ನವದೆಹಲಿ: ಗುರುವಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ತ್ರಿರಾಷ್ಟ್ರ ಪ್ರವಾಸ ಆರಂಭವಾಗುತ್ತಿದ್ದು, ಫ್ರೆಂಚ್ ಫೈಟರ್ ವಿಮಾನ ರಫೆಲ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಮಾಹಿತಿ ನೀಡದೆ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ.
ಮೋದಿ ಫ್ರಾನ್ಸ್ ಭೇಟಿಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಫ್ರೆಂಚ್ ರಾಯಭಾರಿ ಫ್ರಾಂಕೋಯಿಸ್ ರಿಚ್ಚೆರ್ ಅವರು, ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದರು. ಆದರೆ ಕೋಟ್ಯಾಂತರ ಡಾಲರ್ ಮೌಲ್ಯದ ಖರೀದಿ ಒಪ್ಪಂದ ಕುರಿತು ಯಾವುದೇ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಈ ಮಧ್ಯೆ ಮೂಲಗಳ ಪ್ರಕಾರ, ರಫೆಲ್ ಫೈಟರ್ ಖರೀದಿ ಒಪ್ಪಂದದ ಮಾತುಕತೆ ನಡೆಯುತ್ತಿದ್ದು, ಫ್ರೆಂಚ್ ವಿಮಾನಯಾನ ಕಂಪನಿ 126 ರಫೆಲ್ ಫೈಟರ್ ವಿಮಾನಗಳನ್ನು ಪೂರೈಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಕ್ಷಣಾ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಫ್ರೆಂಚ್ ಕಂಪನಿಗಳು 'ಮೇಕ್ ಇನ್ ಇಂಡಿಯಾ'ದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದು, ಆ ಪೈಕಿ ರಫೆಲ್ ಫೈಟರ್ ಒಪ್ಪಂದ ಪ್ರಮುಖವಾದದ್ದು ಎಂದು ರಿಚ್ಚೆಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಿಂದ 16ರ ವರೆಗೆ ಫ್ರಾನ್ಸ್, ಜರ್ಮನಿ ಹಾಗೂ ಕೆನಡಾ ರಾಷ್ಟ್ರಗಳ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.