ನವದೆಹಲಿ: ಯುದ್ಧಪೀಡಿತ ಯೆಮೆನ್ ನಲ್ಲಿ ಅಪಾಯಕ್ಕೆ ಸಿಲುಕಿರುವ ಸಾವಿರಾರು ಭಾರತೀಯರ ಪೈಕಿ ಐಎನ್ ಎಸ್ ಮುಂಬೈ ಯುದ್ಧ ನೌಕೆ ಭಾನುವಾರ ಮತ್ತೆ 260 ಭಾರತೀಯರನ್ನು ರಕ್ಷಿಸಿದೆ.
ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಯೆಮೆನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ 349 ಭಾರತೀಯರನ್ನು ಭಾರತಕ್ಕೆ ಕರೆ ತಂದ ಬೆನ್ನಲ್ಲೆ ಇದೀಗ ಭಾರತೀಯ ನೌಕಾಪಡೆಯ ಐಎನ್ ಎಸ್ ಯುದ್ಧನೌಕೆ ಇಂದು ಮತ್ತೆ 260 ಭಾರತೀಯರನ್ನು ಮತ್ತು 179 ಮಂದಿ ವಿದೇಶಿಗರನ್ನು ರಕ್ಷಿಸಿದೆ. ಅಪಾಯಕ್ಕೆ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಯೆಮೆನ್ ಗೆ ತೆರಳಿರುವ ಐಎನ್ ಎಸ್ ಮುಂಬೈ ಈಗಾಗಲೇ ಕಾರ್ಯಾಚರಣೆಗೆ ಇಳಿದಿದ್ದು, ಅದರ ಫಲವಾಗಿ ಇಂದು 260 ಮಂದಿ ಭಾರತೀಯರನ್ನು ರಕ್ಷಿಸಿದೆ. ಅಷ್ಟೇ ಅಲ್ಲದೆ ಅಪಾಯಕ್ಕೆ ಸಿಲುಕಿದ್ದ ಇತರೆ ದೇಶಗಳ ನಾಗರಿಕರನ್ನು ಕೂಡ ರಕ್ಷಣೆ ಮಾಡುವ ಮೂಲಕ ಭಾರತೀಯ ಸೈನಿಕರು ಇದೀಗ ಯೆಮೆನ್ ನಲ್ಲಿ ಹೀರೋಗಳಾಗಿದ್ದಾರೆ. ದೇಶಗಳ ಗಡಿ ಮೀರಿ ಕೇವಲ ಭಾರತೀಯರನ್ನು ಮಾತ್ರ ರಕ್ಷಣೆ ಮಾಡದೇ ವಿದೇಶಿಗರೆಂಬ ಭೇದಭಾವವಿಲ್ಲದೇ ಎಲ್ಲರನ್ನೂ ರಕ್ಷಣೆ ಮಾಡುತ್ತಿರುವ ಭಾರತೀಯ ಸೈನಿಕರ ಕಾರ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಇಲಾಖೆಯ ವಕ್ತಾರರಾದ ಸೈಯ್ಯದ್ ಅಕ್ಬರುದ್ದೀನ್ ಅವರು, ಭಾರತೀಯರು ಸೇರಿದಂತೆ ಅಪಾಯಕ್ಕೆ ಸಿಲುಕಿದ್ದ ಇತರೆ ದೇಶಗಳ ನಾಗರಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಐಎನ್ಎಸ್ ಮುಂಬೈನಲ್ಲಿದ್ದ ನೌಕಾಪಡೆಯ ವಿಶೇಷ ಸೈನಿಕರು ಕಾರ್ಯಾಚರಣೆ ನಡೆಸಿ 240 ಮಂದಿ ಪುರುಷರು, 121 ಮಂದಿ ಮಹಿಳೆಯರು ಮತ್ತು 80 ಮಕ್ಕಳನ್ನು ರಕ್ಷಿಸಿ ನೌಕೆಗೆ ಕರೆತಂದಿದ್ದಾರೆ.
ಇದರಲ್ಲಿ ಯೆಮೆನ್ ಗೆ ಸೇರಿದ 93 ಮಂದಿ, ಹಂಗೇರಿಗೆ ಸೆರಿದ 4 ಮಂದಿ, ಯುಕೆ-24, ರಷ್ಯಾ-2, ಫ್ರಾನ್ಸ್-8, ಈಜಿಪ್ಟ್-19, ನೇಪಾಳ್-1, ಕೆನಡಾ-2, ಲೆಬೆನಾನ್ ದೇಶದ-3, ಶ್ರೀಲಂಕಾದ ಒಬ್ಬರು, ಮೊರಾಕ್ಕೋ-1, ಸಿರಿಯಾ-2, ಜೋರ್ಡಾನ್-5, ಇಟಲಿ-1, ರೊಮೇನಿಯಾ-2, ಸ್ವೀಡನ್-5 ಮತ್ತು ಅಮೆರಿಕದ-3 ಮಂದಿ ನಾಗರೀಕರನ್ನು ಭಾರತೀಯ ಸೈನಿಕರು ರಕ್ಷಣೆ ಮಾಡಿದ್ದಾರೆ.
ಈಗಾಗಲೇ ಎಲ್ಲರನ್ನು ಡ್ಜಿಬೌಟಿಯತ್ತ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ವಿದೇಶಿಗರು ಸೇರಿದಂತೆ ಅಪಾಯಕ್ಕೆ ಸಿಲುಕಿರುವ ಮತ್ತಷ್ಟು ಮಂದಿಯನ್ನು ರಕ್ಷಿಸುವ ಕಾರ್ಯಕ್ಕೆ ಭಾರತೀಯ ನೌಕಾಪಡೆಯ ಸೈನಿಕರು ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಶನಿವಾರವಷ್ಟೇ ಯೆಮೆನ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ 439 ಮಂದಿ ಭಾರತೀಯರನ್ನು ಅಡೇನ್ ಬಂದರಿನಿಂದ ನೌಕಾಪಡೆಯ ಸೈನಿಕರು ರಕ್ಷಣೆ ಮಾಡಿದ್ದರು. ಅಪರೇಷನ್ ರಾಹತ್ ಎಂಬ ಹೆಸರಿನಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.