ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭ್ರಶ್ಟಾಚಾರ ನಿಯಂತ್ರಣಕ್ಕಾಗಿ ರಚನೆ ಮಾಡಲಾಗಿರುವ 1031 ಸಹಾಯವಾಣಿಗೆ ಭಾನುವಾರ ಚಾಲನೆ ನೀಡಿದರು.
ದೆಹಲಿಯಲ್ಲಿ 50 ದಿನಗಳ ಆಡಳಿತ ಪೂರ್ಣಗೊಳಿಸಿರುವ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ನಿಯಂತ್ರಣ ಕ್ಕಾಗಿ ಸಹಾಯವಾಣಿಯೊಂದನ್ನು ಆರಂಭಿಸಿದೆ. ಸರ್ಕಾರಿ ಇಲಾಖೆ ಮತ್ತು ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರಸಮಸ್ಯೆಯನ್ನು ತೊಡೆದುಹಾಕಲು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ 1031 ಎಂಬ ಸಹಾಯವಾಣಿಗೆ ಇಂದು ಚಾಲನೆ ನೀಡಿದ್ದಾರೆ.
ನವದೆಹಲಿಯ ತಲ್‌ಕಟೋರಾ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಸಹಾಯವಾಣಿಗೆ ಚಾಲನೆ ನೀಡಿದರು. ದಿನದ 24 ಗಂಟೆಯೂ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರ ದೂರು ಆಧರಿಸಿ ಅಂತಹ ಅಧಿಕಾರಿಗಳ ಮೇಲೆ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಮಾಡಿಕೊಡಲು ಸರ್ಕಾರಿ ಅಧಿಕಾರಿಗಳು, ಪೊಲೀಸರು ಸೇರಿದಂತೆ ಯಾರಾದರೂ ಲಂಚ ಕೇಳಿದರೆ ಈ ಸಹಾಯವಾಣಿಗೆ ದೂರು ನೀಡಬಹುದು.
ಈ ವೇಳೆ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು, 2013ರ ವಿಧಾನಸಭೆ ಚುನಾವಣೆಯಲ್ಲಿ ಜನತೆಗೆ ಕೊಟ್ಟ ಭರವಸೆಯಂತೆ ನಾವು ಭ್ರಷ್ಟಾಚಾರ ನಿಯಂತ್ರಣಕ್ಕೆ ಸಹಾಯ ವಾಣಿ ಆರಂಭಿಸಿದ್ದೇವೆ. ಇದೊಂದು ಕ್ರಾಂತಿಕಾರಕ ಬೆಳವಣಿಗೆಯಾಗಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಭರವಸೆಯಂತೆ ಸಹಾಯವಾಣಿ ತೆರೆಯಲಾಗಿದೆ. ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಇಲ್ಲವೆ ದೌರ್ಜನ್ಯ ನಡೆಸುವ ಭ್ರಷ್ಟಾಚಾರಕ್ಕೆ ಒತ್ತಡ ಹಾಕಿದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
ಈ ಸಹಾಯವಾಣಿಯು 24/7 ಕಾರ್ಯನಿರ್ವಹಣೆ ಮಾಡಲಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಾರ್ವಜನಿಕರು ದೂರು ನೀಡಬಹುದು. ಇದನ್ನು ನಿರ್ವಹಣೆ ಮಾಡಲು ಅಧಿಕಾರಿಯೊಬ್ಬರನ್ನು ನೇಮಿಸಲಾಗಿದ್ದು, ಹಣ ನೀಡುವಂತೆ ಅಧಿಕಾರಿಗಳು ಒತ್ತಡ ಹಾಕಿದರೆ ಅಂತಹವರ ಆಡಿಯೋ ಮತ್ತು ವಿಡಿಯೋ ದಾಖಲಿಸಿಕೊಂಡು ದೂರು ನೀಡಬೇಕು. 48 ಗಂಟೆಯೊಳಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಜರುಗಿಸುವರು. ಸಾರ್ವಜನಿಕರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.