್ಲದೇ ಇದ್ದಿದ್ದರೆ ಸದಾನಂದಗೌಡರು ರೈಲ್ವೆ ಭವನದಲ್ಲಿ ಉಳಿಯುತ್ತಿದ್ದರೇನೋ. ಆದರೆ, ಎಲ್ಲಾ ಪರಿಸ್ಥಿತಿಗಳು ಸದಾನಂದಗೌಡರ ವಿರುದ್ಧವಾಗಿಯೇ ಸೃಷ್ಟಿಯಾಗಿವೆ.
ಸದಾನಂದಗೌಡರು ಇಲ್ಲಿ ಚಿಂತಿಸಬೇಕಾದ್ದು ರೈಲ್ವೆ ಖಾತೆ ಕೈ ತಪ್ಪಿತಲ್ಲ ಎಂಬ ಕಾರಣಕ್ಕಾಗಿ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಇಟ್ಟಿದ್ದ ವಿಶ್ವಾಸವನ್ನು ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂಬ ಕಾರಣಕ್ಕೆ. ಎತ್ತಂಗಡಿ ಕಲಿಸಿದ ಪಾಠದಿಂದ ಅವರು ಹೊಸ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿ, ಮತ್ತೆ ಪ್ರಧಾನಿ ಅವರ ವಿಶ್ವಾಸಗಳಿಸಲಿ ಎಂದಷ್ಟೇ ಈಗ ಹೇಳಬಹುದು.
ರೇಣುಕಾಪ್ರಸಾದ್ ಹಾಡ್ಯ