ಪಟ್ನಾ: ದಸರಾ ಆಚರಣೆಗಳ ಅಂಗವಾಗಿ ಇಲ್ಲಿನ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೂವತ್ತೆರಡು ಜನ ಸಾವನ್ನಪ್ಪಿರುವ ಮತ್ತು ಹಲವಾರು ಜನ ಗಾಯಗೊಂಡಿರುವ ದುರ್ಘಟನೆ ಶುಕ್ರವಾರ ಸಂಭವಿಸಿದೆ.
ಸತ್ತವರಲ್ಲಿ ಸುಮಾರು 20 ಜನ ಮಹಿಳೆಯರು ಹಾಗು 5-6 ಮಕ್ಕಳು ಎಂದು ಬಿಹಾರ ಗೃಹ ಕಾರ್ಯದರ್ಶಿ ಅಮಿರ್ ಸುಭಾನಿ ತಿಳಿಸಿದರು.
ದಸರಾದ ಪ್ರಮುಖ ಕಾರ್ಯಕ್ರಮವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಜನರು 'ರಾವಣ ವಧೆ' ಕಾರ್ಯಕ್ರಮವನ್ನು ವೀಕ್ಷಿಸಿ ವಾಪಸ್ಸಾಗುವಾಗ ಈ ದುರಂತ ನಡೆದಿದೆ.
ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಂಜಿ ಅವರು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 60 ಅಡಿ ಎತ್ತರದ ರಾವಣ ಪ್ರತಿಕೃತಿಗೆ ಬಾಣಬಿಟ್ಟು ಅಗ್ನಿಸ್ಪರ್ಶ ಮಾಡುವುದನ್ನು ವೀಕ್ಷಿಸಲು ಜನ ನೆರೆದಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಬಿಹಾರ ಮುಖ್ಯಮಂತ್ರಿ ಜೊತೆ ಮಾತನಾಡಿ ಕಾಲ್ತುಳಿತ ದುರಂತದ ವಿವರಗಳನ್ನು ಪಡೆದುಕೊಂಡರು. ಅವರು ಸತ್ತವರ ಹತ್ತಿರದ ಸಂಬಂಧಿಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.
ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿದ್ಯುತ್ ತಂತಿಯೊಂದು ಕತ್ತರಿಸಿ ಮೈದಾನದಲ್ಲಿ ಬಿದ್ದಿದೆ ಎಂಬ ವದಂತಿಯಿಂದ ಜನ ಗಾಬರಿಗೊಂಡು ಉಂಟಾದ ನೂಕುನುಗ್ಗಲಿನಿಂದ ಕಾಲ್ತುಳಿತ ದುರಂತ ಸಂಭವಿಸಿದೆ.