ಇಸ್ಲಾಮಾಬಾದ್: ಕಾಶ್ಮೀರ ಪ್ರತ್ಯೇಕವಾದಿ ನಾಯಕರನ್ನು ಬದಿಗೊತ್ತಿ ಶಾಂತಿಯುತ ಮಾತುಕತೆ ಬನ್ನಿ ಎಂದು ಭಾರತ ಆಹ್ವಾನಿಸುತ್ತಿದ್ದರೆ. ಅತ್ತ ಪಾಕಿಸ್ತಾನ ಮತ್ತೆ ತನ್ನ ಹಳೆಯ ವರಸೆಯನ್ನೇ ಮುಂದುವರೆಸಿದೆ.
ಭಾರತದೊಂದಿಗಿನ ಶಾಂತಿ ಮಾತುಕತೆಗೂ ಮುನ್ನ ಕಾಶ್ಮೀರಿ ಪ್ರತ್ಯೇಕವಾದಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಕೊಳ್ಳುವ ಮೂಲಭೂತ ನಂಬಿಕೆ ನಮ್ಮದು. ಅದರಂತೆ ಭಾರತ ವಿದೇಶಾಂಗ ಕಾರ್ಯದರ್ಶಿ ನಡುವೆ ಶಾಂತಿಯುತ ಮಾತುಕತೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಭಾರತ ಇದನ್ನು ರದ್ದುಗೊಳಿಸಿತ್ತು ಎಂದು ನವಾಜ್ ಷರೀಫ್ ಹೇಳಿದ್ದಾರೆ.
ಮುಂದಿನ ವಾರ ನೇಪಾಳದಲ್ಲಿ ಆರಂಭಗೊಳ್ಳಲಿರುವ ಸಾರ್ಕ್ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನವಾಜ್ ಷರೀಫ್ ಭಾಗವಹಿಸಲಿದ್ದು, ಸಭೆಗೂ ಮುನ್ನ ನವಾಜ್ ಷರೀಫ್ ಈ ರೀತಿ ಹೇಳಿಕೆ ನೀಡಿದ್ದಾರೆ.
ಕಾಶ್ಮೀರ ಸಮಸ್ಯೆ ಪರಿಹರಿಸುವ ಮಾತುಕತೆ ಆರಂಭಿಸುವಂತೆ ಭಾರತದ ಮೇಲೆ ಒತ್ತಡ ಹೇರುವ ಪಾತ್ರ ನಿಭಾಯಿಸುವಂತೆ ಅಂತರಾಷ್ಟ್ರೀಯ ಸಮುದಾಯವನ್ನು ನವಾಜ್ ಷರೀಫ್ ಕೇಳಿದ್ದಾರೆ.
ಇದೇ ವೇಳೆ, ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಯೋಧರು ಪಾಕಿಸ್ತಾನದತ್ತ ಗುಂಡಿನ ದಾಳಿ ನಡೆಸುತ್ತಿದ್ದು, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೈನಿಕರು ಪ್ರತ್ಯುತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.