ದೇಶ

ಮರಳು ಮಾಫಿಯಾಗೆ ಪೊಲೀಸ್ ಬಲಿ: ಎಸ್ಐಟಿ ತನಿಖೆಗೆ ಮಧ್ಯಪ್ರದೇಶ ಸಿಎಂ ಆದೇಶ

Srinivasamurthy VN

ಭೋಪಾಲ್: ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಹೋಗಿ ಭಾನುವಾರ ಮೃತರಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಧರ್ಮೇಂದ್ರ ಸಿಂಗ್‌ ಚೌಹ್ವಾಣ್‌ ಅವರ ಸಾವಿನ ಪ್ರಕರಣವನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಅವರು ವಿಶೇಷ ತನಿಖಾ ತಂಡಕ್ಕೆ ವಹಿಸಿದ್ದಾರೆ.

ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆ ವೇಳೆ ಲಾರಿ ಚಾಲಕನಿಂದಾಗಿ ಮೃತರಾಗಿದ್ದ ನೂರಬಾದ್‌ ಪೊಲೀಸ್‌ ಠಾಣೆಯ ಮುಖ್ಯಪೇದೆ ಧರ್ಮೇಂದ್ರ ಸಿಂಗ್‌ ಚೌಹ್ವಾಣ್‌ ಅವರ ಕುಟುಂಬಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಅವರು 10 ಲಕ್ಷ ರುಪಾಯಿ ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಅಲ್ಲದೆ ಪ್ರಕರಣದ ತನಿಖೆಯನ್ನು ಎಸ್ಐಟಿ (ವಿಶೇಷ ತನಿಖಾ ದಳ)ಗೆ ವಹಿಸಿದ್ದಾರೆ. ನಿನ್ನೆ ಮಧ್ಯಪ್ರದೇಶದ ದಹನೆಲ್ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪತ್ತೆ ಮಾಡಿದ ಚೌಹಾಣ್‌, ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದರು. ಪೊಲೀಸ್ ದಾಳಿಯಿಂದ ಹೆದರಿದ ಚಾಲಕ ಅಲ್ಲಿಂದ ಪರಾರಿಯಾಗಲು ಯತ್ನಿಸಿ ಲಾರಿಯನ್ನು ಹಿಮ್ಮುಖವಾಗಿ ಓಡಿಸಿದಾಗ, ಹಿಂದೆ ಬರುತ್ತಿದ್ದ ಚೌಹ್ವಾಣ್‌ ಚಕ್ರದ ಅಡಿಗೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.

ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ದೇಶಾಧ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಅಕ್ರಮ ಮರಳು ಮಾಫಿಯಾವನ್ನು ತಡೆಯಲಾಗದ ಸರ್ಕಾರ ಎಂಬ ಟೀಕೆಗೂ ರಾಜ್ಯ ಸರ್ಕಾರ ಒಳಗಾಗಿತ್ತು. ಕೆಲ ಸಾಮಾಜಿಕ ಸಂಘಟನೆಗಳು ಮಧ್ಯಪ್ರದೇಶ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದ ಪರಿಣಾಮ ಇಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಅವರು ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ ವಹಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಅವರು, ಘಟನೆಗೆ ಸಂಬಂಧಿಸಿದಂತೆ ತಾವು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದೇವೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳವನ್ನು ರಚನೆ ಮಾಡಿ ಆ ತಂಡದ ಮೂಲಕ ತನಿಖೆ ನೆಡಯುವಂತೆ ಸೂಚಿಸಿದ್ದೇವೆ. ಅಲ್ಲದೆ ಪ್ರಕರಣ ಸಂಬಂಧ 15 ದಿನಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮೃತ ಪೊಲೀಸ್ ಪೇದೆ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ
ಇದೇ ವೇಳೆ ಮೃತ ಮುಖ್ಯಪೇದೆ ಧರ್ಮೇಂದ್ರ ಸಿಂಗ್‌ ಚೌಹ್ವಾಣ್‌ ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರು.ಗಳನ್ನು ನೀಡುವುದಾಗಿ ಶಿವರಾಜ್ ಸಿಂಗ್ ಚೌಹ್ವಾಣ್ ಘೋಷಣೆ ಮಾಡಿದರು.

SCROLL FOR NEXT