ಅಲಿಘಡ ವಿವಿ ಆವರಣದಲ್ಲಿರುವ ವಿವಾದಿತ ಮೌಲಾನಾ ಅಜಾದ್ ಗ್ರಂಥಾಲಯ 
ದೇಶ

ಅಲಿಘಡ ವಿವಿ ಲೈಬ್ರರಿಗೆ ವಿದ್ಯಾರ್ಥಿನಿಯರೇಕೆ ಹೋಗುವಂತಿಲ್ಲ

ಅಲಿಘಡ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಮಹಿಳಾ ವಿದ್ಯಾರ್ಥಿಗಳೇಕೆ ಹೋಗುವಂತಿಲ್ಲ ಎಂದು ಕೇಂದ್ರ ಸರ್ಕಾರ ಪ್ರಶ್ನಿಸಿದೆ.

ಅಲಿಘಡ: ದೇಶದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಅಲಿಘಡ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಮಹಿಳಾ ವಿದ್ಯಾರ್ಥಿಗಳೇಕೆ ಹೋಗುವಂತಿಲ್ಲ ಎಂದು ಕೇಂದ್ರ ಸರ್ಕಾರ ಪ್ರಶ್ನಿಸಿದೆ.

ಕೇಂದ್ರ ಶಿಕ್ಷಣ ಸಚಿವೆ ಸ್ಮೃತಿ ಇರಾನಿ ಅವರು ಅಲಿಘಡ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಲೆ.ಜ. ಜಮೀರುದ್ದೀನ್ ಶಾ ಅವರನ್ನು ಈ ಕುರಿತು ಪ್ರಶ್ನಿಸಿದ್ದು, ಗ್ರಂಥಾಲಯಕ್ಕೆ ಮಹಿಳಾ ವಿದ್ಯಾರ್ಥಿಗಳನ್ನು ನಿರ್ಬಂಧಿಸುವ ನಿರ್ಧಾರದ ಹಿಂದಿನ ಉದ್ದೇಶವೇನು ಎಂದು ಕೇಳಿದ್ದಾರೆ. ಅಲ್ಲದೆ ಈ ಕುರಿತು ಶೀಘ್ರವೇ ವರದಿ ನೀಡುವಂತೆಯೂ ಸ್ಮೃತಿ ಇರಾನಿ ಸೂಚಿಸಿದ್ದಾರೆ. ಈ ಬಗ್ಗೆ ಸ್ವತಃ ಸ್ಮೃತಿ ಇರಾನಿ ಅವರು ಪತ್ರವೊಂದನ್ನು ಬರೆದಿದ್ದು, ಗ್ರಂಥಾಲಯಕ್ಕೆ ಮಹಿಳಾ ವಿದ್ಯಾರ್ಥಿಗಳನ್ನು ನಿರ್ಬಂಧಿಸುವ ನಿರ್ಧಾರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸಚಿವರು ಕಿಡಿಕಾರಿದ್ದಾರೆ.

ಈ ಹಿಂದೆ ಅಲಿಘಡ ವಿಶ್ವವಿದ್ಯಾಲಯದ ಕುಲಪತಿಗಳಾದ ಲೆ.ಜ. ಜಮೀರುದ್ದೀನ್ ಶಾ ಅವರು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಮೌಲಾನಾ ಅಜಾದ್ ಗ್ರಂಥಾಲಯಕ್ಕೆ ಮಹಿಳಾ ವಿದ್ಯಾರ್ಥಿಗಳು ಬರಬಾರದು ಎಂದು ನಿರ್ಬಂಧ ಹೇರಿದ್ದರು. ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದ ಅವರು, ಗ್ರಂಥಾಲಯದಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ, ಅಲ್ಲಿ ಮಹಿಳಾ ವಿದ್ಯಾರ್ಥಿಗಳಿಗಿಂತಲೂ ನಾಲ್ಕು ಪಟ್ಟು ಹೆಚ್ಚು ಪುರುಷ ವಿದ್ಯಾರ್ಥಿಗಳು ಹಾಜರಿರುತ್ತಾರೆ. ಹೀಗಾಗಿಯೇ ತಾವು ಮಹಿಳಾ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಿದ್ದೇವೆ ಎಂಬ 'ದಡ್ಡತನದ' ಉತ್ತರ ನೀಡಿದ್ದರು.

ಕುಲಪತಿಗಳ ಈ ನಿರ್ಧಾರ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿಗಳನ್ನು ಕೆರಳಿಸಿದ್ದು, ಲೆ.ಜ. ಜಮೀರುದ್ದೀನ್ ಶಾ ಅವರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಕುಲಪತಿಗಳು ಈ ಕೂಡಲೇ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿ ಆವರಣದಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ. ತಮ್ಮ ನಿರ್ಧಾರದ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆಯೇ ಮತ್ತೊಂದು ಹೇಳಿಕೆ ನೀಡಿರುವ ಜಮೀರುದ್ದೀನ್ ಶಾ ಅವರು, ವಿವಿಯ ಗ್ರಂಥಾಲಯದಲ್ಲಿ ಸ್ಥಳಾವಕಾಶದ ಕೊರತೆ ಇದ್ದು, ಮಹಿಳಾ ವಿದ್ಯಾರ್ಥಿಗಳಿಗೂ ಅಲ್ಲಿ ಅವಕಾಶ ಮಾಡಿಕೊಟ್ಟರೆ ವಿದ್ಯಾರ್ಥಿಗಳೇ ತೊಂದರೆ ಸಿಲುಕುತ್ತಾರೆ. ಮಹಿಳಾ ವಿದ್ಯಾರ್ಥಿಗಳು ಬೇಕಿದ್ದರೆ ಮಹಿಳಾ ಕಾಲೇಜಿನ ಗ್ರಂಥಾಲಯವನ್ನು ಬಳಕೆ ಮಾಡಬಹುದಾಗಿದೆ. ಹೀಗಾಗಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಆದರೆ ಕುಲಪತಿಗಳ ಯಾವುದೇ ಹೇಳಿಕೆಯನ್ನು ಒಪ್ಪಿಕೊಳ್ಳದ ಕೇಂದ್ರ ಸರ್ಕಾರ ವಿವಿ ಕುಲಪತಿ ಜಮೀರುದ್ದೀನ್ ಶಾ ಅವರು ವಿರುದ್ಧ ಕೆಂಡಕಾರಿದೆ. ಅಲ್ಲದೆ ಈ ಕುರಿತು ವರದಿ ನೀಡುವಂತೆ ಕೇಳಿದೆ. ಶಿಕ್ಷಣ ಸಚಿವರು ವರದಿ ಕೇಳಿದ ಬೆನ್ನಲ್ಲೇ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಜಮೀರುದ್ದೀನ್ ಶಾ ಅವರು, '1906ರಲ್ಲಿ ಮಹಿಳಾ ಕಾಲೇಜು ನಿರ್ಮಾಣವಾಗಿದ್ದು, ವಿವಿ ಆವರಣದಲ್ಲಿರುವ ಮೌಲಾನ ಅಜಾದ್ ಗ್ರಂಥಾಲಯ ಕೇವಲ ದಶಕಗಳ ಹಿಂದಷ್ಟೇ ನಿರ್ಮಾಣ ಮಾಡಿದ್ದಾಗಿದೆ. ಗ್ರಂಥಾಲಯದಲ್ಲಿ ಕೇವಲ 1.300 ಆಸನಗಳು ಮಾತ್ರ ಇದ್ದು, ಮಹಿಳಾ ಕಾಲೇಜಿನಲ್ಲಿ ಸುಮಾರು 4 ಸಾವಿರ ಪದವಿ ಪೂರ್ವ ವಿದ್ಯಾರ್ಥಿನಿಯರಿದ್ದಾರೆ. ನಾವು ಒಂದು ವೇಳೆ ಈ ಎಲ್ಲಾ ವಿದ್ಯಾರ್ಥಿನಿಯರನ್ನು ಗ್ರಂಥಾಲಯಕ್ಕೆ ಅನುವು ಮಾಡಿಕೊಟ್ಟರೆ ಅಲ್ಲಿ ಸ್ಥಳಾವಕಾಶವೇ ಇಲ್ಲದಂತಾಗುತ್ತದೆ. ಹೀಗಾಗಿ ಸರಳವಾಗಿ ಹೇಳಬೇಕೆಂದರೆ ಮಹಿಳಾ ವಿದ್ಯಾರ್ಥಿಗಳನ್ನು ಗ್ರಂಥಾಲಯಕ್ಕೆ ಅನುವು ಮಾಡಿಕೊಡಲು ಸಾಧ್ಯವಿಲ್ಲ' ಎಂದು ಜಮೀರುದ್ದೀನ್ ಶಾ ಸ್ಪಷ್ಟಪಡಿಸಿದ್ದಾರೆ.

ಕುಲಪತಿಗಳ ಉತ್ತರದಿಂದ ಮತ್ತಷ್ಟು ಕ್ರೋಧಗೊಂಡಿರುವ ವಿದ್ಯಾರ್ಥಿನಿಯರು ನಾವು ಕೂಡ ವಿವಿಯ ವಿದ್ಯಾರ್ಥಿಗಳಾಗಿದ್ದು, ಗ್ರಂಥಾಲಯಕ್ಕೆ ತೆರಳಲು ನಮಗೆ ಅನುಮತಿ ನೀಡಬೇಕು. ಗ್ರಂಥಾಲಯದಲ್ಲಿ ಸ್ಥಳಾವಕಾಶವಿಲ್ಲದಿದ್ದರೆ, ಸರ್ಕಾರದ ಗಮನ ಸೆಳೆದು ಗ್ರಂಥಾಲಯವನ್ನು ವಿಸ್ತರಿಸುವ ಕಾರ್ಯ ಮಾಡಬೇಕಾದ ಕುಲಪತಿಗಳು ವಿದ್ಯಾರ್ಥಿಗಳ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT